ತುದಿಗಾಲಿನಲ್ಲಿ ನಿಂತಿದ್ದಾರೆ ಜನರು.. ಇದೇ ವಾರ ಈ 4 ಹೊಸ ಎಸ್‌ಯುವಿಗಳು ಬಿಡುಗಡೆ, ಯಾವುವು.. ಬೆಲೆ ಎಷ್ಟು?
ವಿಶ್ವದಲ್ಲೇ ಭಾರತವು ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಇಲ್ಲಿ ಭದ್ರವಾಗಿ ತಳವೂರಲು ವಿವಿಧ ವಾಹನ ತಯಾರಕ ಕಂಪನಿಗಳು ಪೈಪೋಟಿಯನ್ನು ನಡೆಸುತ್ತಿವೆ. ಅದರ ಭಾಗವಾಗಿ ಪ್ರತಿ ತಿಂಗಳು ಒಂದಲ್ಲ ಒಂದು ಕಾರುಗಳು ಬಿಡುಗಡೆಯಾಗುತ್ತಿರುತ್ತವೆ. ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆ, ಈ ಸೆಪ್ಟೆಂಬರ್ ಮಹತ್ವದ ತಿಂಗಳಿದ್ದು, ಮೊದಲ ವಾರವೇ ಮಾರುತಿ ಸುಜುಕಿ, ಸಿಟ್ರನ್ ಹಾಗೂ ವಿನ್‌ಫಾಸ್ಟ್ ಕಂಪನಿಯ 4 ಹೊಚ್ಚ ಹೊಸ ಎಸ್‌ಯುವಿಗಳು ಅದ್ದೂರಿಯಾಗಿ ಮಾರಾಟಕ್ಕೆ ಬರಲಿವೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara):
ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಸೆಪ್ಟೆಂಬರ್ 3 ರಂದು ಬಿಡುಗಡೆಯಾಗಲಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಖರೀದಿಗೆ ಬರುವ ನಿರೀಕ್ಷೆಯಿದೆ. ರೂ.17 ಲಕ್ಷದಿಂದ ರೂ.22 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಆಗಸ್ಟ್ 26 ರಂದು ಗುಜರಾತ್‌ನ ಹಂಸಲ್‌ಪುರದ ಮಾರುತಿ ಸುಜುಕಿ ಉತ್ಪಾದನಾ ಘಟಕದಿಂದ ಹೊರತಂದಿದ್ದ ಮೊಟ್ಟ ಮೊದಲ 'ಇ-ವಿಟಾರಾ'ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆಯನ್ನು ಕೂಡ ತೋರಿಸಿದ್ದಾರೆ.

ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಹಲವು ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. 49 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 61 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿರಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 500 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡಬಹುದು ಎಂದು ಅಂದಾಜಿಸಲಾಗಿದೆ.
ನೂತನ ಇ-ವಿಟಾರಾ 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಓಡಾಟ ನಡೆಸಬಹುದು. ದೊಡ್ಡ ಗಾತ್ರದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಸನ್‌ರೂಫ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ 7-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಸಿಟ್ರನ್ ಬಸಾಲ್ಟ್ ಎಕ್ಸ್ (Citroen Basalt X):
ಇದು ಸೆಪ್ಟೆಂಬರ್ 5 ರಂದು ಮಾರಾಟಕ್ಕೆ ಬರಲಿದೆ. ರೂ.10 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ. ಈ ಕಾರು ಸ್ಟ್ಯಾಂಡರ್ಡ್ 'ಬಸಾಲ್ಟ್'ನಂತೆ ವಿನ್ಯಾಸವನ್ನು ಹೊಂದಿದ್ದು, ಹೊರಭಾಗದಲ್ಲಿ ನವೀನವಾದ ಆಲ್ ಬ್ಲ್ಯಾಕ್ ಪೇಂಟ್ ಸ್ಕೀಮ್‌ನ್ನು ಒಳಗೊಂಡಿರಲಿದೆ. 5 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು.
ಈ ಬಸಾಲ್ಟ್ ಎಕ್ಸ್ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಹೊಂದಿರಲಿದೆ. ಕ್ಯಾಬಿನ್ ವಿನ್ಯಾಸವು ಉತ್ತಮವಾಗಿರಲಿದ್ದು, ಡುಯಲ್-ಟೋನ್ ಬ್ಲ್ಯಾಕ್ & ಟ್ಯಾನ್ ಪೇಂಟ್ ಸ್ಕೀಮ್‌ನ್ನು ಒಳಗೊಡಿರಲಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, 6-ಏರ್‌ಬ್ಯಾಗ್, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿರಲಿದೆ ಎನ್ನಲಾಗಿದೆ.

ವಿನ್‌ಫಾಸ್ಟ್ ವಿಎಫ್6 & ವಿಎಫ್7 (VinFast VF6 & VF7):
ಇವೆರೆಡು ಎಲೆಕ್ಟ್ರಿಕ್ ಎಸ್‌ಯುವಿಗಳಿದ್ದು, ಸೆಪ್ಟೆಂಬರ್ 6 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿವೆ. ವಿಎಫ್6 ರೂ.18 ಲಕ್ಷದಿಂದ ರೂ.24 ಲಕ್ಷ ಹಾಗೂ ವಿಎಫ್7 ರೂ.23 ಲಕ್ಷದಿಂದ ರೂ.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಅಂದಾಜಿಸಲಾಗಿದೆ. ಜೊತೆಗೆ 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರಲಿವೆ.
ವಿಎಫ್6 ಕಾರು 59.6 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿರಲಿದ್ದು, ಭರ್ತಿ ಚಾರ್ಜ್‌ನಲ್ಲಿ 379 ರಿಂದ 410 ಕಿಲೋಮೀಟರ್ ಓಡುತ್ತದೆ ಎಂದು ಅಂದಾಜಿಸಲಾಗಿದೆ. ವಿಎಫ್7 ಎಸ್‌ಯುವಿ 75.3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿರಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 431 ರಿಂದ 450 ಕಿಲೋಮೀಟರ್ ಕ್ರಮಿಸಲಿದೆ ಎಂದು ಹೇಳಲಾಗಿದೆ. ಇವೆರೆಡು ಕಾರುಗಳು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ 6 ಏರ್‌ಬ್ಯಾಗ್‌ಗಳು ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿರುವ ಸಾಧ್ಯತೆಯಿದೆ.


Click it and Unblock the Notifications