5-ಸ್ಟಾರ್ ಸೇಫ್ಟಿ ರೇಟಿಂಗ್‌ನ ನೂತನ ಮಾರುತಿ ಡಿಜೈರ್ ಕಾರಿನ ಮೊದಲ ಅಪಘಾತ ವರದಿ.. ಏನಾಯ್ತು?
ಮಾರುತಿ ಸುಜುಕಿ ಇಂಡಿಯಾ (Maruti Suzuki India) ನ.11ರಂದು 4ನೇ ತಲೆಮಾರಿಗೆ ಸೇರಿದ ನೂತನ ಡಿಜೈರ್ (4th Generation Dzire) ಸೆಡಾನ್‌ನ್ನು ಮಾರಾಟಕ್ಕೆ ತಂದಿತ್ತು. ದೇಶಾದ್ಯಂತ ಈ ಕಾರಿನ ವಿತರಣೆಯೂ ಶುರುವಾಗಿದೆ. ಇದು 'ಗ್ಲೋಬಲ್ ಎನ್‌ಸಿಎಪಿ'ಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದ ಮೊದಲ ಕಾರು ಎಂಬ ಹಿರಿಮೆಗೂ ಪಾತ್ರವಾಗಿದೆ. ಇತ್ತೀಚೆಗೆ ಮೊದಲ ಡಿಜೈರ್ ಕಾರು ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ಈ ಕುರಿತ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಹೊಚ್ಚ ಹೊಸ ಮಾರುತಿ ಸುಜುಕಿ ಡಿಜೈರ್ ಸೆಡಾನ್‌ನ ಹಿಂಭಾಗದ ಡೋರ್‌ಗೆ ಆಟೋ ರಿಕ್ಷಾವೊಂದು ಬಂದು ಗುದ್ದಿದ್ದು, ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಸಣ್ಣಪುಟ್ಟ ಗಾಯಗಳು ಕೂಡ ಆಗಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಇತರೆ ಕಂಪನಿಗಳಿಗೆ ಹೋಲಿಕೆ ಮಾಡಿ, ಇದು ದೊಡ್ಡ ಪ್ರಮಾಣದ ಹಾನಿ ಎಂದು ಹೇಳುತ್ತಿರುವುದನ್ನು ನೋಡಬಹುದು.

ಈ ಅಪಘಾತ ಹೇಗೆ ಸಂಭವಿಸಿತು.. ಒಂದೊಮ್ಮೆ ಆಟೋ ರಿಕ್ಷಾ ಗರಿಷ್ಠ ವೇಗದಲ್ಲಿ ಬಂದು ಡಿಕ್ಕಿ ಹೊಡೆಯಿತೆ.. ಇಲ್ಲವೇ ಕಾರು ಚಾಲಕನ ತಪ್ಪೇ ಎಂಬುದನ್ನು ತಿಳಿಸಲು ಯಾವುದೇ ಪ್ರತ್ಯಕ್ಷದರ್ಶಿಗಳು ಮಾತನಾಡಿಲ್ಲ. ಇದರಿಂದ ಆ ವ್ಯಕ್ತಿ ಹೇಳುವುದು ಎಲ್ಲವು ನಿಜವೆಂಬ ನೇರ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅದರ ಸತ್ಯಾಸತ್ಯತೆ ಪರಿಶೀಲಿಸಿದಾಗ ಮಾತ್ರ ಸ್ಪಷ್ಟವಾದ ಉತ್ತರ ಸಿಗಲಿದೆ.
ಯಾವುದೇ ಕಾರುಗಳ ಸುರಕ್ಷತೆ ಎಂಬುದು ಅದರ 'ಬಾಡಿ'ಯನ್ನು ಅವಲಂಭಿಸಿರುವುದಿಲ್ಲ. ಇದರೊಂದಿಗೆ ಚಾಸಿಸ್ ಹಾಗೂ ಆ ಕಾರು ಹೊಂದಿರುವ ಏರ್‌ಬ್ಯಾಗ್ ಸೇರಿದಂತೆ ಇತರೆ ರಕ್ಷಣಾತ್ಮಕ ಸಾಧನಗಳಿಂದಲೂ ನಿರ್ಣಯಿಸಲಾಗುತ್ತದೆ. ಇವೆಲ್ಲ ಮಾನದಂಡಗಳನ್ನು ಪೂರೈಸಿದ ನಂತರವಷ್ಟೇ ವಾಹನಗಳ ಸುರಕ್ಷತಾ ಪರೀಕ್ಷೆ ನಡೆಸುವ 'ಗ್ಲೋಬಲ್ ಎನ್‌ಸಿಎಪಿ'ಯಂತಹ ಸಂಸ್ಥೆಗಳು ಸ್ಟಾರ್ ರೇಟಿಂಗ್ ನೀಡುತ್ತವೆ.

'ಗ್ಲೋಬಲ್ ಎನ್‌ಸಿಎಪಿ' ಈ ಮಾರುತಿ ಸುಜುಕಿ ಡಿಜೈರ್ ಸೆಡಾನ್‌ನ್ನು ವಿವಿಧ ಪ್ರಮಾಣೀಕೃತ ಪರೀಕ್ಷೆಗೆ ಒಳಪಡಿಸಿ, ಸ್ಟಾರ್ ಸೇಫ್ಟಿ ರೇಟಿಂಗ್ ನೀಡಿದೆ. ಈ ಕಾರು ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 31.24 ಅಂಕಗಳನ್ನು ಪಡೆಯುವುದರೊಂದಿಗೆ 5 - ಸ್ಟಾರ್ ರೇಟಿಂಗ್ ಗಳಿಸಲು ಯಶಸ್ವಿಯಾಗಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 42ಕ್ಕೆ 39.20 ಅಂಕಗಳನ್ನು ಗಳಿಸಿ 4 - ಸ್ಟಾರ್ ರೇಟಿಂಗ್‌ನ್ನು ಪಡೆದಿದೆ.
ನೂತನ ಮಾರುತಿ ಸುಜುಕಿ ಡಿಜೈರ್ ಸೆಡಾನ್ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6 - ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ 3 - ಪಾಯಿಂಟ್ ಸೀಟ್ ಬೆಲ್ಟ್‌ಗಳನ್ನು ಹೊಂದಿದೆ.
ಡಿಜೈರ್ ಕಾರಿನ ವಿಶೇಷತೆಗಳೇನು: ಈ ಕಾರು, ರೂ.6.79 ಲಕ್ಷದಿಂದ ರೂ.10.14 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ & ಸಿಎನ್‌ಜಿ ಎಂಜಿನ್ ಒಳಗೊಂಡಿದ್ದು, 24.79 ರಿಂದ 33.73 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಮಂದಿ ಪ್ರಯಾಣಿಸಬಹುದು. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications