ಎಲೆಕ್ಟ್ರಿಕ್ ಹೋಂಡಾ ಆಕ್ಟೀವಾಗೆ ಪ್ರತಿಸ್ಪರ್ಧಿಯಾಗಿ ಸುಜುಕಿ ಆಕ್ಸಿಸ್ ಇವಿ ಸ್ಕೂಟರ್ ಬರುತ್ತಿದೆ!
ಸುಜುಕಿ ಕಂಪನಿಯು ಈ ವರ್ಷ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ನೋಡುತ್ತಿದೆ. ಇತ್ತೀಚೆಗಷ್ಟೆ ಸುಜುಕಿ ಇ-ಬರ್ಗ್‌ಮ್ಯಾನ್ ಅನ್ನು ಅನಾವರಣಗೊಳಿಸಿತ್ತು. ಇದೀಗ ಕಂಪನಿಯು ತನ್ನ ಅತಿ ಹೆಚ್ಚು ಮಾರಾಟವಾಗುವ ಆಕ್ಸೆಸ್ ಸ್ಕೂಟರ್‌ನ ಎಲೆಕ್ಟ್ರಿಕ್ (Suzuki Access EV) ಆವೃತ್ತಿಯನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ.
ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ಹೊಸ ಕಂಪನಿಗಳಿಂದ ಹಲವು ಇವಿ ಸ್ಕೂಟರ್‌ಗಳು ಬಿಡುಗಡೆಯಾಗುತ್ತಿವೆ. ಆದ್ರೆ ಜನಪ್ರಿಯ ಬ್ರಾಂಡ್‌ಗಳು ಮಾತ್ರ ತಮ್ಮ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲು ತುಸು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿವೆ. ಅಂತಹ ಬ್ರಾಂಡ್‌ಗಳಲ್ಲಿ ಒಂದಾದ ಸುಜುಕಿ, ಇದೀಗ ಆಕ್ಸೆಸ್ ಎಲೆಕ್ಟ್ರಿಕ್ ಆವೃತ್ತಿಯನ್ನು ಪರಿಚಯಿಸುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇ-ಆಕ್ಸೆಸ್ ಎಂದು ಕರೆಯುವ ಸಾಧ್ಯತೆಯಿದೆ. ವಿನ್ಯಾಸದ ವಿಷಯದಲ್ಲಿ, ಸುಜುಕಿ ಇ-ಬರ್ಗ್ ಮ್ಯಾನ್‌ನಂತೆಯೇ ಅದೇ ಡಿಸೈನ್ ಅನ್ನು ಇ-ಆಕ್ಸೆಸ್ ಕೂಡ ಪಡೆಯಲಿದೆ. ಒಟ್ಟಾರೆ ಸ್ಟೈಲಿಂಗ್ ಮತ್ತು ಬಾಡಿ ಡಿಸೈನ್ ಇಂಧನ ಚಾಲಿತ ಸ್ಕೂಟರ್‌ಗಳನ್ನು ಹೋಲುತ್ತವೆ ಎಂದು ಹೇಳಲಾಗುತ್ತಿದೆ.

ಕಂಪನಿಯು ವೆಚ್ಚವನ್ನು ನಿಯಂತ್ರಣದಲ್ಲಿಡಲು ಸುಜುಕಿ ಈ ಸ್ಕೂಟರ್‌ಗೆ ಹೆಚ್ಚಿನ ಅಲಂಕಾರಿಕ ಆಕ್ಸೆಸೊರಿಗಳನ್ನು ನೀಡುವುದಿಲ್ಲವಂತೆ. ಮುಖ್ಯವಾಗಿ ಈ ಸ್ಕೂಟರ್‌ಗಳು ಅವುಗಳ ಪರಿಸರ ಸ್ನೇಹಿ ಸ್ವಭಾವವನ್ನು ಪ್ರದರ್ಶಿಸಲು 'ನೀಲಿ' ಬಣ್ಣವನ್ನು ಹೊಂದಿರುತ್ತವೆ ಎನ್ನಲಾಗಿದೆ. ಜೊತೆಗೆ ಹೋಂಡಾ ಮತ್ತು ಯಮಹಾದಂತಹ ಪ್ರತಿಸ್ಪರ್ಧಿ ಉತ್ಪನ್ನಗಳ ಆಧಾರದ ಮೇಲೆ ಸ್ಪರ್ಧಾತ್ಮಕ ಬೆಲೆಗೆ ಬಿಡುಗಡೆ ಮಾಡಲಿದೆ.
ಮೂಲಗಳ ಪ್ರಕಾರ, ಸುಜುಕಿ ತಮ್ಮ ಮೊದಲ ಇವಿಯನ್ನು ಈಗಾಗಲೇ ಸಿದ್ಧಪಡಿಸಿದೆ, ಇದನ್ನು ಜಪಾನ್‌ನ ಎಂಜಿನಿಯರ್‌ಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ, ಮೋಟಾರು ಸಾಮರ್ಥ್ಯ, ಬ್ಯಾಟರಿ ಮತ್ತು ರೈಡಿಂಗ್ ರೇಂಜ್ ಬಗ್ಗೆ ಯಾವುದೇ ವಿವರಗಳಿಲ್ಲ, ಆದರೆ ಇದು 125 ಸಿಸಿ ಸ್ಕೂಟರ್ ಪರ್ಫಾಮೆನ್ಸ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕಂಪನಿಯು ಕಳೆದ ಎರಡು ವರ್ಷಗಳಿಂದ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಎಲೆಕ್ಟ್ರಿಕ್ ಅನ್ನು ಪರೀಕ್ಷಿಸುತ್ತಿದ್ದರೆ, ಇತ್ತ ಎಲೆಕ್ಟ್ರಿಕ್ ಆಕ್ಸೆಸ್ ಭಾರತದಲ್ಲಿ ಮೊದಲು ಪಾದಾರ್ಪಣೆ ಮಾಡಲಿದೆ. ಬಿಡುಗಡೆ ಬಳಿಕ ಹೊಸ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಎಥರ್ 450X, ಓಲಾ ಮತ್ತು ಟಿವಿಎಸ್ iQube ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ತೀವ್ರ ಪೈಪೋಟಿ ನೀಡಲಿವೆ.
ಆದ್ರೆ ನೇರ ಪ್ರತಿಸ್ಪರ್ಧಿ ಮಾತ್ರ ಎಲೆಕ್ಟ್ರಿಕ್ ಆಕ್ಟೀವಾ: ಹೋಂಡಾ ತನ್ನ 22 ವರ್ಷಗಳ ದೀರ್ಘಾವಧಿಯಲ್ಲಿ ಅತ್ಯಂತ ಜನಪ್ರಿಯ ಮಾದರಿಯಾದ ಆಕ್ಟಿವಾ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ರೆಡಿಯಾಗಿದೆ. ಹೊಸ ಇವಿ ಆಕ್ಟೀವಾ ಕರ್ನಾಟಕ ಮೂಲದ ಘಟಕದಲ್ಲಿ ಈ ವರ್ಷದ ಡಿಸಂಬರ್ ತಿಂಗಳಿನಲ್ಲಿ ಉತ್ಪಾದನೆಯಾಗಲಿದೆ. ಸದ್ಯಕ್ಕೆ ಈ ಮಾದರಿಯು K4BA ಎಂಬ ಕೋಡ್ ನೇಮ್ ಅನ್ನು ಹೊಂದಿದೆ. ಇದು ಎಲೆಕ್ಟ್ರಿಕ್ ಆಕ್ಸಿಸ್ ಸ್ಕೂಟರ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ. ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ (Honda Activa Electric) ಸ್ಕೂಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ 2025ರ ಆರಂಭದಲ್ಲಿ ಬಿಡುಗಡೆಯಾಗಲಿದೆ.

ಜಪಾನಿನ ದ್ವಿಚಕ್ರ ವಾಹನ ತಯಾರಕ ಹೋಂಡಾ, ಈಗಾಗಲೇ ಸ್ಥಿರ ಬ್ಯಾಟರಿ, ಮೋಟಾರ್‌ಗಳು, ನಿಯಂತ್ರಕಗಳು, ಚಾರ್ಜರ್‌ಗಳು ಸೇರಿದಂತೆ ಇವಿ ತಂತ್ರಜ್ಞಾನಕ್ಕಾಗಿ ಪೇಟೆಂಟ್ ಅನ್ನು ಸಲ್ಲಿಸಿದೆ. ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಫ್ಲೋರ್‌ಬೋರ್ಡ್‌ನ ಅಡಿಯಲ್ಲಿ ಸ್ಥಿರ ಬ್ಯಾಟರಿ ಮತ್ತು ಹಿಂಭಾಗದಲ್ಲಿ ಹಬ್ ಮೋಟರ್ ಅನ್ನು ಹೊಂದಿರುತ್ತದೆ ಎಂದು ಪೇಟೆಂಟ್‌ಗಳು ಸುಳಿವು ನೀಡಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








