ಟಾಟಾವನ್ನು ಹಿಂದಿಕ್ಕಿದೆ ಈ ಬ್ರಾಂಡ್: ಮಾರುತಿ ಮಾರಾಟದಲ್ಲಿ ಭಾರೀ ಕುಸಿತ, 'ಪಿತೃ ಪಕ್ಷ' ಎಫೆಕ್ಟ್?
ಭಾರತೀಯ ಆಟೋ ಉದ್ಯಮವು ವಿಶ್ವದಲ್ಲಿ ಇನ್ಯಾವುದೇ ದೇಶದಲ್ಲಿ ಕಾಣದ ಬೆಳವಣಿಗೆಯನ್ನು ಕಾಣುತ್ತಿದೆ. ಅತೀ ಹೆಚ್ಚು ವಾಹನಗಳು ಮಾರಾಟವಾಗುವ ದೇಶಗಳಲ್ಲಿ ಭಾರತವು ಸದ್ಯ ಮೂರನೇ ಸ್ಥಾನದಲ್ಲಿ ಮುನ್ನುಗ್ಗುತ್ತಿದೆ. ಆದ್ರೆ ಕಳೆದ ವರ್ಷ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಶೇ19 ರಷ್ಟು ಕುಸಿತವಾಗಿದೆ. ಹೌದು, ಸೆಪ್ಟೆಂಬರ್ 2024 ರಲ್ಲಿ 2,75,681 ಹೊಸ ಪ್ರಯಾಣಿಕ ವಾಹನಗಳು (Passenger vehicles) ಭಾರತದಲ್ಲಿ ಮಾರಾಟವಾಗಿವೆ. ಆದ್ರೆ ಸೆಪ್ಟೆಂಬರ್ 2023ರಲ್ಲಿ ಈಬಾರಿಗಿಂತ 63,862 ವಾಹನಗಳು ಹೆಚ್ಚಾಗಿ ಮಾರಾಟವಾಗಿದ್ದವು ಎಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (FADA) ತಿಳಿಸಿದೆ.
ಎಫ್ಎಡಿಎ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ಒಟ್ಟು 2,75,681 ಯುನಿಟ್ ವಾಹನಗಳು ಮಾರಾಟವಾಗಿವೆ. ಇದರಲ್ಲಿ ಎಂದಿನಂತೆ ಮಾರುತಿ ಸುಜುಕಿ ಕಾರುಗಳು ಅತಿಹೆಚ್ಚು ಮಾರಾಟವಾಗುವ ಮೂಲಕ ಅಗ್ರಸ್ಥಾನದಲ್ಲಿದ್ದರೇ, ಹ್ಯುಂಡೈ ಎರಡನೇ ಸ್ಥಾನ ಹಾಗೂ ಮಹೀಂದ್ರಾ ಮೂರನೇ ಸ್ಥಾನದಲ್ಲಿದೆ. ಹಾಗಯೇ ದೇಶದ ಮತ್ತೊಂದು ಪ್ರಮುಖ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ನಾಲ್ಕನೇ ಸ್ಥಾನದಲ್ಲಿದೆ.

ಮಾರುತಿ ಸುಜುಕಿ: ಸೆಪ್ಟೆಂಬರ್ 2023ಕ್ಕೆ ಹೋಲಿಸಿದರೆ ಶೇಕಡಾ 19.64 ರಷ್ಟು ಮಾರಾಟದಲ್ಲಿ ಕುಸಿತವಾಗಿದೆ, ಮಾರುತಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 1,41,318 ವಾಹನಗಳನ್ನು ಮಾರಾಟ ಮಾಡಿತ್ತು. ಆದ್ರೆ ಈ ಸೆಪ್ಟೆಂಬರ್ ತಿಂಗಳು 1,13,560 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ವಾರ್ಷಿಕವಾಗಿ ಕುಸಿತ ಕಂಡರು ಭಾರತೀಯ ಕಾರು ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.
ಹ್ಯುಂಡೈ: ಸೆಪ್ಟೆಂಬರ್ 2024 ರಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿರುವ ಹ್ಯುಂಡೈ ಕಂಪನಿಯು, ಸೆಪ್ಟೆಂಬರ್ 2023 ರಲ್ಲಿ ಮಾರಾಟವಾದ 50,633 ಯುನಿಟ್ ಕಾರುಗಳಿಗೆ ಹೋಲಿಸಿದರೆ ಈ ಬಾರಿ ಕೇವಲ 37,973 ಹೊಸ ವಾಹನಗಳನ್ನು ಮಾರಾಟ ಮಾಡಿದೆ. ಅಂದರೆ ಕಳೆದ ಸೆಪ್ಟಂಬರ್‌ಗಿಂತ ಈ ಬಾರಿ 12,660 ಯುನಿಟ್ ಕಾರುಗಳು ಕಡಿಮೆ ಮಾರಾಟವಾಗಿವೆ. ಒಟ್ಟಾರೆ ಭಾರೀ ಕುಸಿತವಾಗಿದೆ ಎಂದು ಹೇಳಬಹುದು.

ಮಹೀಂದ್ರಾ: ಮಹೀಂದ್ರಾ ಕಳೆದ ತಿಂಗಳು 34,607 ಯುನಿಟ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಟಾಟಾ ಮೋಟಾರ್ಸ್ ಅನ್ನು ಹಿಂದಿಕ್ಕಿ ಬಹುದಿನಗಳ ಕನಸನ್ನು ನನಸಾಗಿಸಿಕೊಂಡು ಮೂರನೇ ಸ್ಥಾನಕ್ಕೇರಿದೆ. ಇದು 2023ರ ಸೆಪ್ಟೆಂಬರ್ ನಲ್ಲಿ ಮಾರಾಟವಾದ 34,471 ಯುನಿಟ್ ಕಾರುಗಳಿಗೆ ಹೋಲಿಸಿದರೆ ಶೇಕಡಾ 0.39 ರಷ್ಟು ಅಥವಾ 136 ಯುನಿಟ್ ಕಾರುಗಳನ್ನು ಹೆಚ್ಚಾಗಿ ಮಾರಾಟ ಮಾಡಿ ಧನಾತ್ಮಕ ಬೆಳವಣಿಗೆ ಸಾಧಿಸಿದೆ.
ಟಾಟಾ ಮೋಟಾರ್ಸ್: ಕಳೆದ ತಿಂಗಳು 31,947 ಹೊಸ ಕಾರುಗಳನ್ನು ಮಾರಾಟ ಮಾಡುವ ಮೂಲಕ ಟಾಟಾ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. 2023 ಸೆಪ್ಟೆಂಬರ್ ತಿಂಗಳಲ್ಲಿ ಮಾರಾಟವಾಗಿದ್ದ 39,514 ಕಾರುಗಳಿಗೆ ಹೋಲಿಸಿದರೆ ಈ ಸೆಪ್ಟೆಂಬರ್‌ನಲ್ಲಿ 31,947 ಕಾರುಗಳನ್ನು ಮಾರಾಟ ಮಾಡಿ ಕುಸಿತ ಕಂಡಿದೆ. ಇನ್ನು ಐದನೇ ಸ್ಥಾನದಲ್ಲಿರುವ ಟೊಯೋಟಾ 19,660 ಕಾರುಗಳನ್ನು ಮಾರಾಟ ಮಾಡಿ ಶೇ4.3 ರಷ್ಟು ಬೆಳವಣಿಗೆ ಕಂಡಿದೆ.
| OEM | Sep'24 | Market Share (%) Sep'24 | Sep'23 | Market Share (%) Sep'23 |
| Maruti Suzuki | 1,13,560 | 41.19% | 1,41,318 | 41.62% |
| Hyundai | 37,973 | 13.77% | 50,633 | 14.91% |
| Mahindra | 34,607 | 12.55% | 34,471 | 10.15% |
| Tata | 31,947 | 11.59% | 39,514 | 11.64% |
| Toyota | 19,660 | 7.13% | 18,845 | 5.55% |
| Kia | 15,521 | 5.63% | 21,645 | 6.37% |
| Skoda Volkswagen Group | 5,192 | 1.88% | 8,249 | 2.43% |
| Honda | 3,893 | 1.41% | 7,045 | 2.07% |
| MG Motor | 2,966 | 1.08% | 4,027 | 1.19% |
| Renault | 2,706 | 0.98% | 3,595 | 1.06% |
| Nissan | 2,109 | 0.77% | 2,176 | 0.64% |
| Mercedes-Benz Group | 1,308 | 0.47% | 1,451 | 0.43% |
| BMW | 1,011 | 0.37% | 1,175 | 0.35% |
| PCA Automobiles | 656 | 0.24% | 475 | 0.14% |
| Force Motors | 543 | 0.20% | 603 | 0.18% |
| Jaguar Land Rover | 447 | 0.16% | 448 | 0.13% |
| FCA India Automobiles | 349 | 0.13% | 427 | 0.13% |
| BYD | 163 | 0.06% | 151 | 0.04% |
| Volvo | 112 | 0.04% | 186 | 0.05% |
| Others | 958 | 0.35% | 3,109 | 0.92% |
| Total | 2,75,681 | 100% | 3,39,543 | 100% |
ಮಾರಾಟ ಕುಸಿತಕ್ಕೆ ಕಾರಣವೇನು?: ಕಳೆದ ತಿಂಗಳು ದೇಶದಲ್ಲಿ ಭಾರಿ ಮಳೆಯಿಂದಾಗಿ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಮಾರಾಟ ಕುಸಿತಕ್ಕೆ ಮತ್ತೊಂದು ಕಾರಣವೆಂದರೆ 'ಪಿತೃ ಪಕ್ಷ' ಇದು 16 ದಿನಗಳ ಅವಧಿಯಾಗಿದ್ದು, ಹೊಸ ಸರಕುಗಳನ್ನು ಖರೀದಿಸಲು ಶುಭ ಸಮಯವಲ್ಲ ಎಂದು ಪರಿಗಣಿಸಲಾಗಿದೆ. ಹಿಂದೂ ಸಂಪ್ರದಾಯದಂತೆ ಅಶುಭ ಅವಧಿಯೆಂದು ಭಾವಿಸಿದ್ದ ಕಾರಣ ಕಳೆದ ತಿಂಗಳು ಜನರು ಶೋರೂಂಗಳಿಂದ ದೂರ ಉಳಿದಿದ್ದಾರೆ.
ಸೆಪ್ಟೆಂಬರ್‌ನಲ್ಲಿ ವಾಹನಗಳ ಮಾರಾಟವು ಕುಸಿತ ಕಂಡಿದೆಯಾದ್ರೂ, ಅಕ್ಟೋಬರ್ ತಿಂಗಳು ಭಾರೀ ಮಾರಾಟದೊಂದಿಗೆ ಮುನ್ನುಗ್ಗಿದೆ. ದಸರಾ ಮತ್ತು ದೀಪಾವಳಿ ಎರಡೂ ಅಕ್ಟೋಬರ್‌ನಲ್ಲಿ ಬಂದಿರುವುದರಿಂದ, ಈ ತಿಂಗಳು ಮಾರಾಟವು ಹೆಚ್ಚಾಗುವ ನಿರೀಕ್ಷೆಯಿದೆ. ಇದು ಕಾರು ತಯಾರಕರಿಗೆ ನಷ್ಟದಿಂದ ಚೇತರಿಸಿಕೊಳ್ಳಲು ಸಹಾಯ ಮಾಡಲಿದೆ. ಅಕ್ಟೋಬರ್ ಮಾರಾಟ ಅಂಕಿ ಅಂಶದ ವಿವರಗಳು ನವೆಂಬರ್‌ನಲ್ಲಿ ಹೊರಬರಲಿವೆ.


Click it and Unblock the Notifications