ಮಾರುಕಟ್ಟೆಗೆ ಸುನಾಮಿಯಂತೆ ಅಪ್ಪಳಿಸಲಿದೆ 3 ಮಾರುತಿ ಕಾರುಗಳು: ದುಬಾರಿ ಕಾರು ಕಂಪನಿಗಳಲ್ಲಿ ಭಯ!
ಭಾರತದ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಪ್ರಮುಖವಾದುದು ಮಾರುತಿ ಸುಜುಕಿ ಕಂಪನಿಯ ಕಾರುಗಳು. ಗ್ರಾಹಕರ ಅಭಿರುಚಿಯನ್ನು ಚರನ್ನಾಗಿ ಅರಿತಿರುವ ಈ ಕಾರು ಕಂಪನಿ ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಗಳನ್ನೇ ಸೃಷ್ಟಿಸಲಿದೆ. ಈಗಾಗಲೇ ಕೆಲ ವಾರಗಳ ಹಿಂದೆಯಷ್ಟೇ ಕಂಪನಿ ಮಾರುತಿ ಸುಜುಕಿ ಸ್ವಿಫ್ಟ್ ನಾಲ್ಕನೇ ತಲೆಮಾರಿನ ಕಾರನ್ನು ಲಾಂಚ್ ಮಾಡಿದ್ದು, ಇದರ ಬೆನ್ನಲ್ಲೇ ಮಾರುತಿ ಸುಜುಕಿ ಕಂಪನಿ ಪ್ರಮುಖ ಮೂರು ಕಾರುಗಳನ್ನು ಮಾರುಕಟ್ಟೆಗೆ ತರಲಿದೆ. ಇಂದು ಆ ಮೂರು ಕಾರುಗಳು ಯಾವುದು ಎಂದು ನೊಡೋಣ ಬನ್ನಿ.
ಮಾರುತಿ ಸ್ವಿಫ್ಟ್ ಸಿಎನ್‌ಜಿ: ಕಳೆದ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ ನಾಲ್ಕನೇ ತಲೆಮಾರಿನ 'ಸ್ವಿಫ್ಟ್' ಹ್ಯಾಚ್‌ಬ್ಯಾಕ್‌ನ್ನು ರೂ.6.49 ಲಕ್ಷ ಆರಂಭಿಕ ಬೆಲೆಗೆ (ಎಕ್ಸ್ ಶೋರೂಂ) ಬಿಡುಗಡೆಗೊಳಿಸಿತ್ತು. ಮುಂಬರುವ ದಿನಗಳಲ್ಲಿ ಈ ಕಾರನ್ನು ಸಿಎನ್‌ಜಿ ರೂಪದಲ್ಲಿ ಕೂಡ ಪರಿಚಯಿಸಲು ಕಂಪನಿಯು ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳುತ್ತಿದೆ.

ಸದ್ಯ ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ (Swift CNG) ಕಾರು ಅಭಿವೃದ್ಧಿ ಹಂತದಲ್ಲಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಇದು ಬೈಕ್‌ಗೂ ಮೀರಿಸುವ ಮೈಲೇಜ್‌ನ್ನು ನೀಡಬಹುದು. ಸರಿ ಸುಮಾರು 30.9 ಕೆಎಂ/ಕೆಜಿ ಇಂಧನ ದಕ್ಷತೆ (Fuel Efficiency) ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಈಗಿರುವ ಹೊಸ ಸ್ವಿಫ್ಟ್ ಪೆಟ್ರೋಲ್ ರೂಪಾಂತರ (ವೇರಿಯೆಂಟ್)ಗಳು 24.8 ರಿಂದ 25.72 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತವೆ.
ಮಾರುತಿ ಸುಜುಕಿ ಡಿಸೈರ್: ಭಾರತದಲ್ಲಿ ಮಾರುತಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಎಷ್ಟು ಪ್ರಸಿದ್ದವೋ, ಅಷ್ಟೇ ಇದರ ಸೆಡಾನ್ ಸಹ ಎಲ್ಲರಿಗೂ ಅಚ್ಚು ಮೆಚ್ಚು. ನಿಮಗೆಲ್ಲಾ ತಿಳಿದಿರುವಂತೆ ಮಾರುತಿಯ ಮುಂದಿನ ಬಹುದೊಡ್ಡ ಲಾಂಚ್ ಎಂದರೆ ಅದು ಮಾರುತಿ ಸುಜುಕಿ ಸ್ವಿಫ್ಟ್ ಡಿಸೈರ್ ಫೇಸ್‌ಲಿಫ್ಟ್. ಈಗಾಗಲೇ ಸಾಕಷ್ಟು ಪ್ರಸಿದ್ದಿಯಾಗಿರುವ ಈ ಕಾರು ಮತ್ತಷ್ಟು ಅಪ್‌ಡೇಟ್‌ಗಳೊಂದಿಗೆ ಬರುತ್ತಿದೆ.

ಹೊಸ 2024 ಮಾರುತಿ ಡಿಜೈರ್ ತನ್ನ ಕೆಲವು ವಿನ್ಯಾಸ ಅಂಶಗಳು ಮತ್ತು ವಿಶೇಷಣಗಳನ್ನು ಹೊಸ ಸ್ವಿಫ್ಟ್ ಹ್ಯಾಚ್ ಬ್ಯಾಕ್ ನೊಂದಿಗೆ ಹಂಚಿಕೊಳ್ಳಲಿದೆ. ಸ್ಮಾರ್ಟ್ಫೋನ್ ಕನೆಕ್ಟಿವಿಟಿ, ವೈರ್ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ರಿಯರ್ ಎಸಿ ವೆಂಟ್ಸ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಹೊಸ ಸೀಟ್ ಅಪ್ಹೋಲ್ಸ್ಟರಿ, ನವೀಕರಿಸಿದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಂತಹ ವೈಶಿಷ್ಟ್ಯಗಳು ಇರಲಿವೆ.
ಇವಿಷ್ಟೇ ಅಲ್ಲದೇ ಹಿಂಭಾಗದ ಕ್ಯಾಮೆರಾ, ಪುಶ್ ಬಟನ್ ಸ್ಟಾರ್ಟ್ / ಸ್ಟಾಪ್ ಮತ್ತುಪವರ್ ಅಡ್ಜಸ್ಟ್ ಮಾಡಬಹುದಾದ ಮತ್ತು ಮಡಚುವ ವಿಂಗ್ ಮಿರರ್‌ಗಳೊಂದಿಗೆ ದೊಡ್ಡ ತೇಲುವ 9 - ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಇದು ಪಡೆಯುತ್ತದೆ. ಹೊಸ ಡಿಜೈರ್‌ನ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದ್ರೆ 6 ಏರ್ ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿರುತ್ತದೆ. ಇದು ಇಬಿಡಿಯೊಂದಿಗೆ ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳು, ಐಸೊಫಿಕ್ಸ್ ಆಂಕರ್ ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಸಹ ಹೊಂದಿರಲಿದೆ.

ಮಾರುತಿ ಸುಜುಕಿ ಇವಿಎಕ್ಸ್: ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಮಾರುತಿ ಸುಜುಕಿ ಇಲ್ಲಿಯವರೆಗೆ ಒಂದೇ ಒಂದು ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಇಳಿಸಿಲ್ಲ. 2023ರ ಆಟೋ ಎಕ್ಸ್ಪೋದಲ್ಲಿ ಇವಿಎಕ್ಸ್ ಎಂಬ ಎಲೆಕ್ಟ್ರಿಕ್ ಕಾರನ್ನು ಮಾರುತಿ ಸುಜುಕಿ ಅನಾವರಣಗೊಳಿಸಿತ್ತು ಮತ್ತು ಆದಷ್ಟು ಬೇಗ ಇದು ಮಾರುಕಟ್ಟೆಗೆ ಬರುವುದಾಗಿಯೂ ತಿಳಿದು ಬಂದಿತ್ತು.
ಭಾರತೀಯ ರಸ್ತೆಗಳಲ್ಲಿ ಈ ಕಾರು ಟೆಸ್ಟ್ ರನ್ ಮಾಡುತ್ತಿರುವ ಚಿತ್ರಗಳು ಈ ಹಿಂದೆಯೇ ಸೋರಿಕೆಯಾಗಿತ್ತು. ಈ ಪರೀಕ್ಷಾ ಸಮಯದಲ್ಲಿ ಕಾರಿನ ಕೆಲವು ಚಿತ್ರಗಳು ಹೊರಬಂದಿದ್ದು, ಈ ಚಿತ್ರಗಳು ಕೆಲವು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿವೆ. ಮಾರುತಿ ಇವಿಎಕ್ಸ್ ದೊಡ್ಡ ಇಂಟೀರಿಯರ್, ಹೊಸ 2 - ಸ್ಪೋಕ್ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್ ಕಾಣಿಸಿಕೊಂಡಿದೆ.
ಮಾರುತಿ ಸುಜುಕಿ ಕಂಪನಿಯು ಹೊಸ ಇವಿಎಕ್ಸ್ ಕಾರಿನ ಸಂಪೂರ್ಣ ತಾಂತ್ರಿಕ ವಿಶೇಷತೆಗಳನ್ನು ಬಹಿರಂಗಪಡಿಸಿಲ್ಲ. ನಮಗೆ ತಿಳಿದಿರುವ ಸಂಗತಿಯೆಂದರೆ, ಈ ಮಾದರಿಯು ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾದ 60 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನಿಂದ ಚಾಲನೆಗೊಳ್ಳಲಿದೆ, ಇದು ಸಿಂಗಲ್ ಪೂರ್ಣ ಚಾರ್ಜ್‌ನಲ್ಲಿ 550 ಕಿ.ಮೀ ರೇಂಜ್ ನೀಡಲಿದೆ.


Click it and Unblock the Notifications