Maruti Suzuki Dzire: ಇಡೀ ದೇಶವನ್ನು ಅಚ್ಚರಿಗೊಳಿಸಿದೆ ಮಾರುತಿ ಡಿಜೈರ್: 5-ಸ್ಟಾರ್ ಸೇಫ್ಟಿ ರೇಟಿಂಗ್ ನಿಜವೇ?
ಮಾರುತಿ ಕಾರುಗಳು ಎಲ್ಲರಿಗೂ ತಿಳಿದಿರುವಂತೆ ಸುರಕ್ಷತೆಯಲ್ಲಿ ಹಿಂದುಳಿದಿವೆ ಎಂಬ ಮಾತುಗಳನ್ನು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಈವರೆಗೆ ಮಾರುತಿ ಸುಜುಕಿ ನೀಡಿರುವ ಅತ್ಯಂತ ಸುರಕ್ಷಿತ ಕಾರೆಂದರೆ ಬ್ರೆಝಾ ಮಾತ್ರ, ಇದು 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿರುವ ಮಾರುತಿಯ ಸುರಕ್ಷಿತ ಕಾರಾಗಿತ್ತು. ಇದೀಗ ಇಡೀ ದೇಶವನ್ನು ಅಚ್ಚರಿಗೊಳಿಸುವಂತೆ ಮಾರುತಿ ಸುಜುಕಿ ಇತ್ತೀಚೆಗೆ ಅನಾವರಣಗೊಳಿಸಿರುವ ಡಿಜೈರ್ (maruti suzuki Dzire) ಕಾರು 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿದೆ. ಹೌದು, ಇದು ನಿಜ. ಕಾರುಗಳ ನಿರ್ಮಾಣ ಗುಣಮಟ್ಟ ಹಾಗೂ ಸುರಕ್ಷತೆಯನ್ನು ನಿರ್ಣಯಿಸುವ GNCAP ಡಿಜೈರ್ ಅನ್ನು ಮಾರುತಿಯ ಅತ್ಯಂತ ಸುರಕ್ಷಿತ ಕಾರೆಂದು ಘೋಷಿಸಿದೆ.
ಜಿಎನ್‌ಸಿಎಪಿ (Global New Car Assessment Programme) ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರುಗಳ ಸುರಕ್ಷಿತೆಯನ್ನು ನಿರ್ಣಯಿಸುವ ಸಂಸ್ಥೆಯಾಗಿದೆ. ಇದೇ ಸಂಸ್ಥೆಯು ಈ ಹಿಂದೆ ಮಾರುತಿ ಸುಜುಕಿಯ ಹಲವು ಕಾರುಗಳಿಗೆ ಸೇಫ್ಟಿ ರೇಟಿಂಗ್ ನೀಡಿದೆ. ಈ ಹಿಂದೆ ಮಾರುತಿಯ ಹಲವು ಕಾರುಗಳು 1-ಸ್ಟಾರ್ ಹಾಗೂ 2-ಸ್ಟಾರ್ ಪಡೆದ ಉದಾಹರಣೆಗಳು ಕೂಡ ಇವೆ. ಆದರೆ ಈವರೆಗೆ 5-ಸ್ಟಾರ್ ರೇಟಿಂಗ್ ಅನ್ನು ಮಾರುತಿಯ ಯಾವುದೇ ಕಾರಿಗೆ ನೀಡಿರಲಿಲ್ಲ.

ಮಾರುತಿ ಸುಜುಕಿ ಡಿಜೈರ್ ಮಾತ್ರ ಈಗ ಎಲ್ಲರನ್ನು ಅಚ್ಚರಿಗೊಳಿಸುವ ರೀತಿಯಲ್ಲಿ ಗ್ಲೋಬಲ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 31.24 ಅಂಕಗಳನ್ನು ಗಳಿಸಿ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಹಾಗೆಯೇ ಮಕ್ಕಳ ರಕ್ಷಣೆ ವಿಭಾಗದಲ್ಲಿ 42ಕ್ಕೆ 39.20 ಅಂಕಗಳನ್ನು ಪಡೆದು 4-ಸ್ಟಾರ್ ರೇಟಿಂಗ್‌ನ್ನು ದಕ್ಕಿಸಿಕೊಂಡಿದೆ. ಇದು ಮಾರುತಿ ಇತಿಹಾಸದಲ್ಲಿಯೇ ಹೊಸ ಮೈಲಿಗಲ್ಲು ಎಂದು ಹೇಳಬಹುದು.
ಇದೀಗ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿರುವ ಮಾರುತಿ ಸುಜುಕಿ ಡಿಜೈರ್ ಕಂಪನಿಯಿಂದ ಹೊರಬಂದಿರುವ ನಾಲ್ಕನೇ ತಲೆಮಾರಿನ ಕಾರಾಗಿದೆ. ಮಾರುಕಟ್ಟೆಯಲ್ಲಿ ಒಂದು ಕಾರು ದೀರ್ಘ ಕಾಲ ಉಳಿಯಬೇಕಾದರೆ ಪ್ರತಿಸ್ಪರ್ಧಿಗಳ ಪೈಪೋಟಿಗೆ ತಕ್ಕಂತೆ ಹೊಸ ನವೀಕರಣಗಳೊಂದಿಗೆ ಮರು-ಬಿಡುಗಡೆಯಾಗುವ ಅನಿವಾರ್ಯತೆ ಇದೆ. ಹಾಗಾಗಿಯೇ ಇದು ನಾಲ್ಕನೇ ಬಾರಿ ಹೊಸ ನವೀಕರಣಗಳನ್ನು ಪಡೆದು ಬಿಡುಗಡೆಯಾಗುತ್ತಿದೆ.

ಅಂದಹಾಗೆ ನಾಲ್ಕನೇ ತಲೆಮಾರಿನ ಡಿಜೈರ್ ಹಲವು ಸೇಫ್ಟಿ ಫೀಚರ್‌ಗಳೊಂದಿಗೆ ಬಿಡುಗಡೆಯಾಗಲಿದೆ. ಈ ಕಾರಿನಲ್ಲಿ 6-ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಹಾಗೂ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಒಳಗೊಂಡಿರುವುದು ದೃಢಪಟ್ಟಿದೆ. ಪ್ರಯಾಣಿಕರ ರಕ್ಷಣೆಗಾಗಿ ಹೊಸ 'ಮಾರುತಿ ಸುಜುಕಿ ಡಿಜೈರ್' ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದಲೇ ಗ್ಲೋಬಲ್ ಎನ್‌ಸಿಎಪಿ ಈ 5-ಸ್ಟಾರ್ ಸೇಫ್ಟಿ ರೇಟಿಂಗ್ ನೀಡಿದೆ.
ಈ ಹಿಂದೆ ಮೂರನೇ ತಲೆಮಾರಿನ ಅಥವಾ ಸದ್ಯ ಖರೀದಿಗೆ ದೊರೆಯುತ್ತರುವ ಡಿಜೈರ್ ಕೇವಲ 2-ಸ್ಟಾರ್ ಸೇಫ್ಟಿ ರೇಟಿಂಗ್ ಅನ್ನು ಮಾತ್ರ ಪಡೆದಿತ್ತು. ನಾಲ್ಕನೇ ತಲೆಮಾರಿನ ಕಾರಿನಲ್ಲಿ ಲಭ್ಯವಾಗುವ ಸುರಕ್ಷತಾ ವೈಶಿಷ್ಟ್ಯಗಳು, ಮೂರನೇ ತಲೆಮಾರಿನ ಡಿಜೈರ್‌ನಲ್ಲಿ ಇರಲಿಲ್ಲ. ಇದು ಹೊಸ ಕಾರಿನ ಗರಿಷ್ಟ ಸುರಕ್ಷತಾ ಗುಣಮಟ್ಟಕ್ಕೆ ಮುಖ್ಯ ಕಾರಣವಾಗಿರಬಹುದು. ಹಾಗೆಯೇ ಕಾರಿನ ಹೊರ ಭಾಗದ ನಿರ್ಮಾಣ ಕೂಡ ಈ ಬಾರಿ ಉತ್ತಮವಾಗಿದೆ.
ಅಸಲಿ ಟ್ವಿಸ್ಟ್ ಏನು ಗೊತ್ತಾ?: ಕಾರು ಇನ್ನು ಬಿಡುಗಡೆಯಾಗಿಲ್ಲ, ಬೆಲೆ ನಿರ್ಧಾರವಾಗಿಲ್ಲ. ಕಂಪನಿಯು ನಾಲ್ಕನೇ ತಲೆಮಾರಿನ ಡಿಜೈರ್ ಅನ್ನು ಕೇವಲ ಅನಾವರಣಗೊಳಿಸಿದೆ ಅಷ್ಟೆ. ನಿಜಕ್ಕೆ ಮಾರುತಿ ಡಿಜೈರ್ ಈ ಬಾರಿ ತುಸು ಬೆಲೆ ಹೆಚ್ಚಳದೊಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಸದ್ಯ ಮಾರಾಟದಲ್ಲಿರುವ ಡಿಜೈರ್ (ಮೂರನೇ ತಲೆಮಾರಿನ ಕಾರು) 6.57 ಲಕ್ಷ ರೂ. ಬೆಲೆ (ಎಕ್ಸ್ ಶೂರೂಂ)ಯನ್ನು ಹೊಂದಿದೆ.
ಹೊಸ ತಲೆಮಾರಿನ ಡಿಜೈರ್ ನಮ್ಮ ಪ್ರಕಾರ ಅಂದಾಜು 70 ಸಾವಿರ ರೂ. ನಿಂದ 1 ಲಕ್ಷ ರೂ. ಹೆಚ್ಚಿನ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧಯತೆಗಳಿವೆ. ನವೆಂಬರ್ 11 ರಂದು ಮಾರುತಿ ಕಂಪನಿಯು ಹೊಸ ಡಿಜೈರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಬಿಡುಗಡೆ ಬಳಿಕ ಹಲವರ ಗೊಂದಲಗಳಿಗೆ ಉತ್ತರ ಸಿಗಲಿದೆ. ಹೊಸ ಡಿಜೈರ್ ಸೇಫ್ಟಿ ರೇಟಿಂಗ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications