TATA: ಟಾಟಾದ ಹೊಸ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ.. ಶೀಘ್ರ ಮಾರುಕಟ್ಟೆಗೆ, ನೀವು ದುಡ್ಡು ಕೂಡಿಡಿ!
ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಸಂಸ್ಥೆಯಾಗಿ ಟಾಟಾ ಮೋಟಾರ್ಸ್ (Tata Motors) ಖ್ಯಾತಿ ಗಳಿಸಿದೆ. 2024ರ ಹಣಕಾಸು ವರ್ಷದಲ್ಲಿ ಕಂಪನಿಯು 13.63% ಮಾರುಕಟ್ಟೆ ಪಾಲನ್ನು ಹೊಂದಿದ್ದು, ಪ್ರಮುಖ 10 ಕಾರು ತಯಾರಕ ಸಂಸ್ಥೆಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಗ್ರ ಸ್ಥಾನಕ್ಕೆ ಬರಲು ಸಾಕಷ್ಟು ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ವಿವಿಧ ಹೊಚ್ಚ ಹೊಸ ಕಾರುಗಳನ್ನು ಒಂದಾದ ಮೇಲೆ ಒಂದರಂತೆ ಬಿಡುಗಡೆಗೊಳಿಸುತ್ತಿದೆ. ಶನಿವಾರ ಟಾಟಾ ಮೋಟಾರ್ಸ್ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ನೂತನ ಕರ್ವ್ ಇವಿ (Curvv EV) ಟೀಸರ್ ವಿಡಿಯೋವನ್ನು ಹಂಚಿಕೊಂಡಿದೆ.
ಹೊಚ್ಚ ಹೊಸ ಟಾಟಾ ಕರ್ವ್ ಕಾರನ್ನು 2023ರ ಆಟೋ ಎಕ್ಸ್‌ಪೋ ಹಾಗೂ ಈ ವರ್ಷದ ಫೆಬ್ರವರಿಯಲ್ಲಿ ಭಾರತ್ ಮೊಬಿಲಿಟಿ ಶೋನಲ್ಲಿಯೂ ಪ್ರದರ್ಶಿಸಲಾಗಿತ್ತು. ಇದೊಂದು ಕೂಪ್ ಎಸ್‌ಯುವಿಯಾಗಿದೆ. ಈ ವಿಭಾಗದಲ್ಲಿ ಕಂಪನಿಯಿಂದ ಬರುತ್ತಿರುವ ಮೊದಲ ಕಾರು ಸಹ ಇದೆಯಾಗಿದೆ. ಟಾಟಾ ಮೋಟಾರ್ಸ್ ನೂತನ ಕಾರನ್ನು ಇಂಧನ (ಪೆಟ್ರೋಲ್/ಡೀಸೆಲ್) ಹಾಗೂ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಯಲ್ಲಿ ಅಭಿವೃದ್ಧಿಪಡಿಸುತ್ತಿದೆ.

ಸದ್ಯ ಟಾಟಾದ ಈ ಟೀಸರ್‌ನ್ನು ಗಮನಿಸಿದರೆ, ದೇಶೀಯ ಮಾರುಕಟ್ಟೆಗೆ ಮೊದಲು ಕರ್ವ್ ಇವಿಯೇ (ಎಲೆಕ್ಟ್ರಿಕ್ ಕಾರು) ಬರಲಿದೆ ಎಂದು ಸುಲಭವಾಗಿ ಹೇಳಬಹುದು. ನಂತರ ದಿನಗಳಲ್ಲಿ ಇಂಧನ ಚಾಲಿತ ಮಾದರಿ (ಮಾಡೆಲ್) ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ ಕರ್ವ್ ಎಲೆಕ್ಟ್ರಿಕ್ ಕಾರಿಗೆ ಮುಂಬರಲಿರುವ ಮಾರುತಿ ಸುಜುಕಿ ಇವಿಎಕ್ಸ್ ಮತ್ತು ಹ್ಯುಂಡೈ ಕ್ರೆಟಾ ಇವಿಗಳು ಪ್ರಬಲವಾದ ಸ್ಪರ್ಧೆಯೊಡ್ಡಲಿವೆ.
ಸುಮಾರು 14 ಸೆಕೆಂಡುಗಳಿರುವ ಟೀಸರ್ ವಿಡಿಯೋದಲ್ಲಿ ನೂತನ ಕರ್ವ್ ಇವಿಯ ಹೊರಭಾಗದ ವಿನ್ಯಾಸ (ಡಿಸೈನ್) ಮೇಲ್ನೋಟಕ್ಕೆ ಹೇಗಿರಲಿದೆ ಎಂಬುದನ್ನು ನೋಡಬಹುದು. ಈ ಹಿಂದೆ ಕರ್ವ್ ಕಾರು ಪರೀಕ್ಷಾರ್ಥ ಸಂಚಾರವನ್ನು ನಡೆಸುತ್ತಿದ್ದಾಗ ಸೆರೆಹಿಡಿದ ಫೋಟೋಗಳಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಹಾಗೂ ಮುಂಭಾಗ (ಫ್ರಂಟ್)ದಲ್ಲಿರುವ ಫಾಸಿಯಾ ಎಲ್‌ಇಡಿ ಲೈಟ್ ಬಾರ್‌ನೊಂದಿಗೆ ಸಂಪರ್ಕಿತಗೊಂಡಿದ್ದನ್ನು ಕಾಣಬಹುದಾಗಿತ್ತು.

ಈ ಟಾಟಾ ಕರ್ವ್ ಕಾರಿನ ಒಳಭಾಗದ ಕ್ಯಾಬಿನ್ ವಿನ್ಯಾಸವು ಹೆಚ್ಚು ಅತ್ಯಾಧುನಿಕವಾಗಿರಲಿದೆ. 12-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಲ್-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟ್ವಿನ್-ಸ್ಪೋಕ್ ಸ್ಟೀರಿಂಗ್ ವೀಲ್, ಹೀಟಡ್ & ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 360-ಡಿಗ್ರಿ ಕ್ಯಾಮೆರಾ ಸಿಸ್ಟಮ್, ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿರುವ ನಿರೀಕ್ಷೆಯಿದೆ.
ಎಲೆಕ್ಟ್ರಿಕ್ ರೂಪದಲ್ಲಿ ಬರುವ ಟಾಟಾ ಕರ್ವ್ (Tata Curvv) ಕೂಪ್ ಎಸ್‌ಯುವಿಯು ದೊಡ್ಡದಾದ ಬ್ಯಾಟರಿ ಪ್ಯಾಕ್ ಹೊಂದಿರಲಿದ್ದು, ಭರ್ತಿ ಚಾರ್ಜ್‌ನಲ್ಲಿ 500 ಕಿಲೋಮೀಟರ್ ಕ್ರಮಿಸಲಿದೆ ಎಂದು ಅಂದಾಜಿಸಲಾಗಿದೆ. ಸರಿ ಸುಮಾರು ರೂ.20 ಲಕ್ಷದಿಂದ ರೂ.24 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ದೊರೆಯಬಹುದು ಎಂದು ಹೇಳಲಾಗಿದೆ.
ಇಂಧನ ಚಾಲಿತ ಆಯ್ಕೆಯಲ್ಲಿ ಬಿಡುಗಡೆಯಾಗಲಿರುವ ಕರ್ವ್ ಕಾರು 1.2-ಲೀಟರ್ ಟಿಜಿಡಿಐ ಪೆಟ್ರೋಲ್ ಹಾಗೂ 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಬಹುದು. 6-ಸ್ವೀಡ್ ಮ್ಯಾನುವಲ್ ಮತ್ತು ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ಒಳಗೊಂಡಿರಬಹುದು. ಜೊತೆಗೆ ರೂ.15 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿರಬಹುದು ಎನ್ನಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications