2025ರಲ್ಲಿ ದೇಶದ ರಸ್ತೆಯಿಂದ ದೂರವಾದ ಕಾರುಗಳಿವು.. ಕಾರಣವೇನು?
ಭಾರತವು ಅತಿದೊಡ್ಡ ವಾಹನ ಮಾರುಕಟ್ಟೆಯನ್ನು ಹೊಂದಿದೆ. ಈ ವರ್ಷ ವಿವಿಧ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಚಾಲಿತ ಕಾರುಗಳನ್ನು ಮಾರಾಟಕ್ಕೆ ತರಲಾಯಿತು. ಮಹೀಂದ್ರಾ ಬೊಲೆರೊ, ಮಾರುತಿ ವಿಕ್ಟೋರಿಸ್ ಹಾಗೂ ಹ್ಯುಂಡೈ ವೆನ್ಯೂ ಕಾರುಗಳು ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾದವು. ಆದರೆ, ಈ 2025ರಲ್ಲಿ ದೇಶದ ರಸ್ತೆಯಿಂದ ಹಲವು ಕಾರಣಗಳಿಗೆ ಮಾರುತಿ ಸುಜುಕಿ ಸಿಯಾಜ್ ಹಾಗೂ ಹುಂಡೈ ಟಕ್ಸನ್ ಕಾರುಗಳು ದೂರವಾಗಿವೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಮಾರುತಿ ಸುಜುಕಿ ಸಿಯಾಜ್ (Maruti Suzuki Ciaz):
ಇದೊಂದು ಪ್ರೀಮಿಯಂ ಸೆಡಾನ್ ಆಗಿದೆ. 2014ರಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತು. ಎಸ್‌ಯುವಿಗಳು ದೊಡ್ಡ ಮಟ್ಟದಲ್ಲಿ ಪ್ರಾಬಲ್ಯ ಸಾಧಿಸಿದವು. ಜೊತೆಗೆ ಈ ಕಾರಿನ ಬೆಲೆ ಸ್ವಲ್ಪ ಮಟ್ಟಿಗೆ ಹೆಚ್ಚಿದ್ದು, ಗ್ರಾಹಕರು ಬೇರೆ ಸೆಡಾನ್‌ಗಳನ್ನು ಕೊಳ್ಳಲು ಮುಂದಾದರು. ಹೀಗಾಗಿ 2024-25ರ ಹಣಕಾಸು ವರ್ಷದಲ್ಲಿ 'ಸಿಯಾಜ್' ಮಾರಾಟ ಪ್ರಮಾಣವು ತೀವ್ರತರದಲ್ಲಿ ಕುಸಿತವಾಯಿತು. ಅದರ ಪರಿಣಾಮ 2025ರ ಮಾರ್ಚ್ ಅಂತ್ಯದ ವೇಳೆಗೆ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತು.

ಆದರೂ ದೇಶೀಯ ಮಾರುಕಟ್ಟೆಯಲ್ಲಿ 'ಮಾರುತಿ ಸಿಯಾಜ್' ಕಾರು ಖರೀದಿಗೆ ದೊರೆಯುತ್ತಿದೆ. ಕಂಪನಿಯ ಡೀಲರ್‌ಶಿಪ್‌ಗಳಲ್ಲಿ ಸ್ಟಾಕ್ ಖಾಲಿಯಾಗುವವರೆಗೂ ಮಾತ್ರ ಮಾರಾಟಗೊಳಿಸಲಾಗುತ್ತದೆ. ಈ ನೂತನ ಕಾರು ರೂ.9.09 ಲಕ್ಷದಿಂದ ರೂ.11.88 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ನೆಕ್ಸಾ ಬ್ಲೂ, ಪರ್ಲ್ ಮೆಟಾಲಿಕ್ ಡಿಗ್ನಿಟಿ ಬ್ರೌನ್, ಗ್ರ್ಯಾಂಡರ್ ಗ್ರೇ ಮತ್ತು ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ಕಾರು 5 ಆಸನಗಳನ್ನು ಒಳಗೊಂಡಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 510 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.

ಇದು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ತನ್ನದಾಗಿಸಿಕೊಂಡಿದೆ. 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಹಾಗೂ 4-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 20 ರಿಂದ 20.65 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 190 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.
'ಸಿಯಾಜ್' ಕಾರು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್ ಕ್ರೂಸ್ ಕಂಟ್ರೋಲ್ ಹಾಗೂ ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) & ಸೀಟ್‌ಬೆಲ್ಟ್ ರಿಮೆಂಡರ್‌ನ್ನು ಹೊಂದಿದೆ.
ಹ್ಯುಂಡೈ ಟಕ್ಸನ್ (Hyundai Tucson):
ಈ ನವೆಂಬರ್‌ನಲ್ಲಿ 'ಟಕ್ಸನ್' ಪ್ರೀಮಿಯಂ ಎಸ್‌ಯುವಿ ಮಾರಾಟವನ್ನು ಸ್ಥಗಿತಗೊಳಿಸಲಾಯಿತು. 2005ರಲ್ಲಿ ಪರಿಚಯಿಸಲಾಗಿತ್ತು. ಆದರೆ, ದುಬಾರಿ ಬೆಲೆ ಹಿನ್ನೆಲೆ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಯಿತು. ಕಡೆಯದಾಗಿ ರೂ.27.32 ಲಕ್ಷದಿಂದ ರೂ.35.46 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿತ್ತು. ಜೊತೆಗೆ ನೋಡಲು ತುಂಬಾ ಚೆನ್ನಾಗಿತ್ತು. ಅಟ್ಲಾಸ್ ವೈಟ್, ಅಬಿಸ್ ಬ್ಲ್ಯಾಕ್, ಅಮೆಜಾನ್ ಗ್ರೇ ಹಾಗೂ ಸ್ಟಾರಿ ನೈಟ್ ಎಂಬ ಬಣ್ಣಗಳೊಂದಿಗೂ ಸಿಗುತ್ತಿತ್ತು.
ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿತ್ತು. 2-ಲೀಟರ್ ಪೆಟ್ರೋಲ್ ಮತ್ತು 2-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿತ್ತು. 6-ಸ್ಪೀಡ್ ಹಾಗೂ 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿತ್ತು. 18 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತಿತ್ತು. 205 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿತ್ತು. 5 ಆಸನಗಳು ಮತ್ತು ಹೆಚ್ಚಿನ ಲಗೇಜ್ ಕೊಂಡೊಯ್ಯಲು ಸಾಧ್ಯವಾಗುವಂತೆ 540 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿತ್ತು.
'ಹ್ಯುಂಡೈ ಟಕ್ಸನ್' ಕಾರು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸನ್‌ರೂಫ್ ಹಾಗೂ ಡುಯಲ್-ಜೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿತ್ತು. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿತ್ತು.


Click it and Unblock the Notifications








