TATA: ಬಹುನಿರೀಕ್ಷಿತ ಹೊಸ ಟಾಟಾ ಕರ್ವ್ ಕಾರು ಶುಕ್ರವಾರ ಅನಾವರಣ... ಹೇಗಿರಲಿದೆ?
ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಸಂಸ್ಥೆಯಾಗಿ ಟಾಟಾ ಮೋಟಾರ್ಸ್ (Tata Motors) ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ 2024ರ ಆರ್ಥಿಕ ವರ್ಷದಲ್ಲಿ ಕಂಪನಿಯು ಶೇಕಡ 13.63% ಪಾಲನ್ನು ಹೊಂದಿದ್ದು, ಪ್ರಮುಖ 10 ಕಾರು ಉತ್ಪಾದನಾ ಸಂಸ್ಥೆಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಟಿಯಾಗೊ, ಆಲ್ಟ್ರೋಜ್, ಪಂಚ್, ನೆಕ್ಸಾನ್ ಸೇರಿದಂತೆ ವಿವಿಧ ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳನ್ನು ಮಾರಾಟ ಮಾಡುತ್ತಿದೆ. ಸದ್ಯ, ಹೊಚ್ಚ ಹೊಸ 'ಕರ್ವ್' ಕಾರನ್ನು ಬಿಡುಗಡೆಗೊಳಿಸಲು ಸಾಕಷ್ಟು ತಯಾರಿ ನಡೆಸುತ್ತಿದೆ.
ಟಾಟಾ ಮೋಟಾರ್ಸ್, ಜುಲೈ 19ರಂದು (ಶುಕ್ರವಾರ) ಬಹುನಿರೀಕ್ಷಿತ ಕರ್ವ್ (Curvv) ಕೂಪೆ ಎಸ್‌ಯುವಿಯನ್ನು ಅನಾವರಣಗೊಳಿಸಲಿದೆ. ಈ ಕುರಿತಂತೆ ಕಂಪನಿಯು ತನ್ನ ಸಾಮಾಜಿಕ ಜಾಲತಾಣದಲ್ಲಿಯೂ ಮಾಹಿತಿ ಹಂಚಿಕೊಂಡಿದೆ. ಆದಾಗ್ಯೂ ನೂತನ ಕಾರನ್ನು ಅಧಿಕೃತವಾಗಿ ಆಗಸ್ಟ್ 7ರಂದು ಬಿಡುಗಡೆ ಮಾಡಲಿದ್ದು, ಅಂದೇ ಬೆಲೆ ಘೋಷಿಸುವ ನಿರೀಕ್ಷೆಯಿದೆ. ಗ್ರಾಹಕರು ಕೂಡ ಕರ್ವ್ ಉತ್ಪಾದನಾ ಆವೃತ್ತಿ ಹೇಗಿರಲಿದೆ ಎಂಬುದನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಮೊದಲಿಗೆ ಹೊಸ ಟಾಟಾ ಕರ್ವ್ ಕಾರು, ಎಲೆಕ್ಟ್ರಿಕ್ (ವಿದ್ಯುತ್) ಚಾಲಿತ ಆಯ್ಕೆಯಲ್ಲಿ ಬರಲಿದೆ. ಆ ಬಳಿಕ ಇಂಧನ (ಪೆಟ್ರೋಲ್/ಡೀಸೆಲ್) ಚಾಲಿತ ರೂಪದಲ್ಲಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ, ದೇಶಾದ್ಯಂತ ಹಲವು ಡೀಲರ್‌ಶಿಪ್‌ಗಳು ಟಾಟಾ ಕರ್ವ್ ಎಲೆಕ್ಟ್ರಿಕ್ ಎಸ್‌ಯುವಿಗಾಗಿ ಬುಕ್ಕಿಂಗ್ ಪಡೆಯುವುದನ್ನು ಶುರು ಮಾಡಿವೆ ಎಂದು ತಿಳಿದುಬಂದಿದೆ.
ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರು 55 ಅಥವಾ 56 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಒಳಗೊಂಡಿರಲಿದ್ದು, ಭರ್ತಿ ಚಾರ್ಜ್‌ನಲ್ಲಿ 550 ಕಿಲೋಮೀಟರ್ ಕ್ರಮಿಸುತ್ತದೆ ಎನ್ನಲಾಗಿದೆ. ಈ ಕಾರು ಸಿಂಗಲ್ ಮೋಟಾರ್ ಮತ್ತು ಡುಯಲ್ ಮೋಟಾರ್ ಸೆಟಪ್‌ಗಳಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಬಹುದು ಎಂದು ಹೇಳಲಾಗಿದ್ದು, ರೂ.18 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಚಾಲಿತ ರೂಪದಲ್ಲಿ ಬಿಡುಗಡೆಯಾಗಲಿರುವ ಕರ್ವ್ ಕಾರಿಗೆ ಕುರಿತಂತೆ ಮಾತನಾಡುವುದಾದರೆ, 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ನ್ನು ಪಡೆದಿರಲಿದೆ. 6-ಸ್ವೀಡ್ ಮ್ಯಾನುವಲ್ ಅಥವಾ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗಲಿದ್ದು, ರೂ.15 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ದರವನ್ನು ಹೊಂದಿರಬಹುದು ಎನ್ನಲಾಗಿದೆ.
ಇಂಧನ ಹಾಗೂ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಯಲ್ಲಿ ಬರಲಿರುವ ಟಾಟಾ ಕರ್ವ್ ಎಸ್‌ಯುವಿಗಳು ಆಕರ್ಷಕವಾದ ವಿನ್ಯಾಸವನ್ನು ಹೊಂದಿರಲಿವೆ. ಅದಕ್ಕಾಗಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳನ್ನು ಪಡೆದುಕೊಂಡಿರಲಿವೆ ಎಂದು ತಿಳಿದುಬಂದಿದೆ. ಜೊತೆಗೆ 12.5-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಪ್ರೀಮಿಯಂ ಸೌಂಡ್ ಸಿಸ್ಟಮ್, ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ ಹಾಗೂ ಪನೋರಮಿಕ್ ಸನ್‌ರೂಫ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ.
ಹೊಸ ಕರ್ವ್ 'ಕೂಪೆ ಎಸ್‌ಯುವಿ' ವಿಭಾಗದಲ್ಲಿ ಬರುತ್ತಿರುವ ಟಾಟಾದ ಪ್ರಥಮ ಕಾರು ಎಂದು ಬಣ್ಣಿಸಲಾಗಿದೆ. ಈ ಕಾರಿಗೆ ಇಂಧನ ಚಾಲಿತ ವಿಭಾಗದಲ್ಲಿ ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್ ಮತ್ತು ಹ್ಯುಂಡೈ ಕ್ರೆಟಾ ಎಸ್‌ಯುವಿಗಳು ಪ್ರತಿಸ್ಪರ್ಧಿಯಾಗಲಿವೆ. ಎಲೆಕ್ಟ್ರಿಕ್ ವಿಭಾಗದಲ್ಲಿ ಮುಂಬರಲಿರುವ ಮಾರುತಿ ಸುಜುಕಿ ಇವಿಎಕ್ಸ್ ಹಾಗೂ ಹ್ಯುಂಡೈ ಕ್ರೆಟಾ ಇವಿ ಮಾದರಿಗಳು ಪ್ರಬಲವಾದ ಸ್ಪರ್ಧೆಯೊಡ್ಡಲಿವೆ ಎನ್ನಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications