ಪರಿಸರ ಕಾಳಜಿಯಲ್ಲು ಟಾಟಾ ನಂ.1: 2040ರ ವೇಳೆಗೆ ತನ್ನ ಮಹತ್ತರ ಗುರಿ ತಲುಪುವ ವಿಶ್ವಾಸ
ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸೇವೆ ಒದಗಿಸುವ ಕ್ಷೇತ್ರದಲ್ಲಿ ಭಾರತದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಪವರ್, ದೇಶದ ಪ್ರಮುಖ ಮಹಾನಗರಗಳಲ್ಲಿ 850ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸುವ ಮೂಲಕ ದೇಶದ ಇ-ಸಂಚಾರದ ಪರಿವರ್ತನೆಗೆ ನಾಯಕತ್ವ ಒದಗಿಸುವ ಕೆಲಸವನ್ನು ಮುಂದುವರಿಸಿದೆ. ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಅಹಮದಾಬಾದ್, ಬೆಂಗಳೂರು, ಜಮ್ಮು, ಶ್ರೀನಗರ, ಧಾರವಾಡ, ಲಖನೌ ಮತ್ತು ಗೋವಾ ರಾಜ್ಯದಲ್ಲಿ 30ಕ್ಕೂ ಹೆಚ್ಚಿನ ಬಸ್ ಡಿಪೊಗಳಲ್ಲಿ ಚಾರ್ಜಿಂಗ್ ಘಟಕಗಳು ಇವೆ. ಈ ಮೂಲಕ ರಾಷ್ಟ್ರದಾದ್ಯಂತ 2,300ಕ್ಕೂ ಹೆಚ್ಚಿನ ಇ-ಬಸ್‌ಗಳ ಸಂಚಾರಕ್ಕೆ ನೆರವಾಗಿರುವುದಾಗಿ ಹೇಳಿಕೊಂಡಿದೆ.
ಟಾಟಾ ಪವರ್ ಕಂಪನಿಯು ದೇಶದ ಹಲವೆಡೆ ಎಲೆಕ್ಟ್ರಿಕ್ ಬಸ್ ಡಿಪೊಗಳ ವಿನ್ಯಾಸ ರೂಪಿಸಿ, ಅವುಗಳನ್ನು ನಿರ್ಮಿಸಿಕೊಡುವ ಕೆಲಸ ಮಾಡಿದೆ. ಇದರ ಬಹಳ ವ್ಯಾಪಕವಾದ ಚಾರ್ಜಿಂಗ್ ಜಾಲದ ಮೂಲಕ, ಬಸ್‌ಗಳು ಹೊರಸೂಸುವ 1 ಲಕ್ಷ ಟನ್‌ಗಿಂತ ಹೆಚ್ಚಿನ ಇಂಗಾಲದ ಡೈ ಆಕ್ಸೈಡ್ ಅನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ.

ಟಾಟಾ ಪವರ್ ಕಂಪನಿಯ ಚಾರ್ಜಿಂಗ್ ಮೂಲಸೌಕರ್ಯವು ಹೆಚ್ಚಿನ ಸಾಮರ್ಥ್ಯದ ಚಾರ್ಜರ್‌ಗಳನ್ನು ಸಹ ಹೊಂದಿದೆ. ಇಲ್ಲಿನ ಚಾರ್ಜರ್‌ಗಳ ಸಾಮರ್ಥ್ಯವು 180 ರಿಂದ 240 KW ನಡುವೆ ಇದೆ. ಚಾರ್ಜಿಂಗ್‌ಗೆ ಬೇಕಾಗುವ ಸರಾಸರಿ ಅವಧಿಯು 1ರಿಂದ 1.5 ಗಂಟೆಯಷ್ಟು ಇದ್ದು, ತ್ವರಿತವಾಗಿ ಚಾರ್ಜ್ ಮಾಡುವ ಸಾಮರ್ಥ್ಯವು ಸಾರ್ವಜನಿಕ ಸಾರಿಗೆ ಬಸ್ಸುಗಳ ಬೇಡಿಕೆಯನ್ನು ಪೂರೈಸುವಂತಿರುವುದಾಗಿ ಟಾಟಾ ತಿಳಿಸಿದೆ.
ಟಾಟಾ ಪವರ್‌ನ ಚಾರ್ಜಿಂಗ್ ಕೇಂದ್ರಗಳನ್ನು ಬಳಕೆ ಮಾಡಿಕೊಳ್ಳುವ ಇ-ಬಸ್ಸುಗಳ ಸಂಖ್ಯೆಯಲ್ಲಿ ದೆಹಲಿಯು ಮೊದಲ ಸ್ಥಾನದಲ್ಲಿದೆ. ಮುಂಬೈ, ಬೆಂಗಳೂರು, ಅಹಮದಾಬಾದ್, ಜಮ್ಮು ಮತ್ತು ಶ್ರೀನಗರ ನಂತರದ ಸ್ಥಾನಗಳಲ್ಲಿ ಇವೆ. ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಯು ಹೆಚ್ಚಾಗುವಂತೆ ಮಾಡುವ ವಿಚಾರದಲ್ಲಿ ಟಾಟಾ ಪವರ್ ಬದ್ಧತೆ ಹೊಂದಿದೆ.

ವಾಹನಗಳ ತಯಾರಿಕೆಯ ಭಾಗವಾಗಿರುವ ಒಇಎಂ ಕಂಪನಿಗಳ ನಡುವೆ ಸಮನ್ವಯದ ಕೆಲಸವನ್ನು ಬಲಪಡಿಸುವ ಕೆಲಸವನ್ನು ಟಾಟಾ ಪವರ್ ಮಾಡುತ್ತಿದೆ. ಅಲ್ಲದೆ, ಬೇರೆ ಬೇರೆ ರಾಜ್ಯಗಳ ಸರ್ಕಾರಿ ಸಾರಿಗೆ ನಿಗಮಗಳ ಬಲವರ್ಧನೆಯ ಕೆಲಸದಲ್ಲಿಯೂ ಅದು ತೊಡಗಿಸಿಕೊಂಡಿದೆ. ಈ ಮೂಲಕ ಟಾಟಾ ಪವರ್ ಕಂಪನಿಯು ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಮಗ್ರ ಸೇವೆಗಳನ್ನು ಒದಗಿಸುತ್ತಿರುವುದಾಗಿ ಹೇಳಿದೆ.
ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ತಗ್ಗಿಸುವ ವಿಚಾರದಲ್ಲಿ ಭಾರತವು ಹೊಂದಿರುವ ಗುರಿಗೆ ಅನುಗುಣವಾಗಿ ಟಾಟಾ ಪವರ್ ಕಂಪನಿಯು, 2040ರ ವೇಳೆಗೆ ಈ ಗುರಿಯನ್ನು ತಲುಪುವ ಬದ್ಧತೆಯನ್ನು ವ್ಯಕ್ತಪಡಿಸಿದೆ. ಇದಕ್ಕಾಗಿ ಟಾಟಾ ಪವರ್ ಕಂಪನಿಯು ಮೇಲ್ಛಾವಣಿ ಸೌರವಿದ್ಯುತ್ ಉತ್ಪಾದನಾ ಉಪಕರಣ (Rooftop solar power generation equipment), ಸ್ಮಾರ್ಟ್ ಮೀಟರಿಂಗ್ ಸೌಲಭ್ಯ, ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಒದಗಿಸುತ್ತಿದೆ.
ಆ ಮೂಲಕ ಕಂಪನಿಯು ಸುಸ್ಥಿರವಾದ ಜೀವನಶೈಲಿ ಅಳವಡಿಸಿಕೊಳ್ಳಲು ಉತ್ತೇಜನ ನೀಡುತ್ತಿದೆ. ಕಂಪನಿಯ ಈ ಬದ್ಧತೆಗೆ 'ಸುಸ್ಥಿರವಾಗಲು ಸಾಧ್ಯವಿದೆ' ( Sustainable Is Attainable) ಅಭಿಯಾನವು ಬಲಕೊಡುವ ಕೆಲಸ ಮಾಡಿದೆ. ಈ ಅಭಿಯಾನವು ಪರಿಸರ ಪೂರಕ ಇಂಧನಗಳ ಬಳಕೆಯನ್ನು ವ್ಯಾಪಕಗೊಳಿಸುವ ಉದ್ದೇಶವನ್ನು, ಸುಸ್ಥಿರತೆಯನ್ನು ಜನರ ಅಭಿಯಾನವನ್ನಾಗಿಸುವ ಉದ್ದೇಶವನ್ನು ಹೊಂದಿರುವುದಾಗಿ ತಿಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications