26.6 Km ಮೈಲೇಜ್.. ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ CNG ಕಾರು ಬಿಡುಗಡೆ, ಬೆಲೆ ಎಷ್ಟು.. ವಿಶೇಷತೆಗಳೇನು?
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಪ್ರಮುಖ ಎಸ್‌ಯುವಿಯಾಗಿದೆ. ಇದೇ ಏಪ್ರಿಲ್‌ನಲ್ಲಿ ಈ ಕಾರಿನ ಸ್ಟ್ಯಾಂಡರ್ಡ್ ಮಾಡೆಲ್‌ನ್ನು ಮೇಲ್ದರ್ಜೆಗೆರಿಸಿ, ಅದ್ದೂರಿಯಾಗಿ ಮಾರಾಟಕ್ಕೆ ತರಲಾಯಿತು. ಇದೀಗ, ಸಿಎನ್‌ಜಿ ಮಾಡೆಲ್‌ನ್ನು ನವೀಕರಿಸಿಯೂ ಬಿಡುಗಡೆಗೊಳಿಸಲಾಗಿದೆ. ಇದು ವಿನ್ಯಾಸ ಹಾಗೂ ವೈಶಿಷ್ಟ್ಯಗಳಲ್ಲಿ ಯಾವುದೇ ಪ್ರಮುಖವಾದ ಬದಲಾವಣೆಗಳನ್ನು ಪಡೆದುಕೊಂಡಿಲ್ಲ. ಆದರೆ ಬಹುದೊಡ್ಡ ಮಾರ್ಪಾಡಾಗಿ ಸುರಕ್ಷತೆಯ ದೃಷ್ಟಿಯಿಂದ 6 - ಏರ್‌ಬ್ಯಾಗ್ ಆಯ್ಕೆಯನ್ನು ಹೊಂದಿದೆ. ಬನ್ನಿ, ಹೊಸ ಕಾರಿನ ಬೆಲೆ ಹಾಗೂ ವಿಶೇಷತೆಗಳು ಏನೆಂಬುದನ್ನು ತಿಳಿಯೋಣ.
2025ರ ನೂತನ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಸಿಎನ್‌ಜಿ ಎಸ್‌ಯುವಿಯನ್ನು ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸಲಾಗಿದೆ. ಇದು ಡೆಲ್ಟಾ (Delta) ಹಾಗೂ ಜಿಟಾ (Zeta) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗಲಿದೆ. ಕ್ರಮವಾಗಿ ರೂ.13.48 ಲಕ್ಷದಿಂದ ರೂ.15.62 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

ಹೊಸ ಎಸ್‌ಯುವಿ ಸ್ಟ್ಯಾಂಡರ್ಡ್ ಮಾಡೆಲ್‌ನಂತೆ ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ನೋಡುಗರನ್ನು ಸೆಳೆಯುತ್ತದೆ. ಈ ಕಾರು 4,345 ಎಂಎಂ ಉದ್ದ, 1,795 ಎಂಎಂ ಅಗಲ ಹಾಗೂ 1,645 ಎಂಎಂ ಎತ್ತರವಿದೆ. 210 ಎಂಎಂ ಗ್ರ್ಯಾಂಡ್ ಕ್ಲಿಯರೆನ್ಸ್ ಹಾಗೂ 2600 ಎಂಎಂ ಉದ್ದದ ವೀಲ್ ಬೇಸ್‌ನ್ನು ಹೊಂದಿದೆ.
ಈ ಮಾರುತಿ ಗ್ರ್ಯಾಂಡ್ ವಿಟಾರಾ ಸಿಎನ್‌ಜಿ ಕಾರು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 1.5-ಲೀಟರ್ ಸಾಮರ್ಥ್ಯದ ಪೆಟ್ರೋಲ್/ಸಿಎನ್‌ಜಿ ಎಂಜಿನ್ ಹೊಂದಿದ್ದು, 5,500 ಆರ್‌ಪಿಎಂನಲ್ಲಿ 87.8 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 4,200 ಆರ್‌ಪಿಎಂನಲ್ಲಿ 121.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದ್ದು, 26.6 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ನೂತನ ಗ್ರ್ಯಾಂಡ್ ವಿಟಾರಾ ಸಿಎನ್‌ಜಿ ಎಸ್‌ಯುವಿಯ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. ಇದರಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಿದ್ದು, ಪ್ರಯಾಣಿಕರು ಸುಲಭವಾಗಿ ದೂರದ ಊರುಗಳಿಗೆ ಪ್ರಯಾಣ ಮಾಡಬಹುದು. ಜೊತೆಗೆ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ ದೂಡ್ಡ ಗಾತ್ರದ ಬೂಟ್ ಸ್ಪೇಸ್‌ನ್ನು ಆಯ್ಕೆಯನ್ನು ಒಳಗೊಂಡಿದೆ.
ಈ ಕಾರು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಬಹುಮುಖ್ಯವಾಗಿ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್‌ಗಳು, ಏರ್ ಪ್ಯೂರಿಫೈಯರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ರೇರ್ ಎಸಿ ವೆಂಟ್‌ಗಳು, ಕನೆಕ್ಟೆಡ್ ಕಾರ್ ಟೆಕ್, ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್ ಮತ್ತು ಕೀಲೆಸ್ ಎಂಟ್ರಿಯನ್ನು ಹೊಂದಿದೆ.

ಹೊಸ ಗ್ರ್ಯಾಂಡ್ ವಿಟಾರಾ ಸಿಎನ್‌ಜಿ ಎಸ್‌ಯುವಿಯು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ 6 - ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಹೋಲ್ಡ್ ಅಸಿಸ್ಟ್ ಹಾಗೂ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.
ಇನ್ನು, ನೂತನ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಸಿಎನ್‌ಜಿ ಎಸ್‌ಯುವಿ ಬಿಡುಗಡೆಯಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿಯೂ ಮಾರಾಟವಾಗುವ ನಿರೀಕ್ಷೆಯಿದೆ. ಈ ಕಾರಿಗೆ ಮುಂಬರುವ ದಿನಗಳಲ್ಲಿ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications