TATA: ದುಡ್ಡು ಕೂಡಿಡಿ.. 2025ರಲ್ಲಿ ಟಾಟಾದ 8 ಹೊಸ ಕಾರುಗಳು ಮಾರಾಟಕ್ಕೆ.. ಇನ್ನೂ ಶೋರೂಂಗಳು ತುಂಬಿ ತುಳುಕಲಿವೆ!
ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಹಲವು ಕಾರುಗಳನ್ನು ಮಾರಾಟ ಮಾಡುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. 2025 ಟಾಟಾಗೆ ಮಹತ್ವದ ವರ್ಷವಾಗಿದ್ದು, ಹಲವು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ತೆರೆಮರೆಯಲ್ಲಿ ಸಿದ್ಧತೆಯನ್ನು ನಡೆದುತ್ತಿದೆ. ಪ್ರಮುಖವಾಗಿ ಟಿಯಾಗೊ, ಟಿಗೊರ್, ಪಂಚ್ ಫೇಸ್‌ಲಿಫ್ಟ್, ಹ್ಯಾರಿಯರ್ (ಎಲೆಕ್ಟ್ರಿಕ್ + ಪೆಟ್ರೋಲ್), ಸಿಯೆರಾ (ಎಲೆಕ್ಟ್ರಿಕ್ + ಪೆಟ್ರೋಲ್/ಡೀಸೆಲ್) ಹಾಗೂ ಸಫಾರಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟಕ್ಕೆ ತರಲಿದೆ ಎಂದು ವರದಿಯಾಗಿದೆ.
ಟಾಟಾ ಟಿಯಾಗೊ, ಟಿಗೊರ್ ಫೇಸ್‌ಲಿಫ್ಟ್: ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು, ಟಾಟಾ ಕಂಪನಿಯು ಒಂದಷ್ಟು ಬದಲಾವಣೆಗಳನ್ನು ಹೊಂದಿರುವ ಹೊಸ ಟಿಯಾಗೊ (Tiago) ಹಾಗೂ ಟಿಗೂರ್ (Tigor) ಫೇಸ್‌ಲಿಫ್ಟ್ ಮಾಡೆಲ್‌ಗಳನ್ನು ಬಿಡುಗಡೆಗೊಳಿಸಲಿದೆ. ಈ ಕಾರುಗಳು ನವೀನ ಶೈಲಿಯ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಸಾಧ್ಯತೆಯಿದೆ.

ಆದರೆ, ಈ ಟಿಯಾಗೊ ಮತ್ತು ಟಿಗೂರ್ ಕಾರುಗಳ ಪವರ್‌ಟ್ರೇನ್‌ನಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡಲಾಗಿರುವುದಿಲ್ಲ ಎನ್ನಲಾಗಿದೆ. 5 ಆಸನ ಆಯ್ಕೆ ವ್ಯವಸ್ಥೆಯೊಂದಿರುವ ಈ ನೂತನ ಕಾರುಗಳು, 2025ರಲ್ಲಿ ಜನವರಿಯಲ್ಲಿ ಆಯೋಜಿಸಿರುವ 'ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ'ದಲ್ಲಿ ಮಾರಾಟಕ್ಕೆ ಬರುವ ನೀರಿಕ್ಷೆಯಿದೆ. ಈಗಿರುವ ಮಾಡೆಲ್‌ಗಳಿಗಿಂತ ಸ್ವಲ್ಪ ಹೆಚ್ಚಿನ ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.
ಟಾಟಾ ಪಂಚ್ ಫೇಸ್‌ಲಿಫ್ಟ್: ಭಾರತದ ಮಾರುಕಟ್ಟೆಯಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಮೈಕ್ರೋ ಎಸ್‌ಯುವಿಯಾಗಿ ಟಾಟಾ ಪಂಚ್ (Tata Punch) ಹೊರಹೊಮ್ಮಿದೆ. ಈ ಕಾರನ್ನು ಕೂಡ ನವೀಕರಿಸಿ 2025ರಲ್ಲಿಯೇ ಮಾರಾಟಕ್ಕೆ ತರಲು ಕಂಪನಿಯು ತಯಾರಿ ಮಾಡಿಕೊಳ್ಳುತ್ತಿದೆ. ಆದರೆ, ಪವರ್‌ಟ್ರೇನ್‌ನಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ತಿಳಿದುಬಂದಿದೆ.

ಟಾಟಾ ಸಿಯೆರಾ (ಎಲೆಕ್ಟ್ರಿಕ್ + ಪೆಟ್ರೋಲ್/ಡೀಸೆಲ್): ಇದೊಂದು ಎಸ್‌ಯುವಿಯಾಗಿದೆ. ಈ ಕಾರನ್ನು ಟಾಟಾ ಕಂಪನಿಯು ಎಲೆಕ್ಟ್ರಿಕ್ ಮತ್ತು ಪೆಟ್ರೋಲ್/ಡೀಸೆಲ್ ಪವರ್‌ಟ್ರೇನ್‌ನೊಂದಿಗೆ 2025ರ ದ್ವಿತೀಯಾರ್ಧದಲ್ಲಿ ಪರಿಚಯಿಸಲಿದೆ ಎಂದು ಹೇಳಲಾಗಿದೆ. ಇದು ಬೃಹತ್ ಗಾತ್ರದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿರಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 500 ಕಿಲೋಮೀಟರ್‌ವರೆಗೆ ಕ್ರಮಿಸುತ್ತದೆ ಎಂದು ಎನ್ನಲಾಗಿದೆ.
ಈ ಸಿಯೆರಾ (Sierra) ಕಾರು 2.0-ಲೀಟರ್ ಡೀಸೆಲ್ ಹಾಗೂ 1.5-ಲೀಟರ್ ಟಿಜಿಡಿಐ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಪಡೆದಿರುವ ನೀರಿಕ್ಷೆಯಿದೆ. ಡುಯಲ್ ಡಿಜಿಟಲ್ ಡಿಸ್‌ಪ್ಲೇ, ಪನೊರೊಮಿಕ್ ಸನ್‌ರೂಫ್, 6 ಏರ್‌ಬ್ಯಾಗ್‌ಗಳು ಮತ್ತು ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಟಾಟಾ ಹ್ಯಾರಿಯರ್ ಇವಿ: ಇದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ದೊಡ್ಡದಾದ ಬ್ಯಾಟರಿ ಒಳಗೊಂಡಿದ್ದು, ಭರ್ತಿ ಚಾರ್ಜ್‌ನಲ್ಲಿ 500 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡುತ್ತದೆ ಎಂದು ಹೇಳಲಾಗಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರುವ ನೀರಿಕ್ಷೆಯಿದ್ದು, ರೂ.30 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ 2025ರ ಮೊದಲರ್ಧದಲ್ಲಿ ಖರೀದಿಗೆ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ.
ಟಾಟಾ ಹ್ಯಾರಿಯರ್ ಪೆಟ್ರೋಲ್: ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಡೀಸೆಲ್ ಚಾಲಿತ ಹ್ಯಾರಿಯರ್ ಕಾರು ಮಾತ್ರ ಖರೀದಿಗೆ ಲಭ್ಯವಿದೆ. 2023ರ ಆಟೋ ಎಕ್ಸ್‌ಪೋದಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿರುವ ಹ್ಯಾರಿಯರ್ (Harrier) ಎಸ್‌ಯುವಿಯನ್ನು ಅನಾವರಣಗೊಳಿಸಲಾಗಿತ್ತು. ಈ ಕಾರನ್ನು ಸಹ 2025ರಲ್ಲಿ ಮಾರಾಟಕ್ಕೆ ತರುವ ನೀರಿಕ್ಷೆಯಿದೆ.
ಟಾಟಾ ಸಫಾರಿ ಇವಿ: ಇದೊಂದು ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಬಹುತೇಕ ಹ್ಯಾರಿಯರ್ ಇವಿಯಂತೆಯೇ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇದೇ ಜನವರಿಯಲ್ಲಿ ಆಯೋಜಿಸಿರುವ 'ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ'ದಲ್ಲಿ ಈ ಸಫಾರಿ (Safari) ಕಾರನ್ನು ಅನಾವರಣಗೊಳಿಸಬಹುದು ಎನ್ನಲಾಗಿದೆ. ಇದು ದೊಡ್ಡದಾದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿರಲಿದ್ದು, ಪೂರ್ತಿ ಚಾರ್ಜ್‌ನಲ್ಲಿ 500 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡಬಹುದು ಎಂದು ಹೇಳಲಾಗಿದೆ.


Click it and Unblock the Notifications