ಬೆಸ್ಟ್ ಮೈಲೇಜ್.. ಈ ವರ್ಷ ಬಿಡುಗಡೆಯಾದ ಟಾಟಾ, ಮಾರುತಿ, ಮಹೀಂದ್ರಾದ ಕಾರುಗಳಿಗಾಗಿ ಮುಗಿಬಿದ್ದ ಗ್ರಾಹಕರು!
ವಿಶ್ವದಲ್ಲಿಯೇ ಭಾರತ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಹತ್ತಾರು ಕಂಪನಿಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ ಹಾಗೂ ಎಂಪಿವಿಗಳನ್ನು ಮಾರಾಟ ಮಾಡುತ್ತಿವೆ. ಅದರಲ್ಲೂ ಟಾಟಾ, ಮಾರುತಿ ಸುಜುಕಿ ಹಾಗೂ ಮಹೀಂದ್ರಾ ಸೇರಿದಂತೆ ವಿವಿಧ ಕಾರು ತಯಾರಕರಿಗೆ ಈ ವರ್ಷ ಹೆಚ್ಚು ಮಹತ್ವದಾಗಿದ್ದು, ನೂತನ ಎಕ್ಸ್‌ಯುವಿ 3ಎಕ್ಸ್ಒ, ಸ್ವಿಫ್ಟ್, ಬಸಾಲ್ಟ್, ಥಾರ್ ರಾಕ್ಸ್, ಕರ್ವ್ ಹಾಗೂ ಡಿಜೈರ್ ಕಾರುಗಳು ಅದ್ದೂರಿಯಾಗಿ ಬಿಡುಗಡೆಗೊಂಡವು. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಮೊದಲಿಗೆ ಈ ವರ್ಷದ ಏಪ್ರಿಲ್‌ನಲ್ಲಿ ಪರಿಚಯಿಸಲಾದ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (Mahindra XUV 3XO) ಎಸ್‌ಯುವಿ ಬಗ್ಗೆ ಮಾತನಾಡೋಣ. ಇದು 7.79 ಲಕ್ಷದಿಂದ ರೂ.15.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ವಿಶೇಷವಾಗಿ ಮೇ.15 ರಂದು ಬುಕ್ಕಿಂಗ್ ಆರಂಭಿಸಿದ 1 ಗಂಟೆಯೊಳಗೆ ನೂತನ ಎಕ್ಸ್‌ಯುವಿ 3ಎಕ್ಸ್ಒಗಾಗಿ ಸರಿ ಸುಮಾರು 50,000 ಆರ್ಡರ್‌ಗಳು ಬಂದಿದ್ದವು.

ಹೊಸ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಎಸ್‌ಯುವಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 17.96 ರಿಂದ 21.2 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು. ಈ ಕಾರು 10.25-ಇಂಚಿನ ಡುಯಲ್ ಡಿಸ್‌ಪ್ಲೇಗಳು, ಸನ್‌ರೂಫ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಹ್ಯಾಚ್‌ಬ್ಯಾಕ್‌ನ್ನು ಮೇ 9 ರಂದು ಮಾರಾಟಕ್ಕೆ ತರಲಾಯಿತು. ಇದು ರೂ.6.49 ಲಕ್ಷದಿಂದ ರೂ.9.59 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದ್ದು, 24.80 ರಿಂದ 32.85 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಈ ಕಾರಿನಲ್ಲಿಯೂ 5 ಜನರು ಪ್ರಯಾಣಿಸಬಹುದು.

ನೂತನ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋ ಕ್ಲೇಮೇಟ್ ಕಂಟ್ರೋಲ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಹೊಂದಿದೆ.
ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx) ಆಫ್-ರೋಡ್ ಎಸ್‌ಯುವಿಯನ್ನು ಆಗಸ್ಟ್ 14ರ ತಡರಾತ್ರಿ ಬಿಡುಗಡೆಗೊಳಿಸಲಾಗಿತ್ತು. ಈ ಕಾರು ರೂ.12.99 ಲಕ್ಷದಿಂದ ರೂ.22.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಒಂದೇ ದಿನದಲ್ಲಿ 1.76 ಲಕ್ಷ ಬುಕ್ಕಿಂಗ್ ಪಡೆದುಕೊಳ್ಳುವ ಮೂಲಕ ದೊಡ್ಡ ದಾಖಲೆಯನ್ನು ಕೂಡ ಬರೆದಿತ್ತು.

ಈ ಥಾರ್ ರಾಕ್ಸ್ ಎಸ್‌ಯುವಿ 2.0-ಲೀಟರ್ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಮತ್ತು 2-ಲೀಟರ್ 4-ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 12.4 ರಿಂದ 15.2 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಸಿಟ್ರನ್ ಬಸಾಲ್ಟ್ (Citroen Basalt) ಕೂಪೆ ಎಸ್‌ಯುವಿಯನ್ನು ಆಗಸ್ಟ್ 30 ರಂದು ಬಿಡುಗಡೆಗೊಳಿಸಲಾಯಿತು. ಈ ಕಾರು ಕನಿಷ್ಠ ರೂ.7.99 ಲಕ್ಷ ಮತ್ತು ಗರಿಷ್ಠ ರೂ.13.95 ಲಕ್ಷ (ಎಕ್ಸ್ ಶೋರೂಂ) ದರವನ್ನು ಒಳಗೊಂಡಿದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 18 ರಿಂದ 19.5 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ಟಾಟಾ ಕರ್ವ್ (Tata Curvv) ಕೂಪೆ ಎಸ್‌ಯುವಿಯನ್ನು ಸೆಪ್ಟೆಂಬರ್ 2 ರಂದು ಮಾರಾಟಕ್ಕೆ ತರಲಾಯಿತು. ಇದು ರೂ.10 ಲಕ್ಷದಿಂದ ರೂ.19 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 12 ರಿಂದ 17 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ನೂತನ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಸೆಡಾನ್‌ನ್ನು ನವೆಂಬರ್ 11 ರಂದು ಅದ್ದೂರಿಯಾಗಿ ಬಿಡುಗಡೆಗೊಳಿಸಿಲಾಯಿತು. ಈ ಕಾರು ರೂ.6.79 ಲಕ್ಷದಿಂದ ರೂ.9.84 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 1.2-ಲೀಟರ್ 3 ಸಿಲಿಂಡರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ. 24.79 ರಿಂದ 33.73 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.


Click it and Unblock the Notifications








