ಕೊರಿಯಾ ಪವರ್ ತೋರಿಸಲು ಕಿಯಾ ಸಿದ್ಧ: ಇಂದು ಭಾರತದಲ್ಲಿ 2026ರ ಸೆಲ್ಟೋಸ್ ಅಧಿಕೃತ ಪಾದಾರ್ಪಣೆ
ಕಿಯಾ ಇಂಡಿಯಾ ಮುಂದಿನ ಪೀಳಿಗೆಯ ಕಿಯಾ ಸೆಲ್ಟೋಸ್ ಎಸ್‌ಯುವಿಯನ್ನು ಇಂದು (ಡಿಸೆಂಬರ್ 10, 2025) ಭಾರತೀಯ ಮಾರುಕಟ್ಟೆಯಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ. ಪ್ರಸ್ತುತ SUV 2019 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ನಂತರ ಇದು ಭಾರತಕ್ಕೆ ಬರುತ್ತಿರುವ ಎರಡನೇ ಪೀಳಿಗೆಯ ಸೆಲ್ಟೋಸ್ (2nd Gen Kia Seltos) ಆಗಿದೆ. ಈ ಎಸ್‌ಯುವಿ ಹೊಸ ವಿನ್ಯಾಸ, ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಒಳಾಂಗಣ, ಹೆಚ್ಚುವರಿ ವೈಶಿಷ್ಟ್ಯಗಳು, ಸುಧಾರಿತ ಸುರಕ್ಷತೆ ಸೇರಿದಂತೆ ಹೆಚ್ಚಿನ ಫೀಚರ್ಸ್ ಒಳಗೊಂಡಿರಲಿದೆ. ಅಧಿಕೃತ ಅನಾವರಣಕ್ಕೂ ಮುನ್ನ ಕಾರಿನ ಬಗ್ಗೆ ನಮಗೆ ಲಭ್ಯವಿರುವ ಮಾಹಿತಿ ಇಲ್ಲಿ ಹಂಚಿಕೊಳ್ಳಲಾಗಿದೆ.
ಮುಂದಿನ ಪೀಳಿಗೆಯ ಸೆಲ್ಟೋಸ್, ಹುಂಡೈ ಕ್ರೆಟಾ, ಮಾರುತಿ ವಿಕ್ಟೋರಿಸ್, ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್, ಫೋಕ್ಸ್ ವ್ಯಾಗನ್ ಟೈಗನ್ ಮತ್ತು ಹೊಸದಾಗಿ ಬಿಡುಗಡೆಯಾದ ಟಾಟಾ ಸಿಯೆರಾಗೆ ಪೈಪೋಟಿ ನೀಡಲಿದೆ. ಪ್ರಸ್ತುತ ಮಾರಾಟದಲ್ಲಿರುವ ಸೆಲ್ಟೋಸ್ ಬೆಲೆಗಳು ರೂ. 10.79 ಲಕ್ಷ (ಎಕ್ಸ್ ಶೋ ರೂಂ) ರಿಂದ ಪ್ರಾರಂಭವಾಗುತ್ತವೆ. ಮುಂದಿನ ಪೀಳಿಗೆಯ ಹೊಸ ಸೆಲ್ಟೋಸ್ ನವೀಕರಣದೊಂದಿಗೆ, ಇನ್ನೂ ಸ್ವಲ್ಪ ಪ್ರೀಮಿಯಂ ಆಗಿರುವ ಕಾರಣ ತುಸು ಬೆಲೆ ಹೆಚ್ಚಾಗಬಹುದು.

ಹೊಸ ತಲೆಮಾರಿನ ಕಿಯಾ ಸೆಲ್ಟೋಸ್ ಇಂದು ಅಧಿಕೃತವಾಗಿ ಅನಾವರಣಗೊಂಡ ಬಳಿಕ, 2026 ರ ಆರಂಭದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. 2026 ಹೊಸ ಸೆಲ್ಟೋಸ್‌ನ ಬೆಲೆಯು 11.5 ಲಕ್ಷ ರೂ.ಗಳಿಂದ (ಎಕ್ಸ್-ಶೋರೂಂ) ಆರಂಭವಾಗಬಹುದೆಂದು ನಿರೀಕ್ಷಸಲಾಗಿದೆ. ಟಾಪ್ - ವೇರಿಯೆಂಟ್ ಬೆಲೆಯು 21 ಲಕ್ಷ ರೂ. (ಎಕ್ಸ್-ಶೋರೂಂ) ಗಳಿಗಿಂತ ಹೆಚ್ಚಿರಬಹುದು.
ಹೊಸ ತಲೆಮಾರಿನ ಸೆಲ್ಟೋಸ್‌ನ ವಿನ್ಯಾಸ ಬದಲಾವಣೆಗಳ ವಿಷಯಕ್ಕೆ ಬಂದರೆ, ಕಿಯಾ ಅವರ ಟೈಗರ್-ನೋಸ್ ಗ್ರಿಲ್, ಸ್ಲಿಮ್ ಹೆಡ್‌ಲ್ಯಾಂಪ್‌ಗಳು ಮತ್ತು LED ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು ಪ್ರಮುಖ ಆಕರ್ಷಣೆಯಾಗಲಿವೆ. ಬಂಪರ್, ಬಾನೆಟ್ ಮತ್ತು ಲೈಟಿಂಗ್ ಸಿಗ್ನೇಚರ್‌ಗಳನ್ನು ಹೆಚ್ಚು ನೇರವಾದ ಮತ್ತು SUV ತರಹದ ನಿಲುವನ್ನು ನೀಡಲು ರೀ-ಡಿಸೈನ್ ಮಾಡಲಾಗಿದೆ.

ಬದಿಗಳಲ್ಲಿ ಫ್ಲಶ್ - ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, ಹೊಸ ಅಲಾಯ್ ವೀಲ್‌ಗಳು ಮತ್ತು ಬಲವರ್ಧಿತ ಕ್ಲಾಡಿಂಗ್ ಅನ್ನು ಹೊಂದಿವೆ. ಹಿಂಭಾಗದಲ್ಲಿ, ಸೆಲ್ಟೋಸ್ ಮರುವಿನ್ಯಾಸಗೊಳಿಸಲಾದ ಟೈಲ್ - ಲ್ಯಾಂಪ್‌ಗಳನ್ನು ಸಂಪರ್ಕಿಸುವ ಪೂರ್ಣ - ಅಗಲದ LED ಲೈಟ್ ಬಾರ್ ಹೊಂದಿದೆ, ಜೊತೆಗೆ ಮರುರೂಪಿಸಲಾದ ಟೈಲ್‌ಗೇಟ್ ಮತ್ತು ಬಂಪರ್ ಅನ್ನು ಹೊಂದಿದೆ.
ಕಿಯಾ ಇನ್ನೂ ಇಂಟೀರಿಯರ್ ಬಗ್ಗೆ ಯಾವುದೇ ಟೀಸರ್ ಬಿಡುಗಡೆ ಮಾಡಿಲ್ಲವಾದರೂ, ಕ್ಯಾಬಿನ್ ಸಂಪೂರ್ಣ ಮರುವಿನ್ಯಾಸಕ್ಕೆ ಸಿದ್ಧವಾಗಿದೆ ಎಂದು ಸ್ಪೈ ಶಾಟ್‌ಗಳು ಸೂಚಿಸುತ್ತವೆ. ಡ್ಯಾಶ್‌ಬೋರ್ಡ್ ಹೆಚ್ಚು ಆಕರ್ಷಕವಾಗಿದ್ದು, ಅಚ್ಚುಕಟ್ಟಾದ ಸ್ಕ್ರೀನ್ ಜೋಡಣೆಯೊಂದಿಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಟಾಪ್ ವೇರಿಯೆಂಟ್‌ಗಳು ಡ್ಯುಯಲ್ 12.3-ಇಂಚಿನ ಡಿಸ್ಪ್ಲೇಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಕಿಯಾ ಸೈರಸ್‌ನ 'ಟ್ರಿನಿಟಿ ಡಿಸ್ಪ್ಲೇ'ಯಂತೆಯೇ ಟ್ರಿಪಲ್-ಸ್ಕ್ರೀನ್ ಡಿಸ್ಪ್ಲೇ ಸೆಟಪ್ ಅನ್ನು ನೀಡವ ಸಾಧ್ಯತೆಯಿದೆ.

ನಿರೀಕ್ಷಿತ ಫೀಚರ್ಸ್‌ನಲ್ಲಿ ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್, ವೆಂಟಿಲೇಟೆಡ್ ಮತ್ತು ಪವರ್ಡ್ ಫ್ರಂಟ್ ಸೀಟುಗಳು, ಹಿಂಭಾಗದ ಪ್ರಯಾಣಿಕರಿಗೆ ಎಲೆಕ್ಟ್ರಿಕ್ "ಬಾಸ್ ಮೋಡ್" ಕಾರ್ಯ ಮತ್ತು ನವೀಕರಿಸಿದ ವಾಯಿಸ್ ಸಿಸ್ಟಮ್ ಸೇರಿವೆ. ಸುರಕ್ಷತಾ ದೃಷ್ಟಿಯಿಂದ ಸ್ಟ್ಯಾಂಡರ್ಡ್ ಆಗಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಟೈರ್-ಪ್ರೆಶರ್ ಮಾನಿಟರಿಂಗ್ ಮತ್ತು ಲೆವೆಲ್ 2 ADAS ಸೂಟ್ ನೀಡುವ ಸಾಧ್ಯತೆಯಿದೆ.
ಎಂಜಿನ್ ವಿಷಯಕ್ಕೆ ಬಂದರೆ, ಕಿಯಾ ಪ್ರಸ್ತುತ 1.5-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಎಂಜಿನ್ ಸುತ್ತಲೂ ನಿರ್ಮಿಸಲಾದ ಹೊಸದಾಗಿ ಅಭಿವೃದ್ಧಿಪಡಿಸಲಾದ ಪೆಟ್ರೋಲ್-ಹೈಬ್ರಿಡ್ ಸೆಟಪ್ ಅನ್ನು ಪರಿಚಯಿಸುವ ನಿರೀಕ್ಷೆಯಿದೆ. ಹೈಬ್ರಿಡ್ ಜೊತೆಗೆ, ಕಿಯಾ ತನ್ನ ಪರಿಚಿತ 160hp ಪವರ್ ಹೊರಹಾಕುವ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.


Click it and Unblock the Notifications








