ಮೂಗು ಮುರಿಯುವವರಿಗೆ ತಕ್ಕ ಉತ್ತರ: 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದ ಹೊಸ ಮಾರುತಿ ಡಿಜೈರ್: ನ.11ಕ್ಕೆ ಬಿಡುಗಡೆ
ಮಾರುತಿ ಸುಜುಕಿ ಇಂಡಿಯಾ (Maruti Suzuki India), ನವೆಂಬರ್ 11 ರಂದು ಹೊಚ್ಚ ಹೊಸ ನಾಲ್ಕನೇ ತಲೆಮಾರಿನ ಡಿಜೈರ್ (4th Generation Dzire) ಸೆಡಾನ್ ಬಿಡುಗಡೆಗೊಳಿಸಲು ದಿನಾಂಕ ನಿಗದಿಪಡಿಸಿದೆ. ಈ ಕಾರಿನ ಮೇಲೆ ಗ್ರಾಹಕರಿಗೂ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಸದ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಗ್ಲೋಬಲ್ ಎನ್‌ಸಿಎಪಿ (Global NCAP), ನೂತನ ಡಿಜೈರ್‌ನ್ನು ಅತ್ಯಂತ ಸುರಕ್ಷಿತ ಕಾರೆಂದು ನಿರ್ಣಯಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಕಾರೊಂದು 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆಯಲು ಯಶಸ್ವಿಯಾಗಿದೆ.
ಮಾರುತಿ ಸುಜುಕಿ ಡಿಜೈರ್ (Maruti Suzuki Dzire), ಗ್ಲೋಬಲ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 34ಕ್ಕೆ 31.24 ಅಂಕಗಳನ್ನು ಗಳಿಸುವ ಮೂಲಕ 5-ಸ್ಟಾರ್ ರೇಟಿಂಗ್ ಪಡೆದಿದೆ. ಅದೇ ರೀತಿಯಲ್ಲಿ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 42ಕ್ಕೆ 39.20 ಅಂಕಗಳನ್ನು ಪಡೆದು 4-ಸ್ಟಾರ್ ರೇಟಿಂಗ್‌ನ್ನು ತನ್ನದಾಗಿಸಿಕೊಂಡಿದೆ.

ಪ್ರಯಾಣಿಕರ ರಕ್ಷಣೆಗಾಗಿ ನೂತನ 'ಮಾರುತಿ ಸುಜುಕಿ ಡಿಜೈರ್' ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಗ್ಲೋಬಲ್ ಎನ್‌ಸಿಎಪಿ ಈ 5-ಸ್ಟಾರ್ ಸೇಫ್ಟಿ ರೇಟಿಂಗ್ ನೀಡಿದೆ. ನೂತನ ಕಾರು, 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಒಳಗೊಂಡಿರುವುದು ದೃಢಪಟ್ಟಿದೆ. ಈ ಹಿಂದೆ ಮೂರನೇ ತಲೆಮಾರಿನ (Third-Generation) ಅಥವಾ ಸದ್ಯ ಖರೀದಿಗೆ ದೊರೆಯುತ್ತರುವ ಡಿಸೈರ್, 2-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಮಾತ್ರ ಪಡೆದಿತ್ತು.
ಹೊಸ ಮಾರುತಿ ಸುಜುಕಿ ಡಿಜೈರ್, ಸ್ವಿಫ್ಟ್ ಕಾರಿನಂತೆಯೇ ಜಡ್12ಇ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 81.58 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 111.7 ಎನ್ಎಂ (ನ್ಯೂಟನ್ ಮೀಟರ್) ಉತ್ಪಾದಿಸಲಿದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೂ ಸಿಗಲಿದೆ. ಜೊತೆಗೆ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿರಲಿದೆ ಎಂಬುದು ಬಹುತೇಕ ಖಚಿತವಾಗಿದೆ.

ನೂತನ ಡಿಜೈರ್ ಕಾರು ಇನ್ಫೋಟೈನ್‌ಮೆಂಟ್ ಸ್ಕ್ರೀನ್ (9-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋ ಕ್ಲೇಮೇಟ್ ಕಂಟ್ರೋಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಅರ್ಕಾಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್, ಯುಎಸ್‌ಬಿ ಟೈಪ್-ಎ & ಟೈಪ್-ಸಿ ಪೋರ್ಟ್, ಸನ್‌ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯೂ ಇದೆ.
ಈ ಸೆಡಾನ್ 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ. ಸರಿ ಸುಮಾರು ರೂ.6.70 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಬುಕ್ಕಿಂಗ್ ಶುರುವಾಗಿದ್ದು, ಆಸಕ್ತ ಗ್ರಾಹಕರು ಡಿಜೈರ್ ಸೆಡಾನ್‌ನ್ನು ಸಮೀಪದ ಶೋರೂಂ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ರೂ.11,000 ಮುಂಗಡವಾಗಿ ಪಾವತಿಸುವ ಮೂಲಕ ಬುಕ್ಕಿಂಗ್ ಮಾಡಬಹುದು.
ಒಟ್ಟಾರೆಯಾಗಿ ಮಾರುತಿ ಸುಜುಕಿ ಕಂಪನಿ ಡಿಜೈರ್ ಕಾರಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಇದರಿಂದ ಗ್ರಾಹಕರಿಗೆ ಕಂಪನಿ ಮೇಲಿನ ವಿಶ್ವಾಸ ಹಿಮ್ಮಡಿಯಾವುದರಲ್ಲಿ ಎರಡು ಮಾತಿಲ್ಲ. ಮುಂಬರುವ ದಿನಗಳಲ್ಲಿ ಮತ್ತಷ್ಟು ಮಾರುತಿ ಕಾರುಗಳು ಸಹ ಗರಿಷ್ಠ ರಕ್ಷಣಾತ್ಮಕ ವೈಶಿಷ್ಟ್ಯಗಳೊಂದಿಗೂ ಮಾರಾಟಕ್ಕೆ ಬಂದರೂ ಅಚ್ಚರಿಯಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications