ಮಧ್ಯಮ ವರ್ಗದ ಬಜೆಟ್ ಬೆಲೆಯ ಪ್ರೀಮಿಯಂ ಕಾರು 'ಸಿಟ್ರನ್ ಬಸಾಲ್ಟ್': ಬೆಲೆ, ವಿಶೇಷತೆಗಳೇನು?
ಜನಪ್ರಿಯ ಫ್ರೆಂಚ್ ಕಾರು ತಯಾರಕರ ಹೊಸ ಸಿಟ್ರನ್ ಬಸಾಲ್ಟ್ ಕೊನೆಗೂ ಅನಾವರಣಗೊಂಡು ಖರೀದಿದಾರರಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಇದು ಮಾರುಕಟ್ಟೆಯಲ್ಲಿ ಟಾಟಾ ಕರ್ವ್‌ಗೆ ನೇರ ಪ್ರತಿಸ್ಪರ್ಧಿಯಾಗಿದೆ. ಅನಾವರಣ ಬಳಿಕ ಬಾಹ್ಯ ವಿನ್ಯಾಸವನ್ನು ಬಹಿರಂಗಪಡಿಸಲಾಗಿದೆಯಾದರೂ, ಇಂಟೀರಿಯರ್ ಅನ್ನು ಗೌಪ್ಯವಾಗಿ ಇಡಲಾಗಿದೆ. ಉತ್ತಮ ಇಂಟೀರಿಯರ್ ಹಾಗೂ ಪ್ರೀಮಿಯಂ ಫಿಚರ್ಸ್ ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಈ ಕಾರಿನ ಬಗ್ಗೆ ಸದ್ಯ ನಮಗಿರುವ ಮಾಹಿತಿಯನ್ನು ಲೇಖನದಲ್ಲಿ ಹಂಚಿಕೊಳ್ಳಲಾಗಿದೆ. ಸಿಟ್ರನ್‌ನಿಂದ ಈ ಮುಂಬರುವ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ.
ಸದ್ಯ ಭಾರತದಲ್ಲಿ ಎಸ್‌ಯುವಿ ಕೂಪೆ ವಿಭಾಗಕ್ಕೆ ಎಂಟ್ರಿ ಕೊಟ್ಟ ಕಾರುಗಳಾಗಿ ಟಾಟಾ ಕರ್ವ್ ಹಾಗೂ ಸಿಟ್ರನ್ ಬಸಾಲ್ಟ್ ಜನಪ್ರಿಯತೆ ಪಡೆದಿವೆ. ಹೊರ ಭಾಗದ ಒಟ್ಟಾರೆ ವಿನ್ಯಾಸದಲ್ಲಿ ಎರಡೂ ಕಾರುಗಳು ಕೂಪೆ ಶೈಲಿಯಲ್ಲಿ ಒಂದೇ ರೀತಿ ಕಾಣುತ್ತವೆಯಾದರೂ, ತಮ್ಮದೇ ಬ್ರಾಂಡಿಂಗ್ ಡಿಸೈನ್ ಹೊಂದಿವೆ. ಉದಾಹರಣೆಗೆ ಟಾಟಾ ಕರ್ವ್ ಮುಂಭಾಗ ನೆಕ್ಸಾನ್‌ನಂತೆ ಕಾಣುತ್ತದೆ. ಇತ್ತ ಬಸಾಲ್ಟ್ ಫ್ರಂಟ್ ಲುಕ್ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‌ಯುವಿಗೆ ಹೋಲುತ್ತದೆ.

ಅನಾವರಣ ಬಳಿಕ ಬಸಾಲ್ಟ್ ಕಾರಿನ ಡಿಸೈನ್ ಸಂಪೂರ್ಣ ಬಹಿರಂಗವಾಗಿದ್ದು, ಟಾಟಾ ಕರ್ವ್‌ನಂತೆಯೇ ಇದು ಕೂಡ ಎಸ್‌ಯುವಿ ಕೂಪೆ ಸ್ಟೈಲ್‌ನಲ್ಲಿ ಇದೆ. ಹೊಸ ಗ್ರಿಲ್, ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್, ವಿ-ಆಕಾರದ ಸ್ಪ್ಲಿಟ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಪಡೆದಿದೆ. ಆಕರ್ಷಕ ಟೈಲ್‌ಲೈಟ್‌ಗಳು ಹಾಗೂ ಡುಯಲ್-ಟೋನ್ ಅಲಾಯ್ ವೀಲ್‌ಗಳೊಂದಿಗೆ ಸ್ಪೋರ್ಟಿಯಾಗಿ ಕಾಣುತ್ತಿದೆ.
ಬೆಲೆ ಮತ್ತು ಇತರ ಪ್ರತಿಸ್ಪರ್ಧಿಗಳು: ಸಿಟ್ರನ್ ಬಸಾಲ್ಟ್ ಕೂಪೆ ವಿಭಾಗಕ್ಕೆ ಸೇರಿದ್ರೂ, ಬೆಲೆ ಹಾಗೂ ಇನ್ನಿತರ ವಿಷಯಗಳನ್ನು ಆಧರಿಸಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್, ಫೋಕ್ಸ್ ವ್ಯಾಗನ್ ಟೈಗನ್, ಟೊಯೊಟಾ ಹೈರೈಡರ್, ಎಂಜಿ ಆಸ್ಟರ್, ಹೋಂಡಾ ಎಲಿವೇಟ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪರ್ಯಾಯ ಆಯ್ಕೆಯಾಗಲಿದೆ. ಇದರ ಬೆಲೆಗಳು 10 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ)ಪ್ರಾರಂಭವಾಗುವ ಸಾಧ್ಯತೆಯಿದೆ.

ವೈಶಿಷ್ಟ್ಯಗಳು: ಹೊಸ ಎಸ್‌ಯುವಿ ಕೂಪೆಯ ಒಳಾಂಗಣದ ಬಗ್ಗೆ ಸಂಪೂರ್ಣ ವಿವರಗಳಿಲ್ಲದಿದ್ದರೂ, 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ಪುಶ್ ಬಟನ್ ಸ್ಟಾರ್ಟ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ಸ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪವರ್ ವಿಂಡೋಗಳನ್ನು ಹೊಂದಿರುವುದು ಬಹುತೇಕ ಖಚಿತವಾಗಿದೆ.
ಸುರಕ್ಷತೆ: ಸುರಕ್ಷತೆಗೆ ಸಂಬಂಧಿಸಿದಂತೆ, ಇದು 6 ಏರ್ ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಅನ್ನು ಪಡೆಯುವ ನಿರೀಕ್ಷೆಯಿದೆ. ಆಟೋಮ್ಯಾಟಿಕ್ ಎಸಿ, ವೈರ್ ಲೆಸ್ ಫೋನ್ ಚಾರ್ಜರ್, ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಎಂಜಿನ್: ಸಿಟ್ರನ್ ಸಿ3 ಏರ್ ಕ್ರಾಸ್ ಮತ್ತು ಸಿ3 ಹ್ಯಾಚ್ ಬ್ಯಾಕ್‌ನಲ್ಲಿ ಕಂಡುಬರುವ 1.2-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಇದು 110 ಪಿಎಸ್ ಪವರ್ ಮತ್ತು 205 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಯುನಿಟ್‌ನೊಂದಿಗೆ ನೀಡಬಹುದು.
ಹಾಗೆಯೇ ಮತ್ತೊಂದು ಆಯ್ಕೆಯಾಗಿ 1.2 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ನೀಡಲಾಗುತ್ತದೆ. ಇದು 82 ಪಿಎಸ್ ಪವರ್ ಹಾಗೂ 115 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 - ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರ ಪಡೆದಿದೆ.


Click it and Unblock the Notifications








