Tata: ಪ್ರತಿಸ್ಪರ್ಧಿಗಳಿಗೆ ನಡುಕ.. ಮತ್ತೊಂದು ಹೊಸ ಲಕ್ಷುರಿ ಕಾರಿನ ಬಿಡುಗಡೆಗೆ 'ಟಾಟಾ' ತಯಾರಿ, ಯಾವುದು ಗೊತ್ತಾ?
ಟಾಟಾ ಮೋಟಾರ್ಸ್ (Tata Motors) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಪ್ರತಿವರ್ಷ ಒಂದಿಲ್ಲೊಂದು ಹೊಸ ಕಾರುಗಳನ್ನು ಬಿಡುಗಡೆಗೊಳಿಸುತ್ತಿರುತ್ತದೆ. ಇತ್ತೀಚೆಗೆ, ಮಾರಾಟಕ್ಕೆ ತಂದಿದ್ದ 'ಕರ್ವ್' ಕೂಪೆ ಎಸ್‌ಯುವಿ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸುತ್ತಿದೆ. ಮುಂದಿನ ವರ್ಷ (2025) ಟಾಟಾ ಕಂಪನಿಯು ಹ್ಯಾರಿಯರ್ ಇವಿ ಹಾಗೂ ಸಿಯೆರಾ ಇವಿಯನ್ನು ಪರಿಚಯಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ, ಈ ಸಿಯೆರಾ ಎಲೆಕ್ಟ್ರಿಕ್ ಕಾರನ್ನು ಇಂಧನ ಚಾಲಿತ ರೂಪದಲ್ಲಿಯೂ ಮಾರಾಟಕ್ಕೆ ತರಲು ಯೋಜಿಸಿದೆ ಎಂದು ವರದಿಯಾಗಿದೆ.
ದೆಹಲಿಯಲ್ಲಿ ನಡೆದ 2023ರ ಆಟೋ ಎಕ್ಸ್‌ಪೋದಲ್ಲಿಯೇ ಟಾಟಾ ಸಿಯೆರಾ ಇವಿಯ ಕಾನ್ಸೆಪ್ಟ್ ಮಾಡೆಲ್‌ನ್ನು ಅನಾವರಣಗೊಳಿಸಲಾಗಿತ್ತು. ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಹೊಚ್ಚ ಹೊಸ ಸಿಯೆರಾ ಇವಿ 2025ರ ದ್ವಿತೀಯಾರ್ಧದಲ್ಲಿ ಮಾರಾಟಕ್ಕೆ ಬರಲಿದೆ. ಆ ಬಳಿಕ, ಒಂದೆರೆಡು ತಿಂಗಳ ಅಂತರದಲ್ಲಿ ಇಂಧನ ಚಾಲಿತ (ಪೆಟ್ರೋಲ್/ಡೀಸೆಲ್) ಸಿಯೆರಾ ಎಸ್‌ಯುವಿ ಕೂಡ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.

ನೂತನ ಇಂಧನ ಚಾಲಿತ ಸಿಯೆರಾ ಕಾರು, ಹ್ಯಾರಿಯರ್ ಹಾಗೂ ಸಫಾರಿ ಎಸ್‌ಯುವಿಗಳು ಹೊಂದಿರುವಂತೆ ಶಕ್ತಿಯುತವಾದ 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇದರೊಟ್ಟಿಗೆ 1.5-ಲೀಟರ್ ಟಿ-ಜಿಡಿಐ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೂ ಮಾರಾಟಕ್ಕೆ ಬರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಕಂಪನಿ ಕಡೆಯಿಂದ ಈ ಕುರಿತಂತೆ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ.
ಮುಂಬರಲಿರುವ ಟಾಟಾ ಸಿಯೆರಾ ಇವಿ (Tata Sierra Ev) ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಕಾರು ರೂ.25 ಲಕ್ಷ (ಎಕ್ಸ್ ಶೋರೂಂ) ಆಸುಪಾಸಿನಲ್ಲಿ ಖರೀದಿಗೆ ದೊರೆಯುವ ನಿರೀಕ್ಷೆಯಿದೆ. ಬೃಹದಾಕಾರದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿರಬಹುದು. ಜೊತೆಗೆ ಸಂಪೂರ್ಣ ಚಾರ್ಜ್‌ನಲ್ಲಿ 500 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡಬಹುದು ಎಂದು ಹೇಳಲಾಗಿದೆ.
ಈ ನೂತನ ಸಿಯೆರಾ ಇವಿ 5 ಆಸನ (ಸೀಟ್) ಆಯ್ಕೆ ವ್ಯವಸ್ಥೆಯಲ್ಲಿ ಲಭ್ಯವಾಗಲಿದೆ. ಡುಯಲ್ - ಡಿಜಿಟಲ್ ಡಿಸ್‌ಪ್ಲೇ, ಪನೊರೊಮಿಕ್ ಸನ್‌ರೂಫ್, ಕನೆಕ್ಟ್ಡ್ ಕಾರ್ ಟೆಕ್, 6 ಏರ್‌ಬ್ಯಾಗ್‌ಗಳು ಮತ್ತು ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ.
ಟಾಟಾ ಮೋಟಾರ್ಸ್, ನೂತನ ಹ್ಯಾರಿಯರ್ ಇವಿಯನ್ನು ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ಈ ಕಾರನ್ನು 2025ರ ಮಾರ್ಚ್‌ನಲ್ಲಿ ಮಾರಾಟಕ್ಕೆ ತರುವ ನಿರೀಕ್ಷೆಯಿದೆ. ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‌ಯುವಿ ಸಹ ದೊಡ್ಡ ಗಾತ್ರದ ಬ್ಯಾಟರಿ ಪ್ಯಾಕ್ ಒಳಗೊಂಡಿರಲಿದ್ದು, ಭರ್ತಿ ಚಾರ್ಜ್‌ನಲ್ಲಿ 500 ಕಿಲೋಮೀಟರ್‌ವರೆಗೂ ಓಡುತ್ತದೆ ಎನ್ನಲಾಗಿದೆ. ಇದು ರೂ.30 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ತಿಳಿದುಬಂದಿದೆ.
ಟಾಟಾ ಹ್ಯಾರಿಯರ್ ಇವಿ ಹೊರಭಾಗದಲ್ಲಿ ಅತ್ಯಾಧುನಿಕ ವಿನ್ಯಾಸ ಹೊಂದಿರಲಿದ್ದು, 5 ಆಸನದೊಂದಿಗೆ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡುಯಲ್ - ಜೋನ್ ಆಟೋಮೆಟಿಕ್ ಎಸಿ, ಫೋನ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿರಲಿದೆ. ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ಒಟ್ಟಾರೆಯಾಗಿ ಟಾಟಾ ಕಂಪನಿಯು ಸಾಲು, ಸಾಲು ಕಾರುಗಳನ್ನು ಮಾರಾಟಕ್ಕೆ ತರಲು ಪ್ರಯತ್ನಿಸುತ್ತರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಇದರಿಂದ ಗ್ರಾಹಕರೂ ಕೂಡ ತಮ್ಮಿಷ್ಟದ ಕಾರನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಈ 'ಸಿಯೆರಾ' ಎಸ್‌ಯುವಿ ಸಹ ಆಕರ್ಷಕ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎನ್ನಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications