ಕ್ರೆಟಾ, ಸೆಲ್ಟೋಸ್ ಕಾರುಗಳಿಗೆ ಪ್ರಭಲ ಸ್ಪರ್ಧೆ ಒಡ್ಡುತ್ತಾ TATA Curvv: ಬೆಲೆ ಎಷ್ಟಿರಲಿದೆ ಗೊತ್ತಾ?
ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತದ ಹೆಮ್ಮೆಯ ಕಾರಿ ನಿರ್ಮಾಣ ಕಂಪನಿಯಾದ ಟಾಟಾ ಮೋಟಾರ್ಸ್ ಬಹುನಿರೀಕ್ಷಿತ ಕಾರಾದ ಟಾಟಾ ಕರ್ವ್ ಅನ್ನು ಆಗಸ್ಟ್ ತಿಂಗಳ 7 ನೇ ತಾರೀಖಿನಂದು ಭಾರತದಲ್ಲಿ ಲಾಂಚ್ ಮಾಡಲಿದೆ. ಪೆಟ್ರೋಲ್, ಡಸೆಲ್ ಮತ್ತು ಎಲೆಕ್ಟ್ರಿಕ್ ಈ ಮೂರು ಆಯ್ಕೆಗಳಲ್ಲೂ ಕಂಪನಿ ಈ ಕಾರನ್ನು ಲಾಂಚ್ ಮಾಡಲಿದ್ದು, ಪೆಟ್ರೋಲ್ ಆವೃತ್ತಿಯನ್ನು ಕೆಲವು ತಿಂಗಳ ನಂತರ ಲಾಂಚ್ ಮಾಡಲಿದೆ ಎಂಬ ಮಾಹಿತಿಗಳು ಕೇಳಿ ಬರುತ್ತಿದೆ. ಇನ್ನು ಇದೇ ವೇಳೆ ಈ ಕಾರು ಕಾಂಪಾಕ್ಟ್ ಎಸ್‌ಯುವಿಗಳಿಗೆ ಒಂದು ಪ್ರಭಲ ಪ್ರತಿಸ್ಪರ್ಧಿಯಾಗಿರಲಿದೆ ಎಂಬುವುದು ಎಲ್ಲರ ನಿರೀಕ್ಷೆ.
ಇನ್ನು ಕಾಂಪಾಕ್ಟ್ ಎಸ್‌ಯುವಿಗಳ ಸೆಗ್ಮೆಂಟ್‌ನಲ್ಲಿ ವಿರಾಜಮಾನವಾಗಿ ಮೆರೆಯುತ್ತಿರುವ ಕಾರುಗಳೆಂದರೆ ಅದು ಹ್ಯುಂಡೈ ಕ್ರೇಟಾ ಮತ್ತು ಕಿಯಾ ಸೆಲ್ಟೋಸ್. ಈ ಹಿನ್ನಲೆಯಲ್ಲಿ ಟಾಟಾ ಕರ್ವ್ ಕೂಪೆ ಸೆಡಾನ್ ಆಗಿದ್ದರೂ ಈ ಎರಡು ವಾಹನಗಳಿಗೆ ಭಾರೀ ಪೈಪೋಟಿಯನ್ನು ನೀಡಲಿದೆ ಎಂದು ಕಾರು ಪಂಡಿತರು ಹೇಳುತ್ತಿದ್ದಾರೆ.

ಇದಕ್ಕೆ ಪ್ರಮುಖ ಕಾರಣವೆಂದರೆ ಟಾಟಾ ಕರ್ವ್‌ನ (TATA Curvv) ಅಳತೆ ಸುಮಾರು 4300 ಎಂಎಂ. ಅಂದರೆ ಈ ಕಾರು ಅದಾಗಿಯೇ ಮಿಡ್ ಸೈಜ್ ಎಸ್‌ಯುವಿ ಸೆಗ್ಮೆಂಟ್‌ಗೆ ಸೇರಿಕೊಳ್ಳುತ್ತದೆ ಎಂದು. ಈ ಸೆಗ್ಮೆಂಟ್‌ನಲ್ಲಿ ಕ್ರೆಟಾ, ಸೆಲ್ಟೋಸ್ ಜೊತೆಗೆ ಎಂಜಿ ಹೆಕ್ಟರ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಟೊಯೋಟಾ ಹೈ ರೈಡರ್, ಸ್ಕೋಡಾ ಕುಷಾಕ್, ಟೈಗುನ್ ಮತ್ತು ಹೋಂಡಾ ಎಲಿವೇಟ್ ಕಾರು ಮಾದರಿಗಳಿವೆ.
ಟಾಟಾ ಕರ್ವ್ ಬಗ್ಗೆ ನೋಡುವುದಾದರೆ, ಸದ್ಯ, ನೂತನ ಕರ್ವ್ ಇವಿಯ (ಎಲೆಕ್ಟ್ರಿಕ್ ಕಾರು) ಬ್ಯಾಟರಿ ಪ್ಯಾಕ್ ಹಾಗೂ ರೇಂಜ್ ಕುರಿತ ಒಂದಷ್ಟು ವಿವರಗಳು ಸೋರಿಕೆಯಾಗಿವೆ. ಮೂಲಗಳ ಪ್ರಕಾರ, ಈ ಕಾರು ಎರಡು ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ದೊರೆಯಬಹುದು ಎನ್ನಲಾಗಿದೆ.

ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರಿನ ಗರಿಷ್ಠ ಶ್ರೇಣಿ ರೂಪಾಂತರ 55 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹಾಗೂ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಪಡೆದಿರಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 600 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡಲಿದೆ. ಡಿಸಿ ಫಾಸ್ಟ್ ಚಾರ್ಜ್‌ನಲ್ಲಿ 100 ಕಿಲೋಮೀಟರ್ ಕ್ರಮಿಸುವಷ್ಟು ಚಾರ್ಜ್ ಆಗಲು ಕೇವಲ 10 ನಿಮಿಷ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಆದಾಗ್ಯೂ ಆರಂಭಿಕ ಶ್ರೇಣಿ ಮಾದರಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಟಾಟಾ ಕರ್ವ್ ಇವಿ (Tata Curvv EV) ನೋಡುಗರನ್ನು ಸೆಳೆಯುವ ಅತ್ಯಾಧುನಿಕ ವಿನ್ಯಾಸ (ಡಿಸೈನ್) ಹೊಂದಿರಲಿದೆ. ಕೂಪೆ ಎಸ್‌ಯುವಿಯಾಗಿರುವುದರಿಂದ ಇಳಿಜಾರಾದ ರೂಫ್, ದೊಡ್ಡದಾದ ವೀಲ್‌ಗಳು, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಹಾಗೂ ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.
ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. 6 ಏರ್‌ಬ್ಯಾಗ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರೇರ್ ಪಾರ್ಕಿಂಗ್ ಸೇನಾರ್ಸ್, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಫ್ರಂಟ್ ಪಾರ್ಕಿಂಗ್ ಸೇನಾರ್ಸ್, ಟಿಪಿಎಂಎಸ್ (ಟೈರ್ ಒತ್ತಡದ ಮಾನಿಟರಿಂಗ್ ಸಿಸ್ಟಮ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾ ಒಳಗೊಂಡಿರುವ ಸಾಧ್ಯತೆಯಿದೆ.
ಟಾಟಾ ಕರ್ವ್ ಇವಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಸರಿ ಸುಮಾರು ರೂ.18 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿರುವ ನಿರೀಕ್ಷೆಯಿದೆ. ಈ ಕಾರಿಗೆ ಮುಂದಿನ ತಿಂಗಳಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಇವಿಎಕ್ಸ್ ಮತ್ತು ಹ್ಯುಂಡೈ ಕ್ರೆಟಾ ಇವಿಗಳು ಪ್ರಬಲವಾದ ಸ್ಪರ್ಧೆಯೊಡ್ಡಲಿವೆ ಎಂದು ಹೇಳಲಾಗಿದೆ.


Click it and Unblock the Notifications