ಕೈಗೆಟುಕುವ ಬೆಲೆ, ಹತ್ತಾರು ವೈಶಿಷ್ಟ್ಯಗಳು.. ಹೊಸ ಹ್ಯುಂಡೈ ಕ್ರೆಟಾ ಇವಿ ಬಿಡುಗಡೆಗೆ ದಿನಾಂಕ ನಿಗದಿ!
ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಹಾಗೂ ಎಂಜಿ ಮೋಟಾರ್ ಅಧಿಪತ್ಯ ಸಾಧಿಸಿವೆ. ಈ ಕಂಪನಿಗಳು ಮಾರಾಟಗೊಳಿಸುವ ಕಾರುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ಲಭ್ಯವಿವೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಟಾಟಾ ಹಾಗೂ ಎಂಜಿಗೆ ಪ್ರಬಲವಾದ ಸ್ಪರ್ಧೆಯೊಡ್ಡಲು ಹ್ಯುಂಡೈ ಕಂಪನಿಯು ಹೊಚ್ಚ ಹೊಸ ಕ್ರೆಟಾ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.
ಸದ್ಯ ನೂತನ ಹ್ಯುಂಡೈ ಕ್ರೆಟಾ ಇವಿ (Hyundai Creta EV) ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ಈ ಕಾರನ್ನು ಕಂಪನಿಯು ಜನವರಿ 17 ರಂದು ದೆಹಲಿಯಲ್ಲಿ ನಡೆಯುವ '2025ರ ಭಾರತ್ ಮೊಬಿಲಿಟಿ ಎಕ್ಸ್‌ಪೋ'ದಲ್ಲಿ ಮಾರಾಟಕ್ಕೆ ತರಲಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.

ಹ್ಯುಂಡೈ ಕ್ರೆಟಾ ಇವಿ ವಿನ್ಯಾಸ: ಹೊಸ ಕಾರು ಆಕರ್ಷಕವಾದ ವಿನ್ಯಾಸ (ಡಿಸೈನ್) ಹೊಂದಿರುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಪರೀಕ್ಷಾರ್ಥ ಸಂಚಾರ ನಡೆಸುವಾಗ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಫೋಟೋಗಳಿಂದ ಅದು ದೃಢಪಟ್ಟಿದೆ. ನೂತನ ಕ್ರೆಟಾ ಇವಿ ನವೀನವಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಒಳಗೊಂಡಿರುವ ನೀರಿಕ್ಷೆಯಿದೆ.
ಕಾರ್ಯಕ್ಷಮತೆ: ನೂತನ ಹ್ಯುಂಡೈ ಕ್ರೆಟಾ ಇವಿ ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿರುವ ಸಾಧ್ಯತೆಯಿದೆ. ಈ ಎಲೆಕ್ಟ್ರಿಕ್ ಕಾರು 45 ಅಥವಾ 50 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಒಳಗೊಂಡಿರಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 400 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡಲಿದೆ ಎಂದು ಹೇಳಲಾಗಿದೆ.

ವೈಶಿಷ್ಟ್ಯಗಳು: ಈ ಕಾರು ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ನೀರಿಕ್ಷೆಯಿದೆ. ಪ್ರಮುಖವಾಗಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರಲಿದೆ ಎನ್ನಲಾಗಿದೆ.
ಸುರಕ್ಷತಾ ವೈಶಿಷ್ಟ್ಯಗಳು: ಹೊಸ ಹ್ಯುಂಡೈ ಕ್ರೆಟಾ ಇವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ಲೆವೆಲ್-2 (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.
ಬೆಲೆ & ಪ್ರತಿಸ್ಪರ್ಧಿ ಕಾರುಗಳು: ಈ ಹ್ಯುಂಡೈ ಕ್ರೆಟಾ ಇವಿ ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ ಎಂದು ಹೇಳಲಾಗಿದೆ. ರೂ.20 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ನೂತನ ಎಲೆಕ್ಟ್ರಿಕ್ ಕಾರಿಗೆ ಟಾಟಾ ಕರ್ವ್, ಎಂಜಿ ವಿಂಡ್ಸರ್ ಹಾಗೂ ಮುಂಬರಲಿರುವ ಮಾರುತಿ ಸುಜುಕಿ ಇ-ವಿಟಾರಾಗಳು ಪ್ರಬಲವಾದ ಎದುರಾಳಿಯಾಗಲಿವೆ.
ಇನ್ನು, ಹೊಸ ಹ್ಯುಂಡೈ ಕ್ರೆಟಾ ಇವಿ ಮೇಲೆ ಗ್ರಾಹಕರು ಕೂಡ ದೊಡ್ಡಮಟ್ಟದ ನೀರಿಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಎಲೆಕ್ಟ್ರಿಕ್ ಕಾರು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯದೊಂದಿಗೆ ಮಾರಾಟಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ನೂತನ ಕ್ರೆಟಾ ಇವಿ ಬಿಡುಗಡೆಯಾದ ಮೇಲೆ ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








