ಟಾಟಾ ಪಂಚ್ ಎದೆ ನಡುಗಿಸುವ ಸುದ್ದಿ: ಎಸ್‌ಯುವಿ ಎಕ್ಸ್‌ಟರ್ ಮೇಲೆ ಭಾರೀ ಆಫರ್ ನೀಡಿದ ಹ್ಯುಂಡೈ!
ಟಾಟಾ ಪಂಚ್, ನಿಸಾನ್ ಮ್ಯಾಗ್ನೈಟ್, ಸಿಟ್ರಾನ್ ಸಿ3 ಕಾರುಗಳ ಸದ್ದನ್ನು ಅಡಗಿಸಲೆಂದು ಹ್ಯುಂಡೈ ಕಂಪನಿ ಭಾರತೀಯ ಮಾರುಕಟ್ಟೆಗೆ ತಂದ ಕಾರು ಹ್ಯುಂಡೈ ಎಕ್ಸ್‌ಟರ್. ಮಾರುಕಟ್ಟೆಗೆ ಬಂದ ಕೆಲ ದಿನಗಳಲ್ಲೇ ಭಾರೀ ಅಬ್ಬರವನ್ನು ಮಾಡಿ ಸಾಕಷ್ಟು ಸಂಖ್ಯೆಯಲ್ಲಿ ಮಾರಾಟವಾದ, ಮಾರಾಟವಾಗುತ್ತಿರುವ ಈ ಕಾರು ಆ ಸೆಗ್ಮೆಂಟ್‌ನಲ್ಲಿ ಭಾರೀ ಫೀಚರ್‌ಗಳನ್ನು ನೀಡುತ್ತಿದೆ.
ಆದರೆ ಹಲವು ಸಮಯಗಳಿಂದ ಈ ಕಾರಿನ ಮೇಲೆ ಏನಾದರು ಡಿಸ್ಕೌಂಟ್ ಇದ್ದರೆ ಚೆನ್ನಾಗಿರುತ್ತಿತ್ತು ಎಂದು ಪ್ಲಾನ್ ಮಾಡುತ್ತಿದ್ದ ಗ್ರಾಹಕರೆಲ್ಲರಿಗೂ ಈ ಒಂದು ಕಾರು ಬಿಟ್ಟು ಬೇರೆ ಹ್ಯುಂಡೈ ಕಾರುಗಳಿಗೆ ಆಫರ್ ಲಭಿಸುತ್ತಿತ್ತು. ಆದರೆ ಇದೀಗ ಮೊದಲ ಬಾರಿಗೆ ಈ ಕಾರಿಗೆ ಕಂಪನಿಯು ಡಿಸ್ಕೌಂಟ್ ಅನ್ನು ನೀಡುತ್ತಿದೆ. ತಿಂಗಳಿಗೆ ಸುಮಾರು ಎಂಟು ಸಾವಿರ ಯೂನಿಟ್ ಎಕ್ಸ್‌ಟರ್ ಕಾರು ಮಾರಾಟವಾಗುತ್ತಿದ್ದು, ಈ ಆಫರ್‌ನಿಂದ ಇದರ ಮಾರಾಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮಾಹಿತಿಗಳ ಪ್ರಕಾರ ಹ್ಯುಂಡೈ ಎಕ್ಸ್‌ಟರ್‌ಗೆ (Hyundai Exter) ಕಪನಿಯು ಸುಮಾರು ಹತ್ತು ಸಾವಿರ ರೂಪಾಯಿಗಳ ಎಕ್ಸ್‌ಚೇಂಜ್ ಬೋನಸ್ ಅನ್ನು ನೀಡುತ್ತಿದೆ. ಈ ಮೂಲಕ ಈ ವರ್ಷ ಇದೇ ಮೊದಲ ಬಾರಿಗೆ ಕಂಪನಿ ಈ ಕಾರಿನ ಮೇಲೆ ಆಫರ್ ನೀಡಿದ್ದು, ಈ ಕಾರನ್ನು ಕೊಳ್ಳಬೇಕು ಎಂದುಕೊಳ್ಳುವವರಿಗೆ ಇದೊಂದು ಸುಸಮಯ ಎಂದೇ ಹೇಳಬಹುದು. ಈ ಮೂಲಕ ಜನರ ಬಹುದಿನದ ಬೇಡಿಕೆಗೆ ಕಂಪನಿ ಸೊಪ್ಪು ಹಾಕಿದೆ.
ಹ್ಯುಂಡೈ ಎಕ್ಸ್‌ಟರ್ ಕಾರಿನ ಬಗ್ಗೆ ನೋಡುವುದಾದರೆ, ಈ ಎಸ್‌ಯುವಿ, 1.2-ಲೀಟರ್, 4 ಸಿಲಿಂಡರ್ (ಪೆಟ್ರೋಲ್) ಎಂಜಿನ್ ಹೊಂದಿದ್ದು, 81.8 bhp ಗರಿಷ್ಠ ಪವರ್ ಹಾಗೂ 113.8 Nm ಪಿಕ್ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‌ಜಿ ಮೋಡ್ ನಲ್ಲಿ 67.7 bhp ಪವರ್ ಮತ್ತು 95.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಆವೃತ್ತಿಯು ಮ್ಯಾನ್ಯುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಸಿಎನ್‌ಜಿ ಆವೃತ್ತಿಯು ಮ್ಯಾನ್ಯುವಲ್ (5 ಸ್ಪೀಡ್) ಗೇರ್‌ಬಾಕ್ಸ್ ಅನ್ನು ಪಡೆದಿದೆ. ಹ್ಯುಂಡೈ ಎಕ್ಸ್‌ಟರ್ ಕಾರಿನ ಮೈಲೇಜ್ ವಿಚಾರವಾಗಿ ಮಾತನಾಡುವದಾದರೆ, ಪೆಟ್ರೋಲ್ ಚಾಲಿತ ಕಾರು, 19.2km/l - 19.4km/l ಇಂಧನ ದಕ್ಷತೆಯನ್ನು ಹೊಂದಿದೆ. ಸಿಎನ್‌ಜಿ ಚಾಲಿತ ಕಾರು ಗರಿಷ್ಠ 27.1km/kg ಮೈಲೇಜ್ ನೀಡುತ್ತದೆ.
ಈ ಕಾರು, 3,815 ಎಂಎಂ ಉದ್ದ, 1,710 ಎಂಎಂ ಅಗಲ ಮತ್ತು 1,631 ಎಂಎಂ ಎತ್ತರವನ್ನು ಹೊಂದಿದೆ. ವೀಲ್‌ಬೇಸ್ 2,450 ಎಂಎಂ ಉದ್ದವಿದ್ದು, ಗ್ರೌಂಡ್ ಕ್ಲಿಯರೆನ್ಸ್ 185 ಎಂಎಂ ಇದೆ. ಪೆಟ್ರೋಲ್ ಆವೃತ್ತಿ 391 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಪಡೆದಿದೆ.

ಹ್ಯುಂಡೈ ಎಕ್ಸ್‌ಟರ್ ಸೀಟುಗಳು ಲೆಥೆರೆಟ್ ಅಪ್‌ಹೋಲ್‌ಸ್ಟರಿ ಫೀಚರ್ಸ್ ಹೊಂದಿದ್ದು, ಎಲ್ಲ ವಯಸ್ಸಿನವರು ಆರಾಮದಾಯಕವಾಗಿ ಪ್ರಯಾಣಿಸಬಹುದು. ಸುರಕ್ಷತೆಯ ದೃಷ್ಟಿಯಿಂದ ಈ ಕಾರು ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಅಸಿಸ್ಟ್ ಕಂಟ್ರೋಲ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಸೀಟ್‌ಬೆಲ್ಟ್ ರಿಮೈಂಡರ್, ISOFIX ಚೈಲ್ಡ್ ಸೀಟ್ ಆಂಕರ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications