ವರ್ಷ ಮುಗಿಯಲು ಕೇವಲ ಎರಡೇ ದಿನ ಬಾಕಿ: 2025ರಲ್ಲಿ ಯಾವ ಬ್ರಾಂಡ್ ನಂ.1 ಗೊತ್ತಾ?
ಭಾರತೀಯ ಕಾರು ಉದ್ಯಮವು ವೇಗವಾಗಿ ಬೆಳೆಯುತ್ತಿದ್ದು, ಸ್ವದೇಶಿ ಬ್ರಾಂಡ್‌ಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಭಾರತದಲ್ಲೂ ಕಾರು ಖರೀದಿಸುವವರ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಹೆಚ್ಚಾಗಿದೆ. ವಾಹನ್ ರಿಜಿಸ್ಟ್ರೇಷನ್ ಡೇಟಾ ಪ್ರಕಾರ, ಡಿಸೆಂಬರ್ ನಾಲ್ಕನೇ ವಾರದವರೆಗೆ ಅಂಕಿಅಂಶಗಳ ಪ್ರಕಾರ 2025 ರಲ್ಲಿ ಸ್ವದೇಶಿ ಬ್ರಾಂಡ್ ಆಗಿರುವ ಮಹೀಂದ್ರಾ 2ನೇ ಸ್ಥಾನ ದಕ್ಕಿಸಿಕೊಂಡು ವರ್ಷವನ್ನು ಮುಗಿಸುತ್ತಿದೆ. ಇದೇ ಮೊದಲ ಬಾರಿಗೆ ಟಾಟಾ ಹಾಗೂ ಹ್ಯುಂಡೈ ಬ್ರಾಂಡ್‌ಗಳನ್ನು ಹಿಂದಿಕ್ಕಿ ಮಹೀಂದ್ರಾ ಮೇಲಕ್ಕೇರಿದೆ ಎಂದು ವರದಿಯಾಗಿದೆ. ಪ್ರತಿ ವರ್ಷದಂತೆ ಮೊದಲ ಸ್ಥಾನದಲ್ಲಿ ಮಾರುತಿ ಸುಜುಕಿ ಇದೆ.
ಮಹೀಂದ್ರಾ ಕಂಪನಿಯು 2024 ರಲ್ಲಿ 4.90 ಲಕ್ಷ ವಾಹನಗಳನ್ನು ಮಾರಾಟ ಮಾಡಿದ್ದರೆ, 2025 ರಲ್ಲಿ ಮಹೀಂದ್ರಾ ಸರಿಸುಮಾರು 5.81 ಲಕ್ಷ ಯೂನಿಟ್‌ಗಳನ್ನು ನೋಂದಾಯಿಸಿದೆ. ಮಹೀಂದ್ರಾ ಎಸ್‌ಯುವಿಗಳಿಗೆ ಇತ್ತೀಚೆಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಜಾಗತಿಕ ಮಟ್ಟದ ಕಾರುಗಳನ್ನು ಸ್ವದೇಶಿ ಬ್ರಾಂಡ್ ನಿರ್ಮಿಸುತ್ತಿರುವುದು ಸ್ಥಳೀಯವಾಗಿ ಜನಪ್ರಿಯತೆ ತಂದುಕೊಟ್ಟಿದೆ.

ಪ್ರಮುಖ ವಾಹನಗಳಾದ ಬೊಲೆರೊ, ಸ್ಕಾರ್ಪಿಯೋ, ಥಾರ್, ಎಕ್ಸ್‌ಯುವಿ ಸಿರೀಸ್ ಕಾರುಗಳು ಬ್ರಾಂಡ್‌ನ ಮೌಲ್ಯವನ್ನು ಹೆಚ್ಚಿಸಿವೆ. ಇವು ಸ್ಥಿರ ಮಾರಾಟವನ್ನು ನೀಡಿವೆ, ನಗರ ಮತ್ತು ಅರೆ-ನಗರ ಖರೀದಿದಾರರು ಹೆಚ್ಚಾಗಿದ್ದಾರೆ. ಅಲ್ಲಿಗೆ ಭಾರತದಲ್ಲಿ ಎಸ್‌ಯುವಿಗಳಿಗೆ ಜನ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಸ್ಪಷ್ಟವಾಗಿ ತಿಳಿಯುತಿದ್ದು, ಮಹೀಂದ್ರಾದ ಬೆಳವಣಿಗೆಗೆ SUV ಪ್ರಾಬಲ್ಯವೇ ಶಕ್ತಿ ನೀಡುತ್ತಿದೆ ಎಂದು ಹೇಳಬಹುದು.
ಈ ವರ್ಷ ಥಾರ್ ಅತ್ಯಂತ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಮೂರು-ಬಾಗಿಲಿನ ಥಾರ್ ಮತ್ತು ಐದು-ಬಾಗಿಲಿನ ಥಾರ್ ರಾಕ್ಸ್‌ನ ಸಂಯೋಜಿತ ಮಾರಾಟವು ಒಂದು ಲಕ್ಷಕ್ಕೂ ಹೆಚ್ಚು ತಲುಪಿದೆ. ಇದು ಮಹೀಂದ್ರಾದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರಾಗಿದೆ. ಹಾಗೆಯೇ ಸ್ಕಾರ್ಪಿಯೋ ಕ್ಲಾಸಿಕ್ ಮತ್ತು ಸ್ಕಾರ್ಪಿಯೋ-ಎನ್ 1.61 ಲಕ್ಷಕ್ಕೂ ಹೆಚ್ಚು ಯೂನಿಟ್ ಕಾರುಗಳೊಂದಿಗೆ ಉತ್ತಮ ಮಾರಾಟ ಕಂಡಿವೆ.

ಟಾಟಾ ಏರಿಕೆ, ಹ್ಯುಂಡೈ ಇಳಿಕೆ: ಟಾಟಾ ಮೋಟಾರ್ಸ್ ಕೂಡ ಉತ್ತಮ ಬೆಳೆವಣಿಗೆ ಕಂಡಿದೆ. ಟಾಟಾ ನೆಕ್ಸಾನ್, ಪಂಚ್, ಹ್ಯಾರಿಯರ್ ಇವಿ ನಂತಹ ಪ್ರಮುಖ ಮಾಡಲ್‌ಗಳು ಟಾಟಾ ಮಾರಾಟಕ್ಕೆ ಕೊಡುಗೆ ನೀಡಿವೆ. ಟಾಟಾ ಸಿಯೆರಾ, ಹ್ಯಾರಿಯರ್ ಮತ್ತು ಸಫಾರಿಯ ಪೆಟ್ರೋಲ್ ವೇರಿಯೆಂಟ್‌ಗಳ ಜೊತೆಗೆ, ಟಾಟಾ 2026 ರಲ್ಲಿ ತನ್ನ ಬೆಳವಣಿಗೆಯನ್ನು ವೇಗಗೊಳಿಸಲು ಪಕ್ಕಾ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ, ಹುಂಡೈ ವರ್ಷಗಳಲ್ಲಿ ಮೊದಲ ಬಾರಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ, ಇದು ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ದುರ್ಬಲ ಬೇಡಿಕೆಯನ್ನು ಪಡೆದುಕೊಂಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಹ್ಯುಂಡೈ ಮುಂದಿನ ವರ್ಷ ಬಲಿಷ್ಟ ಪೋರ್ಟ್‌ಫೊಲಿಯೋದೊಂದಿಗೆ ಉತ್ತಮ ಮಾರಾಟ ಕಾಣಲು ಹೊಸ ಬಿಡುಗಡೆಗಳಿಗೆ ಸಜ್ಜಾಗುತ್ತಿದೆ. 2026ರಲ್ಲಿ ಹ್ಯುಂಡೈ ಕಾರುಗಳು ಕಂಪನಿಗೆ ಎಷ್ಟರ ಮಟ್ಟಿಗೆ ಲಾಭ ತಂದುಕೊಡಲಿವೆ ಕಾದುನೋಡಬೇಕಿದೆ.

ಮಹೀಂದ್ರಾ ಇವಿಗಳ ಅಬ್ಬರ: ಮಹೀಂದ್ರಾ ಕಂಪನಿಯ ಎಲೆಕ್ಟ್ರಿಕ್ ವಾಹನಗಳ ಪ್ರವೇಶವು ಅದರ ಮಾರಾಟವನ್ನು ಮತ್ತಷ್ಟು ಹೆಚ್ಚಿಸಿವೆ. BE 6, XEV 9e, ಮತ್ತು XEV 9 ಎಸ್‌ಯುವಿಗಳು ಒಟ್ಟಾರೆಯಾಗಿ ಕಂಪನಿಯ 2025 ರ ಒಟ್ಟು ಮಾರಾಟದಲ್ಲಿ ಶೇ7 ರಿಂದ ಶೇ8 ರಷ್ಟು ಕೊಡುಗೆ ನೀಡಿವೆ. ಈ ಸೇರ್ಪಡೆಗಳು ಬೆಳೆಯುತ್ತಿರುವ EV ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯ ಉಪಸ್ಥಿತಿಯನ್ನು ಬಲಪಡಿಸಿವೆ. ಜೊತೆಗೆ ಅದರ ವಾರ್ಷಿಕ ಸಂಖ್ಯೆಗೆ ಹೆಚ್ಚುತ್ತಿರುವ ಪ್ರಮಾಣವನ್ನು ಸೇರಿಸಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications