Spring EV: ನಾಳೆ ನವೀಕರಿಸಿದ ಡೇಸಿಯಾ ಸ್ಪ್ರಿಂಗ್ ಇವಿ ಜಾಗತಿಕವಾಗಿ ಅನಾವರಣ.. ಭಾರತಕ್ಕೆ ಬಂದರೆ ಬೆಲೆ ಕಡಿಮೆಯೇ?
ಪ್ರಸಿದ್ಧ ಫ್ರೆಂಚ್ ಕಾರು ತಯಾರಕ ಕಂಪನಿಯ ರೆನಾಲ್ಟ್ (Renault) ಒಡೆತನದ ಡೇಸಿಯಾ (Dacia) ನವೀಕರಿಸಿದ ಸ್ಪ್ರಿಂಗ್ ಇವಿ (Updated Spring EV)ಯನ್ನು ನಾಳೆ (ಫೆ. 21) ಜಾಗತಿಕವಾಗಿ ಅನಾವರಣಗೊಳಿಸಲಿದೆ. ಇದೊಂದು ಪುಟ್ಟ ಹ್ಯಾಚ್‌ಬ್ಯಾಕ್ ಆಗಿದ್ದು, ನೋಡಿದ ಕೊಡಲೇ ಭಾರತದ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುವ ಕ್ವಿಡ್ (KWID) ಕಾರನ್ನು ನೆನಪಿಸುತ್ತಿಸುತ್ತದೆ.
ಈಗಾಗಲೇ ಡೇಸಿಯಾ ಕಂಪನಿ ಹಲವು ದೇಶಗಳಲ್ಲಿ ಸ್ಪ್ರಿಂಗ್ ಇವಿಯನ್ನು ಮಾರುತ್ತಿದೆ. ಫೇಸ್‌ಲಿಫ್ಟ್ (ಮೇಲ್ದರ್ಜೆರಿಸಿದ) ಆವೃತ್ತಿಯು ವಿನ್ಯಾಸ ಹಾಗೂ ವೈಶಿಷ್ಟ್ಯದಲ್ಲಿ ವಿವಿಧ ಬದಲಾವಣೆಗಳನ್ನು ಹೊಂದಿರಲಿದೆ. ಈ ಎಲೆಕ್ಟ್ರಿಕ್ ಕಾರು, ನವೀನ ಪೀಳಿಗೆಯ ಡಸ್ಟರ್ ಕಾರಿನಿಂದ ಎರವಲು ಪಡೆದಿರುವ ವಿನ್ಯಾಸದ ಅಂಶಗಳನ್ನು ಒಳಗೊಂಡಿರುವ ನೀರಿಕ್ಷೆಯಿದೆ. ಆಕರ್ಷಕ ಹೆಡ್‌ಲ್ಯಾಂಪ್, ನವೀಕೃತ ಗ್ರಿಲ್ ಹೊಂದಿರಬಹುದು. ಜೊತೆಗೆ ಹಿಂಭಾಗದ ವಿನ್ಯಾಸ (ಡಿಸೈನ್) ಅತ್ಯಾಧುನಿಕವಾಗಿರಲಿದೆ.

ಹೊರ ಭಾಗದಲ್ಲಿರುವಂತೆ ಒಳ ಭಾಗದಲ್ಲಿಯು ಡೇಸಿಯಾ ಸ್ಪ್ರಿಂಗ್ ಇವಿ ಫೇಸ್‌ಲಿಫ್ಟ್ ಹಲವು ಪರಿವರ್ತನೆಗಳನ್ನು ಹೊಂದಿರುವ ಸಾಧ್ಯತೆಯಿದೆ. ಹೊಸದಾದ ಡ್ಯಾಶ್‌ಬೋರ್ಡ್ ಹಾಗೂ ಸ್ಟೀರಿಂಗ್ ವೀಲ್ ಅನ್ನು ಪಡೆದಿರಬಹುದು. ಹಾಗೆಯೇ ನೂತನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, UI (ಯೂಸರ್ ಇಂಟರ್ಫೇಸ್) ಒಳಗೊಂಡಿರಬಹುದು. ಡೇಸಿಯಾ ಕಂಪನಿಯು ನವೀಕರಿಸಿದ ಸ್ಪ್ರಿಂಗ್ ಇವಿಯ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್‌ನಲ್ಲಿಯು ಹಲವು ಬದಲಾವಣೆಗಳನ್ನು ಮಾಡಿರಬಹುದು.
ಸದ್ಯ, ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಡೇಸಿಯಾ ಸ್ಪ್ರಿಂಗ್ ಇವಿ, 26.8 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಪೂರ್ತಿ ಚಾರ್ಜ್ ನಲ್ಲಿ 230 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 43 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 125 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಈ ಡೇಸಿಯಾ ಸ್ಪ್ರಿಂಗ್ ಇವಿ, ರೆನಾಲ್ಟ್ ಕೆ-ಝಡ್ಇವಿ (Renault K-ZEV) ಕಾನ್ಸೆಪ್ಟ್ ಕಾರಿನ ಆಧಾರಿತವಾಗಿದೆ. ಇದನ್ನು 2020ರ ಆಟೋ ಎಕ್ಸ್‌ಪೋದಲ್ಲಿಯು ಪ್ರದರ್ಶಸಲಾಗಿತ್ತು. ದೇಶೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಕಂಪನಿಯು 'ಕ್ವಿಡ್' ಕಾರನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಬಿಡುಗಡೆಗೊಳಿಸಲಿದೆ ಎಂದು ಹಲವು ವರ್ಷಗಳಿಂದ ಹೇಳಿಕೊಂಡು ಬರಲಾಗಿದೆ. ಆದರೆ ಇವೆರೆಗೆ ಪರಿಚಯಿಸಿಲ್ಲ.
ಮುಂಬರುವ ವರ್ಷಗಳಲ್ಲಿ ರೆನಾಲ್ಟ್ ಕಂಪನಿಯಿಂದ ಭಾರತದ ಮಾರುಕಟ್ಟೆಗೆ ಎರಡು ಎಲೆಕ್ಟ್ರಿಕ್ ಕಾರುಗಳು ಬರುವ ನೀರಿಕ್ಷೆಯಿದ್ದು, ಅದರಲ್ಲಿ ಕ್ವಿಡ್ ಕೂಡ ಒಂದಾಗಿರಲಿದೆ ಎನ್ನಲಾಗಿದೆ. ಹಲವರ ಪ್ರಕಾರ, ಇದೇ 'ಸ್ಪ್ರಿಂಗ್ ಇವಿ' ಕ್ವಿಡ್ ಹೆಸರಿನಲ್ಲಿ ಬಿಡುಗಡೆಯಾಗಬಹುದು. ಆದರೆ ಈ ಬಗ್ಗೆ ಖಚಿತತೆ ಇಲ್ಲ. ಒಂದೊಮ್ಮೆ ಇವೆಲ್ಲ ನಡೆದರೆ, ಎಲೆಕ್ಟ್ರಿಕ್ ರೂಪದಲ್ಲಿ ಸಿಗುವ ಕ್ವಿಡ್ ಕಾರು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಪ್ರಸ್ತುತ, ದೇಶೀಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಪೆಟ್ರೋಲ್ ಚಾಲಿತ ರೆನಾಲ್ಟ್ ಕ್ವಿಡ್ (Renault KWID) ತೀರಾ ಕಡಿಮೆ ದರವನ್ನು ಹೊಂದಿದ್ದು, ರೂ.4.70 ಲಕ್ಷದಿಂದ ರೂ.6.45 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಇದಕ್ಕೆ ಹೋಲಿಸಿದರೆ ಎಲೆಕ್ಟ್ರಿಕ್ ರೂಪಾಂತರದಲ್ಲಿ ಬರುವ ಕ್ವಿಡ್ ಕೊಂಚವೇ ಹೆಚ್ಚಿನ ಬೆಲೆಯನ್ನು ಹೊಂದಿರಬಹುದು. ಆದಾಗ್ಯೂ ಅಗ್ಗದ ದರಕ್ಕೆ ಲಭ್ಯವಾಗುವ ನಿರಿಕ್ಷೆಯಿದ್ದು, ಕಂಪನಿಯು ಮಧ್ಯಮ ವರ್ಗದ ಜನರನ್ನು ಗುರಿಯಾಗಿಸಿಕೊಂಡು ಬೆಲೆಯನ್ನು ನಿಗದಿಪಡಿಸಬಹುದು ಎಂದು ಹೇಳಲಾಗಿದೆ.
ಮತ್ತೊಂದು ಕಾರಣವೆಂದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾಟರಿ ಸೆಲ್ ಬೆಲೆಗಳು ಗಣನೀಯವಾಗಿ ಕಡಿಮೆಯಾಗುತ್ತಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಭವಿಷ್ಯದಲ್ಲಿ ಬ್ಯಾಟರಿ ಸೆಲ್ ದರಗಳು ಮತ್ತಷ್ಟು ಇಳಿಕೆಯಾಗಬಹುದು. ಇದರಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆ ಇನ್ನೂ ಅಗ್ಗವಾಗಬಹುದು ಎಂದು ಹೇಳುತ್ತಿದ್ದಾರೆ. ಎಲೆಕ್ಟ್ರಿಕ್ ವೆಹಿಕಲ್ (ಇವಿ) ಉತ್ಪಾದನೆಯಲ್ಲಿ ಬ್ಯಾಟರಿಗಾಗಿ ಶೇಕಡ 40% ಹಣವನ್ನು ವ್ಯಯಿಸಲಾಗುತ್ತಿದೆ. ಇವುಗಳನ್ನು ಲೆಕ್ಕಹಾಕಿದಾಗ ಬ್ಯಾಟರಿ ಸೆಲ್ ಬೆಲೆಗಳು ಇಳಿಕೆಯ ಹಾದಿ ಹಿಡಿದಂತೆ ಎಲೆಕ್ಟ್ರಿಕ್ ವಾಹನಗಳು ಸಹ ಅಗ್ಗವಾಗುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








