ಸದ್ದಿಲ್ಲದೇ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಬಿಡುಗಡೆಗೆ ದಿನಾಂಕ ನಿಗದಿ.. 6.30 ಲಕ್ಷಕ್ಕೆ ಹೊಸ ಕಾರು?
ಜಪಾನ್ ಮೂಲದ ನಿಸ್ಸಾನ್ (Nissan) ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ 2020ರಲ್ಲಿ ಮ್ಯಾಗ್ನೈಟ್ (Magnite) ಕಾರನ್ನು ಬಿಡುಗಡೆ ಮಾಡಿತ್ತು. ಇದು ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಸದ್ಯ ಕಂಪನಿಯು ನವೀಕರಿಸಿದ ಅಂದರೆ 'ಮ್ಯಾಗ್ನೈಟ್ ಫೇಸ್‌ಲಿಫ್ಟ್' ಮಾದರಿಯನ್ನು ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ಈ ಹೊಸ ಕಾರನ್ನು ಅಕ್ಟೋಬರ್ 4ರಂದು ಮಾರಾಟಕ್ಕೆ ತರಲು ದಿನಾಂಕ ನಿಗದಿಪಡಿಸಲಾಗಿದೆ. ಬನ್ನಿ.. ನೂತನ ಕಾರಿನ ನಿರೀಕ್ಷಿತ ಬೆಲೆ ಹಾಗೂ ವಿಶೇಷತೆ ಕುರಿತಂತೆ ಸಂಪೂರ್ಣವಾದ ವಿವರ ತಿಳಿಯೋಣ.
ವಿನ್ಯಾಸ: 2024ರ ಹೊಚ್ಚ ಹೊಸ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಎಸ್‌ಯುವಿ ಅತ್ಯಾಧುನಿಕ ವಿನ್ಯಾಸ (ಡಿಸೈನ್) ಹೊಂದಿರುವ ಸಾಧ್ಯತೆಯಿದೆ. ಈ ಕಾರು ಭಾರತ್ ಎನ್‌ಸಿಎಪಿ ಸುರಕ್ಷತೆ ಪರೀಕ್ಷೆಗೆ ಒಳಗಾಗಲು ನಿಂತಿದ್ದಾಗ ಕಂಡುಬಂದಿತ್ತು. ಆ ಫೋಟೋಗಳು ಆನ್‌ಲೈನ್‌ನಲ್ಲಿಯೂ ಸೋರಿಕೆಯಾಗಿದ್ದವು. ಅದರಲ್ಲಿ ನವೀಕರಿಸಿದ ಫಾಸಿಯಾ ಹೊಂದಿರುವುದನ್ನು ಗುರುತಿಸಲಾಗಿತ್ತು. ಇದರೊಟ್ಟಿಗೆ ಮೇಲ್ದರ್ಜೆಗೇರಿಸಿದ ಗ್ರಿಲ್, ಹೊಸದಾಗಿರುವ ಬಂಪರ್, ಮರುವಿನ್ಯಾಸಗೊಳಿಸಲಾದ ಹೆಡ್‌ಲೈಟ್‌ಗಳು, ನವೀನವಾಗಿರುವ ಅಲಾಯ್ ವೀಲ್‌ಗಳು ಮತ್ತು ಎಲ್ಇಡಿ ಟೈಲ್ ಲೈಟ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಕಾರ್ಯಕ್ಷಮತೆ: ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ (Nissan Magnite Facelift) ಕಾರು ಶಕ್ತಿಯುತ ಎಂಜಿನ್‌ನ್ನು ಹೊಂದಿರುವ ಸಾಧ್ಯತೆಯಿದೆ. ಬಹುತೇಕ ಪ್ರಸ್ತುತ ಖರೀದಿಗೆ ದೊರೆಯುವ ಮ್ಯಾಗ್ನೈಟ್ ಮಾದರಿಯಂತೆಯೇ (ಮಾಡೆಲ್) ಎಂಜಿನ್‌ನ್ನು ಹೊಂದಿರಲಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಒಳಗೊಂಡಿರಲಿದ್ದು, 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಹಾಗೂ ಸಿವಿಟಿ ಗೇರ್‌ಬಾಕ್ಸ್‌ನ್ನು ಪಡೆದಿರುವ ಸಾಧ್ಯತೆಯಿದೆ.
ಆಸನಗಳು & ವೈಶಿಷ್ಟ್ಯಗಳು: ಮುಂಬರಲಿರುವ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ 5 ಆಸನ ಆಯ್ಕೆಯಲ್ಲಿ ಲಭ್ಯವಾಗಲಿದೆ. ಜೊತೆಗೆ ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಸಿಂಗಲ್ ಪೇನ್ ಸನ್‌ರೂಫ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಹೊಂದಿರಬಹುದು ಎನ್ನಲಾಗಿದೆ.
ಸುರಕ್ಷತಾ ವೈಶಿಷ್ಟ್ಯಗಳು: ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲಿದೆ ಎಂದು ಹೇಳಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಎಲ್ಲ ರೂಪಾಂತರಗಳಲ್ಲಿಯೂ (ವೇರಿಯೆಂಟ್) 6-ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಐಎಸ್ಒಎಫ್ಐಎಕ್ಸ್ ಚೈಲ್ಡ್ ಸೀಟ್ ಆಂಕಾರೇಜ್‌ಗಳು ಹಾಗೂ 360-ಡಿಗ್ರಿ ಕ್ಯಾಮೆರಾದಂತಹ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ಬೆಲೆ ಹಾಗೂ ಪ್ರತಿಸ್ಪರ್ಧಿ ಕಾರುಗಳು: ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಎಸ್‌ಯುವಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು. ರೂ.6.30 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿರಬಹುದು ಎನ್ನಲಾಗಿದೆ. ಈ ಕಾರಿಗೆ ರೆನಾಲ್ಟ್ ಕಿಗರ್, ಟಾಟಾ ನೆಕ್ಸಾನ್, ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ, ಕಿಯಾ ಸೋನೆಟ್, ಮಾರುತಿ ಸುಜುಕಿ ಫ್ರಾಂಕ್ಸ್ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಕಾರುಗಳು ಪ್ರಬಲವಾದ ಎದುರಾಳಿಯಾಗಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








