ಟಾಟಾ ಕರ್ವ್ Vs ಸಿಟ್ರನ್ ಬಸಾಲ್ಟ್: ಸೇಫ್ಟಿಯಲ್ಲಿ ಯಾವುದು ಬೆಸ್ಟ್? ಅಚ್ಚರಿಗೊಳಿಸಿದೆ ಫಲಿತಾಂಶ!
ಟಾಟಾ ಕರ್ವ್ ಎಸ್‌ಯುವಿ ಕೂಪೆಯು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಭಾರತ್ NCAP) ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಇದೇ ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂನಲ್ಲಿ ಸಿಟ್ರನ್ 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಈ ಎರಡೂ ಕಾರುಗಳು ಪ್ರತಿಸ್ಪರ್ಧಿಗಳಾಗಿದ್ದು, ಭಾರತದಲ್ಲಿ ಇತ್ತೀಚೆಗೆ ಹೊಸ ಎಸ್‌ಯುವಿ ಕೂಪೆ ಸೆಗ್ಮೆಂಟಿಗೆ ಎಂಟ್ರಿ ಕೊಟ್ಟಿವೆ. ಬೆಲೆಗೆ ತಕ್ಕಂತೆ ಈ ಎರಡೂ ಕಾರುಗಳು ಫೀಚರ್ಸ್ ಹಾಗೂ ಪರ್ಫಾಮೆನ್ಸ್ ಹೊಂದಿವೆ. ಹಾಗಾದ್ರೆ ಸುರಕ್ಷತೆಯಲ್ಲಿ ಯಾವ ಮಟ್ಟಿಗೆ ಜನಪ್ರಿಯತೆ ಪಡೆದಿವೆ ಎಂಬುದನ್ನು ವಿವರವಾಗಿ ತಿಳಿಯೋಣ.
ಟಾಟಾ ಕರ್ವ್: ಟಾಟಾ ಕರ್ವ್ ಎಸ್‌ಯುವಿ ಕೂಪೆಯು ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಿಗೆ 29.5 ಅಂಕಗಳು ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 43.66 ಅಂಕಗಳನ್ನು ಗಳಿಸಿದೆ. ಹೌದು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಭಾರತ್ NCAP) ನಡೆಸಿದ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡು ಎಂದಿನಂತೆ ತನ್ನ ಗುಣಮಟ್ಟವನ್ನು ಸಾಭೀತುಪಡಿಸಿಕೊಂಡಿದೆ.

ಕರ್ವ್ ಎಸ್‌ಯುವಿಯಲ್ಲಿ ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್ ಮತ್ತು TPMS ಜೊತೆಗೆ ಆರು ಏರ್‌ಬ್ಯಾಗ್‌ಗಳನ್ನು ಸ್ತ್ಯಾಂಡರ್ಡ್ ಆಗಿ ನೀಡಲಾಗಿದೆ. ಟಾಟಾ ಕರ್ವ್ ಎಸ್‍ಯುವಿಯ ಟಾಪ್ ಎಂಡ್ ರೂಪಾಂತರಗಳಲ್ಲಿ 360-ಡಿಗ್ರಿ ಕ್ಯಾಮೆರಾ, ಲೆವೆಲ್ 2 ADAS, ಎಲ್ಲಾ ಡಿಸ್ಕ್ ಬ್ರೇಕ್‌ಗಳು ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಸಹ ನೀಡಲಾಗಿದೆ.
ಪರೀಕ್ಷೆಯಲ್ಲಿ ಮಕ್ಕಳ ರಕ್ಷಣೆಯಲ್ಲಿ ಟಾಟಾ ಕರ್ವ್ ಎಸ್‍ಯುವಿಯು ಉತ್ತಮ ಪರ್ಫಾಮೆನ್ಸ್ ನೀಡಿದೆ. ಮುಂಭಾಗದ ಪ್ರಯಾಣಿಕರು (ಡಮ್ಮಿ) ಸುರಕ್ಷಿತವಾಗಿದ್ದರೆ, ಚಾಲಕನ ಬಲಗಾಲು ಕನಿಷ್ಠ ರಕ್ಷಣೆಯನ್ನು ಪಡೆದುಕೊಂಡಿದೆ. ಮೇಲೆ ತಿಳಿಸಲಾದ ಎಲ್ಲಾ ಸೇಫ್ಟಿ ಫೀಚರ್‌ಗಳೊಂದಿಗೆ ಕರ್ವ್ ಎಸ್‌ಯುವಿ ಹೆಚ್ಚಿನ ಸುರಕ್ಷತೆಯೊಂದಿಗೆ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಗಳಿಸಿದೆ.

ಸಿಟ್ರನ್ ಬಸಾಲ್ಟ್: ಹೊಸ ಸಿಟ್ರನ್ ಬಸಾಲ್ಟ್ ಎಸ್‌ಯುವಿ ಕೂಪೆಯಲ್ಲಿ ಪ್ರಮುಖವಾಗಿ 6 - ಏರ್‌ಬ್ಯಾಗ್, ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ ಗಳಂತಹ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮೇಲೆ ತಿಳಿಸಲಾದ ಸೇಫ್ಟಿ ಫೀಚರ್‌ಗಳೊಂದಿಗೆ ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಿಗೆ 26.19 ಅಂಕಗಳು ಮತ್ತು ಮಕ್ಕಳ ರಕ್ಷಣೆ ವಿಭಾಗದಲ್ಲಿ 49 ಅಂಕಗಳಿಗೆ 35.90 ಅಂಕಗಳನ್ನು ಗಳಿಸಿದೆ. ಈ ಮೂಲಕ 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಪ್ರಯಾಣಿಕರ (ಡಮ್ಮಿ) ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಈ ಕಾರಿನಲ್ಲಿದ್ದ ಸುರಕ್ಷತಾ ವೈಶಿಷ್ಟ್ಯಗಳು ಹೆಚ್ಚಿನ ರಕ್ಷಣೆ ಒದಗಿಸಿವೆ. ಆದರೆ, ಎದೆ ಹಾಗೂ ಕಾಲಿನ ಭಾಗಕ್ಕೆ ಹೆಚ್ಚಿನ ರಕ್ಷಣೆ ನೀಡಲು ಸಾಧ್ಯವಾಗಲಿಲ್ಲ ಎಂದು ವರದಿ ಹೇಳಿದೆ.
ಬೆಲೆ: ಟಾಟಾ ಕರ್ವ್ ಎಸ್‌ಯುವಿ ಕೂಪೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಿದ್ದು, ಪೆಟ್ರೋಲ್ ಎಂಜಿನ್ ಬೆಲೆಗಳು 10 ಲಕ್ಷದಿಂದ 19 ಲಕ್ಷ ರೂ.ವರೆಗೆ ಇದೆ. ಡೀಸೆಲ್ ಎಂಜಿನ್ 11.50 ಲಕ್ಷದಿಂದ 19 ಲಕ್ಷ ರೂ. (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ)ವರೆಗೆ ಇದೆ. ನೀವು ವಿಶಿಷ್ಟವಾದ ಸ್ಟೈಲ್ ಮತ್ತು ಕಾಂಪ್ಯಾಕ್ಟ್ ಎಸ್‌ಯುವಿಗಳಿಂದ ಎದ್ದು ಕಾಣುವ ಕಾರನ್ನು ಬಯಸಿದರೆ, ಟಾಟಾ ಕರ್ವಿವ್ ಉತ್ತಮ ಆಯ್ಕೆಯಾಗಿದೆ.
ಸಿಟ್ರನ್ ಬಸಾಲ್ಟ್ ಎಸ್‌ಯುವಿ ಕೂಪೆ, ರೂ.7.99 ಲಕ್ಷದಿಂದ ರೂ.13.83 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಇದು ಬಸಾಲ್ಟ್ 1.2ಪಿಯು, ಬಸಾಲ್ಟ್ ಪ್ಲಸ್, ಬಸಾಲ್ಟ್ ಟರ್ಬೊ ಪ್ಲಸ್, ಬಸಾಲ್ಟ್ ಟರ್ಬೊ ಎಟಿ ಪ್ಲಸ್ ಹಾಗೂ ಬಸಾಲ್ಟ್ ಟರ್ಬೊ ಮ್ಯಾಕ್ಸ್ ಸೇರಿದಂತೆ ಹಲವು ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ.


Click it and Unblock the Notifications