Toyota: ಟೊಯೊಟಾದಿಂದ ಮಹಾರಾಷ್ಟ್ರದಲ್ಲಿ ರೂ.25,000 ಕೋಟಿ ಹೂಡಿಕೆ.. 8,000 ಉದ್ಯೋಗ ಸೃಷ್ಟಿ!
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor - TKM), ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ರೂ.20,000 ಕೋಟಿ ವೆಚ್ಚದಲ್ಲಿ ಹೊಸ ಉತ್ಪಾದನಾ ಘಟಕ ಸ್ಥಾಪಿಸಲು ಉದ್ದೇಶಿಸಿದೆ. ಈ ಸಂಬಂಧ ಬುಧವಾರ ಮಹಾರಾಷ್ಟ್ರ ಸರ್ಕಾರ (Maharashtra Government) ಜೊತೆಯಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಪ್ರತಿಕ್ರಿಯೆ ನೀಡಿದ್ದು, 'ಮಹಾರಾಷ್ಟ್ರವು ಹೂಡಿಕೆದಾರರ ನೆಚ್ಚಿನ ತಾಣವಾಗಿದೆ ಎಂದು ಮತ್ತೊಮ್ಮೆ ದೃಢಪಟ್ಟಿದೆ' ಎಂದಿದ್ದಾರೆ.
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ರೂ.20 ಸಾವಿರ ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಆರಂಭಿಸುವ ಹೊಸ ತಯಾರಿಕಾ ಘಟಕದಿಂದ 8,000 ಮಂದಿಗೆ ನೇರ ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ. ಪರೋಕ್ಷವಾಗಿ 16,000 ಜನರಿಗೆ ಕೆಲಸ ದೊರೆಯಲಿದೆ ಎಂದು ಅಂದಾಜಿಸಲಾಗಿದೆ. ಈ ಉತ್ಪಾದನಾ ಘಟಕ ಮೂರು ವರ್ಷಗಳಲ್ಲಿ ಕಾರ್ಯಾರಂಭ ಮಾಡಲಿದ್ದು, ವಾರ್ಷಿಕ 4 ಲಕ್ಷ ಯುನಿಟ್ ಕಾರುಗಳನ್ನು ತಯಾರಿಸಲು ಯೋಜಿಸಲಾಗಿದೆ.

ಇದು ದೇಶದಲ್ಲಿ ಟೊಯೊಟಾದ ಮೂರನೇ ಉತ್ಪಾದನಾ ಘಟಕವಾಗಿದೆ. ಸದ್ಯ ಕರ್ನಾಟಕದ ಬಿಡದಿಯಲ್ಲಿ ಎರಡು ಘಟಕಗಳನ್ನು ಹೊಂದಿದೆ. 2023ರಲ್ಲಿ ಬಿಡದಿಯಲ್ಲಿಯೂ ಕಾರು ತಯಾರಿಕೆ ಸಾಮರ್ಥ್ಯವನ್ನು ವಾರ್ಷಿಕ 1 ಲಕ್ಷ ಯುನಿಟ್‌ಗೆ ಹೆಚ್ಚಿಸಲು ಟೊಯೊಟಾ ರೂ.3,300 ಕೋಟಿ ಬಂಡವಾಳ ಹೂಡಿಕೆಯನ್ನು ಘೋಷಿಸಿದೆ. ಈ ಉತ್ಪಾದನಾ ಘಟಕದಿಂದ 6000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆತಿದೆ.

ಈ ಬಗ್ಗೆ ಮಾತನಾಡಿರುವ ಟೊಯೊಟಾ ಸಿಇಒ ಮಸಕಾಜು ಯೋಶಿಮುರಾ ಅವರು, 'ನಾವು ಭಾರತವು ಸ್ವಚ್ಛ ಹಾಗೂ ಹಸಿರು ಚಲನಶೀಲತೆ ವಾಹನಗಳ ಜಾಗತಿಕ ಉತ್ಪಾದನಾ ಕೇಂದ್ರವಾಗಲಿದೆ ಎಂದು ನಂಬುತ್ತೇವೆ. ಈ ಒಡಂಬಡಿಕೆ ದೇಶ ಮುಂದಿನ ಬೆಳವಣಿಗೆಯ ಹಂತಕ್ಕೆ ದಾಪುಗಾಲು ಹಾಕುತ್ತಿದೆ ಎಂಬುದಕ್ಕೆ ಒಂದು ಉತ್ತಮ ನಿದರ್ಶನವಾಗಿದೆ' ಎಂದು ಹೇಳಿದ್ದಾರೆ.
ಕಳೆದ ತಿಂಗಳು ಬೆಂಗಳೂರು ಮೂಲದ ಎಥರ್ ಎನರ್ಜಿ (Ather Energy) ಮಹಾರಾಷ್ಟ್ರದಲ್ಲಿ ತಯಾರಿಕಾ ಘಟಕವನ್ನು ಸ್ಥಾಪಿಸುವ ಸಂಬಂಧ ಒಪ್ಪಂದ ಮಾಡಿಕೊಂಡಿತ್ತು. ಈ ಕುರಿತಂತೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, 'ಎಥರ್ ಸಂಸ್ಥಾಪಕ ಸ್ವಪ್ನಿಲ್ ಜೈನ್ ಅವರೊಂದಿಗೆ ಸಭೆ ನಡೆಸಲಾಯಿತು. ಸಂಸ್ಥೆಯು ತನ್ನ 3ನೇ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮಹಾರಾಷ್ಟ್ರದ ಔರಂಗಾಬಾದ್‌ನ್ನು ಆಯ್ಕೆ ಮಾಡಿದೆ. ನನಗೆ ಅದು ಸಂತೋಷವನ್ನು ತಂದಿದೆ' ಎಂದು ತಿಳಿಸಿದ್ದರು.
'ಹೊಸ ತಯಾರಿಕಾ ಘಟಕದ ಸ್ಥಾಪನೆಗೆ ರೂ.2000 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ಸರಿ ಸುಮಾರು 4000 ಜನರಿಗೆ ಉದ್ಯೋಗ ಸಿಗಲಿದೆ. ಈ ಉತ್ಪಾದನಾ ಘಟಕದಲ್ಲಿ ವಾರ್ಷಿಕ 1 ಮಿಲಿಯನ್ (10 ಲಕ್ಷ) ಯುನಿಟ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಹಾಗೂ ಬ್ಯಾಟರಿ ಪ್ಯಾಕ್‌ಗಳನ್ನು ಉತ್ಪಾದಿಸಲಾಗುತ್ತದೆ. ಈ ಮಹತ್ವದ ಹೂಡಿಕೆಯು ವಿದ್ಯುತ್ ಚಲನಶೀಲತೆ ಕ್ರಾಂತಿಯಲ್ಲಿ ಮಹಾರಾಷ್ಟ್ರದ ಪಾತ್ರವನ್ನು ಹೆಚ್ಚಿಸುತ್ತದೆ' ಎಂದು ದೇವೇಂದ್ರ ಫಡ್ನವಿಸ್ ಅವರು ಹೇಳಿದ್ದರು.
ಪ್ರಸ್ತುತ ತಮಿಳುನಾಡಿನ ಹೊಸೂರಿನಲ್ಲಿ ಎಥರ್ ಎನರ್ಜಿಯ ಎರಡು ತಯಾರಿಕಾ ಘಟಕಗಳಿವೆ. ಇಲ್ಲಿ ಸ್ಕೂಟರ್‌ನ್ನು ಜೋಡಿಸುವುದು ಹಾಗೂ ಬ್ಯಾಟರಿಯನ್ನು ಉತ್ಪಾದನೆ ಮಾಡಲಾಗುತ್ತಿದೆ. ಕಂಪನಿಯು 2024ರ ಹಣಕಾಸು ವರ್ಷದಲ್ಲಿ ರೂ.1,753.8 ಕೋಟಿ ಆದಾಯವನ್ನು ಗಳಿಸಿದೆ. ದೇಶೀಯವಾಗಿ ಎಥರ್ ಎನರ್ಜಿ 450ಎಕ್ಸ್, 450ಎಸ್, 450 ಅಪೆಕ್ಸ್ ಹಾಗೂ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications