ಮಾರುತಿ ಬ್ರೆಝಾ, ಫ್ರಾಂಕ್ಸ್ ಕಾರುಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಟಾಟಾ ಪಂಚ್..!
ದೇಶದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿಗಳು ದಿನದಿಂದ ದಿನಕ್ಕೆ ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ಇವುಗಳು ಕೈಗೆಟುಕುವ ಬೆಲೆ ಹಾಗೂ ಆಕರ್ಷಕ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಗ್ರಾಹಕರು ಕೂಡ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಈ ವಿಭಾಗದಲ್ಲಿ ಪ್ರಾಬಲ್ಯವನ್ನು ಸಾಧಿಸಲು ಟಾಟಾ, ಮಾರುತಿ ಸುಜುಕಿ, ಮಹೀಂದ್ರಾ, ಹ್ಯುಂಡೈ, ಕಿಯಾ ಮತ್ತು ನಿಸ್ಸಾನ್ ಕಂಪನಿಗಳು ಪ್ರಬಲ ಪೈಪೋಟಿಯನ್ನು ನಡೆಸುತ್ತಿದ್ದು, ಈ ಮೇ ತಿಂಗಳ 'ಕಾಂಪ್ಯಾಕ್ಟ್ ಎಸ್‌ಯುವಿ' ಮಾರಾಟದ ಅಂಕಿಅಂಶಗಳು ಬಹಿರಂಗಗೊಂಡಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಟಾಟಾ ಪಂಚ್ (Tata Punch) ಪ್ರಖ್ಯಾತ ಎಸ್‌ಯುವಿಯಾಗಿದ್ದು, ಮೇ (2024)ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಈ ಮೂಲಕ ಪ್ರತಿಸ್ಪರ್ಧಿ ಕಂಪನಿಗಳ ಕಾರುಗಳನ್ನು ಹಿಂದಿಕ್ಕಿ 'ಕಾಂಪ್ಯಾಕ್ಟ್ ಎಸ್‌ಯುವಿ' ವಿಭಾಗದಲ್ಲಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಒಟ್ಟು 18,949 ಯುನಿಟ್ ಪಂಚ್ ಕಾರುಗಳನ್ನು ಗ್ರಾಹಕರು ಖರೀದಿಸಿದ್ದು, 2023ರ ಮೇ ತಿಂಗಳಿಗೆ ಹೋಲಿಸಿದರೆ (11,124 ಯುನಿಟ್) ಶೇಕಡ 70% ಪ್ರಗತಿ ಕಂಡಿದೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಪಂಚ್ ಎಸ್‌ಯುವಿ ರೂ.6.13 ಲಕ್ಷದಿಂದ ರೂ.10.20 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 18.8 ರಿಂದ 26.99 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ಆಟೋಮೆಟಿಕ್ ಎಸಿ, ಪುಶ್-ಬಟನ್ ಸ್ಟಾರ್ಟ್/ ಸ್ಟಾಪ್, ಕ್ರೂಸ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಎಸ್‌ಯುವಿಯು ಎರಡನೇ ಸ್ಥಾನದಲ್ಲಿದ್ದು, 2024ರ ಮೇನಲ್ಲಿ 14,186 ಯುನಿಟ್ ಕಾರುಗಳನ್ನು ಮಾರಾಟಗೊಳಿಸಲಾಗಿದೆ. ಹೋದ ವರ್ಷದ ಇದೇ ಅವಧಿಯ 13,398 ಯುನಿಟ್‌ಗೆ ಹೋಲಿಸಿದರೆ, ಶೇಕಡ 6% ಬೆಳವಣಿಗೆಯನ್ನು ಸಾಧಿಸಿದೆ. ಈ ಬ್ರೆಝಾ ಎಸ್‌ಯುವಿಯು ರೂ.8.34 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ.

ಮೂರನೇ ಸ್ಥಾನದಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಎಸ್‌ಯುವಿ ಇದ್ದು, ಕಳೆದ ಮೇನಲ್ಲಿ 12,681 ಯುನಿಟ್ ಕಾರುಗಳು ಮಾರಾಟವಾಗಿವೆ. 2023ರ ಮೇ ತಿಂಗಳಿಗೆ ಹೋಲಿಸಿದರೆ (9,863 ಯುನಿಟ್) ಶೇಕಡ 29% ಪ್ರಗತಿಯಾಗಿದೆ. ನೂತನ ಫ್ರಾಂಕ್ಸ್ ಕಾರು ರೂ.7.51 ಲಕ್ಷದಿಂದ ರೂ.13.04 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ಮಾರುತಿ ಫ್ರಾಂಕ್ಸ್ ಎಸ್‌ಯುವಿಯು 20.1 ರಿಂದ 28.51 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಹಿಲ್-ಹೋಲ್ಡ್ ಅಸಿಸ್ಟ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಟಾಟಾ ನೆಕ್ಸಾನ್ ಎಸ್‌ಯುವಿ ನಾಲ್ಕನೇ ಸ್ಥಾನದಲ್ಲಿದೆ. ಆದರೂ ಮಾರಾಟ ಪ್ರಮಾಣ ಇಳಿಕೆಯಾಗಿದೆ. 2024ರ ಮೇನಲ್ಲಿ 11,457 ಯುನಿಟ್ ಕಾರುಗಳನ್ನು ಮಾರಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ (14,423 ಯುನಿಟ್) ಶೇಕಡ 21% ಕುಸಿತ ಕಂಡಿದೆ. ಈ ಕಾರು, ರೂ.8 ಲಕ್ಷದಿಂದ ರೂ.15.80 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಏಪ್ರಿಲ್ ಕೊನೆಯಲ್ಲಿ ಬಿಡುಗಡೆಯಾಗಿದ್ದ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (Mahindra XUV 3XO) ಎಸ್‌ಯುವಿ ಐದನೇ ಸ್ಥಾನದಲ್ಲಿದ್ದು, ಬರೊಬ್ಬರಿ 10,000 ಯುನಿಟ್ ಕಾರುಗಳು ಮಾರಾಟವಾಗಿವೆ. ಆರನೇ ಸ್ಥಾನದಲ್ಲಿ ಹ್ಯುಂಡೈ ವೆನ್ಯೂ (9,327 ಯುನಿಟ್) ಇದ್ದು, ನಂತರದ ಸ್ಥಾನಗಳಲ್ಲಿ ಹುಂಡೈ ಎಕ್ಸ್‌ಟರ್ (7,697 ಯುನಿಟ್), ಕಿಯಾ ಸೋನೆಟ್ (7,433 ಯುನಿಟ್), ಮಹೀಂದ್ರಾ ಥಾರ್ (5,750 ಯುನಿಟ್), ನಿಸ್ಸಾನ್ ಮ್ಯಾಗ್ನೈಟ್ (2,211 ಯುನಿಟ್) ಕಾರುಗಳಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications