Maruti Suzuki: ಬೆಸ್ಟ್ ಕಾರುಗಳಿವು.. ಕೈಗೆಟುಕುವ ಬೆಲೆ, ಆದ್ರೂ ಮಾರಾಟ ಸಂಖ್ಯೆ 1000 ಯುನಿಟ್ ದಾಟುತ್ತಿಲ್ಲ!
ಮಾರುತಿ ಸುಜುಕಿ (Maruti Suzuki) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಅಕ್ಟೋಬರ್‌ನಲ್ಲಿ 1.5 ಲಕ್ಷ ಯುನಿಟ್ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ ಹಾಗೂ ಎಂಪಿವಿಗಳನ್ನು ಮಾರಾಟ ಮಾಡಿದೆ. ಎರ್ಟಿಗಾ (18,785 ಯುನಿಟ್) ಭಾರಿ ಸಂಖ್ಯೆಯಲ್ಲಿ ಮಾರಲ್ಪಟ್ಟ ಕಾರಾಗಿದೆ. ಆದರೆ, ಸಿಯಾಜ್ ಸೆಡಾನ್ ಹಾಗೂ ಇನ್ವಿಕ್ಟೋ ಎಂಪಿವಿ ಮಾರಾಟದಲ್ಲಿ ಮಾತ್ರ ಕಂಪನಿಯು ತೀವ್ರ ಹಿನ್ನೆಡೆ ಅನುಭವಿದೆ. ತಲಾ 1000 ಯುನಿಟ್ ಮಾರಾಟ ಸಂಖ್ಯೆಯನ್ನು ದಾಟಲು ಕೂಡ ವಿಫಲವಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಮಾರುತಿ ಸುಜುಕಿ ಸಿಯಾಜ್ (Maruti Suzuki Ciaz) ಜನಪ್ರಿಯ ಸೆಡಾನ್ ಎಂದೇ ಹೆಸರುವಾಸಿಯಾಗಿದೆ. ಅದರ ಹೊರತಾಗಿಯೂ ಕಳೆದ ತಿಂಗಳು (ಅಕ್ಟೋಬರ್ - 2024) ದಸರಾ ಹಾಗೂ ದೀಪಾವಳಿ ಹಬ್ಬಗಳಿದ್ದರೂ ಈ ಕಾರಿನ ಮಾರಾಟ ಕುಸಿತವಾಗಿದೆ. ಕೇವಲ 659 ಯುನಿಟ್ ಸಿಯಾಜ್ ಸೆಡಾನ್ ಮಾರಾಟವಾಗಿವೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 695 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಮಾರಾಟ ಪ್ರಮಾಣ ಶೇಕಡ 5.18% ಇಳಿಕೆಯಾಗಿದೆ.

ಸದ್ಯ ದೇಶೀಯ ಗ್ರಾಹಕರ ಖರೀದಿಗೆ ಲಭ್ಯವಿರುವ ಹೊಚ್ಚ ಹೊಸ ಸಿಯಾಜ್ ಕಾರು, ರೂ.9.40 ರಿಂದ ರೂ.12.29 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಸಿಗ್ಮಾ, ಡೆಲ್ಟಾ, ಜಿಟಾ ಹಾಗೂ ಆಲ್ಫಾ ಎಂಬ ರೂಪಾಂತರಗಳನ್ನು (ವೇರಿಯೆಂಟ್) ಪಡೆದಿದೆ. ಸೆಲೆಸ್ಟಿಯಲ್ ಬ್ಲೂ, ಡಿಗ್ನಿಟಿ ಬ್ರೌನ್, ಬ್ಲೂಶ್ ಬ್ಲ್ಯಾಕ್ ಮತ್ತು ಗ್ರ್ಯಾಂಡ್ಯೂರ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ಮಾರುತಿ ಸುಜುಕಿ ಸಿಯಾಜ್ ಸೆಡಾನ್ 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 105 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 138 ಎಂಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. 20.04 ರಿಂದ 20.65 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ನೂತನ ಸಿಯಾಜ್ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6-ಸ್ಪೀಕರ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ.
ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ಕೂಡ ಪ್ರಮುಖ ಎಂಪಿವಿಯಾಗಿದೆ. ಈ ಕಾರಿನ ಮಾರಾಟವು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಅಕ್ಟೋಬರ್‌ನಲ್ಲಿ 296 ಯುನಿಟ್ ಇನ್ವಿಕ್ಟೋ ಕಾರುಗಳನ್ನು ಮಾರಾಟಗೊಳಿಸಲು ಮಾತ್ರ ಸಾಧ್ಯವಾಗಿದೆ. 2023ರ ಅಕ್ಟೋಬರ್‌ನಲ್ಲಿ ಮಾರಾಟ ಮಾಡಿದ 478 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 38.08% ಇಳಿಕೆಯಾಗಿದೆ.

ಈ ಇನ್ವಿಕ್ಟೋ ಕಾರು ರೂ.25.21 ಲಕ್ಷದಿಂದ ರೂ.28.92 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. ಜಿಟಾ ಪ್ಲಸ್ ಹಾಗೂ ಆಲ್ಫಾ ಪ್ಲಸ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಪಡೆದಿದೆ. ಮಿಸ್ಟಿಕ್ ವೈಟ್, ನೆಕ್ಸಾ ಬ್ಲೂ ಮತ್ತು ಮೆಜೆಸ್ಟಿಕ್ ಸಿಲ್ವರ್ ಒಳಗೊಂಡಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ. ಇದು 7/ 8 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ.
ನೂತನ ಮಾರುತಿ ಇನ್ವಿಕ್ಟೋ ಎಂಪಿವಿ 2-ಲೀಟರ್ ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಎಂಜಿನ್‌ನ್ನು ಹೊಂದಿದೆ. 186 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 206 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ. 23.24 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಹೊಸ ಇನ್ವಿಕ್ಟೋ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.1-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ಸನ್‌ರೂಫ್, ಫೋನ್ ಚಾರ್ಜಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಇನ್ನು ಸಿಯಾಜ್ ಹಾಗೂ ಇನ್ವಿಕ್ಟೋ ಕಾರುಗಳು ಬಹಳಷ್ಟು ಉತ್ತಮವಾಗಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಆದರೂ ಈ ಕಾರುಗಳ ಪ್ರಮಾಣ ಇಳಿಕೆಯಾಗಿರುವ ಬಗ್ಗೆ ಮಾರುತಿ ಸುಜುಕಿ ಕಂಪನಿಯು ಯಾವುದೇ ನಿಖರವಾದ ಕಾರಣವನ್ನು ಬಹಿರಂಗಪಡಿಸಿಲ್ಲ. ಈ ನವೆಂಬರ್‌ನಲ್ಲಿ ಮಾರಾಟ ಪ್ರಮಾಣ ಒಂದಷ್ಟು ವೃದ್ಧಿಯಾಗುವ ನಿರೀಕ್ಷೆಯಿದೆ.


Click it and Unblock the Notifications