Tata Curvv EV: ನಾಳೆಯಿಂದ ವಿತರಣೆ ಶುರು.. ಶೋರೂಂ ಎಡತಾಕಿದ ಗ್ರಾಹಕರು, ಕಾಯುವಿಕೆ ಅವಧಿ ಎಷ್ಟಿದೆ?
ದೇಶದ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ಮನೆ ಮಾತಾಗಿದೆ. ಇತ್ತೀಚೆಗೆ ಹೊಚ್ಚ ಹೊಸ ಕರ್ವ್ ಇವಿಯನ್ನು (Curvv EV) ಮಾರಾಟಕ್ಕೆ ತಂದಿತ್ತು. ಇದೊಂದು ಪ್ರೀಮಿಯಂ ಎಲೆಕ್ಟ್ರಿಕ್ ಕೂಪೆ ಎಸ್‌ಯುವಿಯಾಗಿದ್ದು, ಅತ್ಯಾಧುನಿಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆಗಸ್ಟ್ 12ರಿಂದ ಈ ಕಾರಿಗಾಗಿ ಬುಕ್ಕಿಂಗ್ ಶುರುವಾಗಿದೆ. ಆಸಕ್ತ ಗ್ರಾಹಕರು ರೂ.21,000 ಮುಂಗಡ ಹಣ ಪಾವತಿಸುವ ಮೂಲಕ ಕಾಯ್ದಿರಿಸಬಹುದು. ನಾಳೆಯಿಂದ (ಆಗಸ್ಟ್ 23) ವಿತರಣೆ ಪ್ರಾರಂಭವಾಗಲಿದೆ. ಬನ್ನಿ.. ಈ ಕಾರಿನ ರೂಪಾಂತರಗಳು ಯಾವುವು.. ಕಾಯುವಿಕೆ ಅವಧಿ ಎಷ್ಟಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.
ದೇಶೀಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಟಾಟಾ ಕರ್ವ್ ಇವಿ (Tata Curvv EV), ರೂ.17.49 ಲಕ್ಷದಿಂದ ರೂ.21.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿ ಸಿಗುತ್ತದೆ. ಈ ಕಾರಿನ ಕ್ರಿಯೇಟಿವ್, ಅಕಾಂಪ್ಲಿಶ್ಡ್, ಅಕಾಂಪ್ಲಿಶ್ಡ್ ಪ್ಲಸ್ ಎಸ್ ರೂಪಾಂತರಗಳು (ವೇರಿಯೆಂಟ್) ಚಿಕ್ಕದಾದ 45 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಹೊಂದಿವೆ.

ಅದೇ ರೀತಿಯಲ್ಲಿ ಅಕಾಂಪ್ಲಿಶ್ಡ್, ಅಕಾಂಪ್ಲಿಶ್ಡ್ ಪ್ಲಸ್ ಎಸ್, ಎಂಪವರ್ಡ್ ಪ್ಲಸ್ ಮತ್ತು ಎಂಪವರ್ಡ್ ಪ್ಲಸ್ ಎ ರೂಪಾಂತರಗಳು ದೊಡ್ಡ ಗಾತ್ರದ 55 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿವೆ. ದೇಶದ ವಿವಿಧ ನಗರಗಳಲ್ಲಿ 45 ಕೆಡಬ್ಲ್ಯೂಹೆಚ್ ಪ್ಯಾಕ್‌ಯನ್ನು ಒಳಗೊಂಡ ರೂಪಾಂತರಗಳು 8 ರಿಂದ 9 ವಾರಗಳು ಮತ್ತು 55 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಪಡೆದಿರುವ ರೂಪಾಂತರಗಳು ವಿತರಣೆಯಾಗಲು ಒಂದೂವರೆ ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿವೆ ಎಂದು ವರದಿಯಾಗಿದೆ.
ಈ ಅಂಕಿಅಂಶಗಳನ್ನು ಗಮನಿಸಿದಾಗ ಟಾಟಾ ಕರ್ವ್ ಇವಿಗೆ ಗ್ರಾಹಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂಬುದು ಸುಲಭವಾಗಿ ಅರ್ಥವಾಗುತ್ತದೆ. ಬೆಲೆ ವಿಚಾರದಲ್ಲಿ ಗರಿಷ್ಠ ಶ್ರೇಣಿ ರೂಪಾಂತರ (ಟಾಪ್ ಎಂಡ್ ವೇರಿಯೆಂಟ್) ನೆಕ್ಸಾನ್ ಇವಿ ಹಾಗೂ ಕರ್ವ್ ಇವಿಗೆ ಸಾಮ್ಯತೆಯಿದೆ. ಈ ಹಿನ್ನೆಲೆ, ಬಹುತೇಕರು ಕರ್ವ್ ಇವಿ ಖರೀದಿಯತ್ತ ಮುಖ ಮಾಡುತ್ತಿದ್ದಾರೆ.

ನೂತನ ಟಾಟಾ ಕರ್ವ್ ಇವಿಯ 45 ಕೆಡಬ್ಲ್ಯೂಹೆಚ್ ಬ್ಯಾಟರಿ ಹೊಂದಿರುವ ರೂಪಾಂತರ, ಸಂಪೂರ್ಣ ಚಾರ್ಜ್‌ನಲ್ಲಿ 502 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. 55 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಪಡೆದಿರುವ ರೂಪಾಂತರ, ಭರ್ತಿ ಚಾರ್ಜ್‌ನಲ್ಲಿ 585 ಕಿ.ಮೀ ಓಡುತ್ತದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುರಿತುಕೊಂಡು ಪ್ರಯಾಣಿಸಬಹುದು.
ಹೊಚ್ಚ ಹೊಸ ಟಾಟಾ ಕರ್ವ್ ಇವಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಏರ್ ಪ್ಯೂರಿಫೈಯರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಪನೊರೊಮಿಕ್ ಸನ್‌ರೂಫ್, 9-ಸ್ಪೀಕರ್ ಜೆಬಿಎಲ್-ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ನಂತಹ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಈ ಕರ್ವ್ ಇವಿ ಸುರಕ್ಷತೆಗೂ ಹೆಸರುವಾಗಿಯಾಗಿದ್ದು, ಪ್ರಯಾಣಿಕರಿಗೂ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 6 ಏರ್‌ಬ್ಯಾಗ್, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications