Tata Nano: 30 Km ಮೈಲೇಜ್.. 4-ಸೀಟರ್, ಬೈಕ್ ಬೆಲೆಗೆ ಹೊಸ ರೂಪದಲ್ಲಿ ಟಾಟಾ ನ್ಯಾನೋ ಮಾರಾಟಕ್ಕೆ?
ದಿವಂಗತ ರತನ್ ಟಾಟಾ (Ratan Tata) ಅವರ ಕನಸಿನ ಕೂಸಾಗಿದ್ದ ಟಾಟಾ ನ್ಯಾನೋ (Tata Nano) ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿ ವರ್ಷಗಳಾಗಿವೆ. ಸದ್ಯ, ಟಾಟಾ ಮೋಟಾರ್ಸ್ ಇದೇ ಕಾರನ್ನು ಹೊಸ ರೂಪದಲ್ಲಿ ಮಾರಾಟಕ್ಕೆ ತರಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ನೂತನ ಟಾಟಾ ನ್ಯಾನೋ ಕಾರು ಮುಂಬರುವ ಕೆಲವೇ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಅತಿಕಡಿಮೆಗೆ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಟಾಟಾ ಮೋಟಾರ್ಸ್ ಈ ಹೊಚ್ಚ ಹೊಸ 'ನ್ಯಾನೋ' ಕಾರನ್ನು ಸಂಚಾರ ದಟ್ಟಣೆಯಿಂದ ಕೂಡಿದ ನಗರ ಸಂಚಾರಕ್ಕೆ ಹೆಚ್ಚು ಯೋಗ್ಯವಾಗಿರುವಂತೆ ವಿನ್ಯಾಸಗೊಳಿಸಲಿದೆ ಎಂದು ತಿಳಿದುಬಂದಿದೆ. ನೂತನ ಟಾಟಾ ನ್ಯಾನೋ ಉತ್ತಮವಾಗಿರುವ ಹೆಡ್‌ಲೈಟ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಜೊತೆಗೆ ಹಲವಾರು ಆಕರ್ಷಕ ಬಣ್ಣಗಳ ಆಯ್ಕೆಯನ್ನು ಹೊಂದಿರಲಿದೆ ಎನ್ನಲಾಗಿದೆ.

ಹೊಸ ಟಾಟಾ ನ್ಯಾನೋ ಶಕ್ತಿಯುತವಾಗಿರುವ ಪೆಟ್ರೋಲ್ ಎಂಜಿನ್ ಒಳಗೊಂಡಿರಲಿದ್ದು, ಯಾವುದೇ ಬೈಕ್‌ಗೂ ಕಮ್ಮಿಯಿಲ್ಲದಂತೆ 30 ಕೆಎಂಪಿಎಲ್‌ಗೂ ಹೆಚ್ಚಿನ ಮೈಲೇಜ್ ನೀಡಬಹುದು ಎಂದು ತಿಳಿದುಬಂದಿದೆ. ಇದರೊಟ್ಟಿಗೆ 100 ಕೆಎಂಪಿಹೆಚ್‌ಗೂ ಅಧಿಕ ಟಾಪ್ ಸ್ಪೀಡ್‌ನ್ನು ಹೊಂದಿರಲಿದೆ ಎನ್ನಲಾಗಿದೆ. ಹಳೆಯ ನ್ಯಾನೋದಂತೆಯೇ 4 ಆಸನ (ಸೀಟ್) ಆಯ್ಕೆ ವ್ಯವಸ್ಥೆಯನ್ನು ಪಡೆದುಕೊಂಡಿರುವ ನೀರಿಕ್ಷೆಯಿದೆ.
ಈ ಕಾರು, ಆಧುನಿಕ ಕಾಲಘಟಕ್ಕೆ ತಕ್ಕಂತೆ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಮುಖವಾಗಿ ಉತ್ತಮ ಗುಣಮಟ್ಟದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪವರ್ ವಿಂಡೋಗಳು, ಏರ್ ಕಂಡೀಷನ್ ಹಾಗೂ ಮ್ಯೂಸಿಕ್ ಸಿಸ್ಟಮ್ ಒಳಗೊಂಡಿರಬಹುದು ಎಂದು ಹೇಳಲಾಗಿದೆ.

ನೂತನ ಟಾಟಾ ನ್ಯಾನೋ ಅತ್ಯಂತ ಕಡಿಮೆ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ಸಾಧ್ಯತೆಯಿದೆ. ಸರಿ ಸುಮಾರು 3 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿರಬಹುದು ಎನ್ನಲಾಗಿದೆ. ಇದರಿಂದ ಹೊಸ ಕಾರು ಖರೀದಿ ಮಾಡಬೇಕು ಎಂದಿರುವ ಎಷ್ಟೋ ಮಧ್ಯಮ ವರ್ಗದ ಜನರ ಆಸೆ ಸುಲಭವಾಗಿ ಈಡೇರಲಿದೆ. ಆದರೆ, ಹೊಸ 'ನ್ಯಾನೋ' ಬಿಡುಗಡೆ ಸಂಬಂಧ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ.
ಹಳೆಯ ಟಾಟಾ ನ್ಯಾನೋ ಕಾರು ಹೇಗಿತ್ತು: 2009ರಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಿದ್ದ 'ನ್ಯಾನೋ' ಕಾರನ್ನು ಮಾರಾಟ ಪ್ರಮಾಣ ಕುಸಿತವಾದ ಹಿನ್ನೆಲೆ, 2018 ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಆಗ ಈ ಕಾರು, ರೂ.2.50 ಲಕ್ಷದಿಂದ ರೂ.3.41 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತಿತ್ತು.

ಈ ಟಾಟಾ ನ್ಯಾನೋ 624 ಸಿಸಿ ಸಾಮರ್ಥ್ಯದ ಪೆಟ್ರೋಲ್/ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿತ್ತು. 37.48 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 51 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿತ್ತು. ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿತ್ತು. 21.9 ರಿಂದ 23.9 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತಿತ್ತು.
ನ್ಯಾನೋ ಕಾರಿಗೆ ಸ್ಫೂರ್ತಿ ಏನು: ಬಹಳ ವರ್ಷಗಳ ಹಿಂದೆ ರತನ್ ಟಾಟಾ ಕಾರಿನಲ್ಲಿ ಪ್ರಯಾಣಿಸುವಾಗ ಮಳೆಯಲ್ಲಿ ದಂಪತಿ ಮತ್ತು ಮಕ್ಕಳು ಬೈಕ್‌ನಲ್ಲಿ ತೆರಳುವಾಗ ನೆಂದು ಬಿಟ್ಟಿದ್ದರು. ಇದನ್ನು ನೋಡಿದ ಅವರಿಗೆ ಮಧ್ಯಮ ವರ್ಗದ ಜನರಿಗೆ ಅಗ್ಗದ ಬೆಲೆಗೆ ಕಾರನ್ನು ತಯಾರಿಸಿ ಮಾರಾಟಗೊಳಿಸುವ ಆಲೋಚನೆ ಹೊಳೆದಿತ್ತು. ಕೆಲವೇ ವರ್ಷಗಳಲ್ಲಿ ಟಾಟಾ ನ್ಯಾನೋ ಕಾರನ್ನು ಮಾರಾಟಕ್ಕೆ ತಂದು ಬಿಟ್ಟರು ಎಂಬುದು ಈಗ ಇತಿಹಾಸ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications