ಹೈಬ್ರಿಡ್ ಮತ್ತು EV ಕಾರುಗಳ ಮೇಲಿನ ರಸ್ತೆ ತೆರಿಗೆ ಸಂಪೂರ್ಣ ಕಡಿತಗೊಳಿಸಿದ ಸರ್ಕಾರ
ಇಂಧನ ಚಾಲಿತ ವಾಹನಗಳಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ತಡೆಗಟ್ಟಲು ಉತ್ತರ ಪ್ರದೇಶ ಸರ್ಕಾರವು ಪರಿಸರ ಸ್ನೇಹಿ ವಾಹನಗಳನ್ನು ಬೆಂಬಲಿಸುವ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಸ್ಟ್ರಾಂಗ್ ಹೈಬ್ರಿಡ್, ಪ್ಲಗ್-ಇನ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳಿಗೆ ರಸ್ತೆ ತೆರಿಗೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ತೆಗೆದುಹಾಕುವುದಾಗಿ ಘೋಷಿಸಿದೆ. ಆಟೋಮೊಬೈಲ್ ಉದ್ಯಮದ ಮೇಲೆ ಸಂಪೂರ್ಣ ಗಮನ ಹರಿಸುವುದರೊಂದಿಗೆ, 2070ರ ವೇಳೆಗೆ ಶೂನ್ಯ ಕಾರ್ಬನ್ ಹೊರಸೂಸುವಿಕೆಯನ್ನು ಸಾಧಿಸಲು ಸರ್ಕಾರ ಯೋಜಿಸಿದೆ. ಸದ್ಯ ಇದಕ್ಕಾಗಿ ಪರಿಸರ ಸ್ನೇಹಿ ವಾಹನಗಳತ್ತ ಒಲವು ತೋರಲು ಸಾರ್ವಜನಿಕರನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿರುವುದಾಗಿ ಹೇಳಿದೆ.
ಹೊಸದಾಗಿ ಜಾರಿಗೆ ತರಲಾದ ತೆರಿಗೆ ಮನ್ನಾ ನೀತಿಯು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಿಭಾಗದತ್ತ ಹೊಸ ಗ್ರಾಹಕರನ್ನು ಆಕರ್ಷಿಸಬಹುದು. ಪ್ರಮುಖ ವಾಹನ ತಯಾರಕರಾದ ಮಾರುತಿ ಸುಜುಕಿ ಮತ್ತು ಟೊಯೊಟಾ ಈ ನಿರ್ಧಾರದಿಂದ ಗಮನಾರ್ಹವಾಗಿ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ತೆರಿಗೆ ಕಡಿತದ ನಿಖರವಾದ ಪ್ರಮಾಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಶೇ 100 ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಇನ್ನೋವಾ ಹೈಕ್ರಾಸ್ ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ನಂತಹ ಕಾರುಗಳು ಹೈಬ್ರಿಡ್ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ. ಈ ಕಾರುಗಳ ಮೇಲೆ ತೆರಿಗೆ ವಿನಾಯಿತಿಯು ಗ್ರಾಹಕರಿಗೆ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡುತ್ತದೆ. ಹೈಬ್ರಿಡ್ ವಾಹನಗಳನ್ನು ಮಾರುಕಟ್ಟೆಯಲ್ಲಿ ಹೆಚ್ಚು ಆಕರ್ಷಕ ಆಯ್ಕೆಯನ್ನಾಗಿ ಮಾಡುತ್ತದೆ.
ಗ್ರ್ಯಾಂಡ್ ವಿಟಾರಾ ಮತ್ತು ಅರ್ಬನ್ ಕ್ರೂಸರ್ ಹೈರೈಡರ್‌ನ ಹೈಬ್ರಿಡ್ ಮಾಡೆಲ್‌ಗಳ ನೋಂದಣಿ ವೆಚ್ಚವು ಯುಪಿಯಲ್ಲಿ 1.80 ಲಕ್ಷ ರೂ.ಗಳ ವರೆಗೆ ಇದೆ. ಈ ಎಸ್‌ಯುವಿಗಳ ಆನ್-ರೋಡ್ ಬೆಲೆಗಳಲ್ಲಿ ಗಮನಾರ್ಹ ಕಡಿತವಾಗಲಿದೆ. ಹಾಗೆಯೇ ಇನ್ನೋವಾ ಹೈಕ್ರಾಸ್ ಮತ್ತು ಇನ್ವಿಕ್ಟೋ ಖರೀದಿದಾರರು ರೂಪಾಂತರವನ್ನು ಅವಲಂಬಿಸಿ ಆನ್-ರೋಡ್ ಬೆಲೆಗಳಲ್ಲಿ ಬರೋಬ್ಬರಿ 3 ಲಕ್ಷ ರೂ.ಗಳವರೆಗೆ ಕಡಿತದೊಂದಿಗೆ ಪಡೆಯಲಿದ್ದಾರೆ.

ತೆರಿಗೆ ವಿನಾಯಿತಿಯು ವಾಹನ ಮಾರುಕಟ್ಟೆಯನ್ನು ಉತ್ತೇಜಿಸುತ್ತದೆ, ಹೈಬ್ರಿಡ್ ಕಾರು ವಿಭಾಗಕ್ಕೆ ಉತ್ತೇಜನ ನೀಡುವುದಲ್ಲದೇ, ಹೆಚ್ಚು ಪರಿಸರ ಸ್ನೇಹಿ ಮಾದರಿಗಳನ್ನು ಪರಿಚಯಿಸಲು ಇತರ ತಯಾರಕರನ್ನು ಪ್ರೋತ್ಸಾಹಿಸುತ್ತದೆ. ಈ ಪ್ರಗತಿಪರ ಹೆಜ್ಜೆಯು ಹಸಿರು ಭವಿಷ್ಯದತ್ತ ಉತ್ತರ ಪ್ರದೇಶದ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.
ಸ್ವಚ್ಛ ಸಾರಿಗೆಯನ್ನು ಹೆಚ್ಚಿಸಲು ಮತ್ತು ದೇಶದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಈ ಕಾರ್ಯತಂತ್ರವನ್ನು ಜಾರಿಗೆ ತರಲಾಗಿದೆ. ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸುವ ಮೂಲಕ, ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸ್ವಚ್ಚ ಗಾಳಿಯ ಗುಣಮಟ್ಟವನ್ನು ಹೆಚ್ಚಿಸಬೇಕಿದೆ ಎಂದು ಇಲ್ಲಿನ ಕೈಗಾರಿಕಾ ಅಭಿವೃದ್ಧಿ, ರಫ್ತು ಮತ್ತು ಹೂಡಿಕೆ ಉತ್ತೇಜನ ಸಚಿವ ನಂದಗೋಪಾಲ್ ಗುಪ್ತಾ ಹೇಳಿದ್ದಾರೆ.

ಇವಿ ಮೂಲಸೌಕರ್ಯ ಮತ್ತು ಉತ್ಪಾದನೆಯಲ್ಲಿ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸುವ ಮೂಲಕ ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ. ಈ ಉಪಕ್ರಮವು ಎಲೆಕ್ಟ್ರಿಕ್ ವಾಹನ ಮಾರಾಟವನ್ನು ಹೆಚ್ಚಿಸುತ್ತದೆ, ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತದೆ. ಉತ್ತರ ಪ್ರದೇಶವನ್ನು ಹಸಿರು ಚಲನಶೀಲತೆ ಉದ್ಯಮದಲ್ಲಿ ಪ್ರಮುಖ ರಾಜ್ಯವನ್ನಾಗಿ ಮಾಡುತ್ತದೆ ಎಂದು ಸಚಿವ ನಂದಗೋಪಾಲ್ ಹೇಳಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications