ಸನ್‌ರೂಫ್ ಇಷ್ಟ ಆದರೆ ಬಜೆಟ್ ಇಲ್ಲವೇ? ಆಫ್ಟರ್ ಮಾರ್ಕೆಟ್ ತಂಟೆಗೆ ಮಾತ್ರ ಹೋಗಬೇಡಿ!
ಕಾರು ಮಾರುಕಟ್ಟೆಯಲ್ಲಿ ಈ ಆಫ್ಟರ್ ಮಾರ್ಕೆಟ್ ಎಂಬ ಪದವನ್ನು ಹೆಚ್ಚಾಗಿ ಕೇಳುತ್ತೇವೆ. ಅಷ್ಟಕ್ಕೂ ಆಫ್ಟರ್ ಮಾರ್ಕೆಟ್ ಎಂದರೇನು? ವಾಹನಗಳನ್ನು ಕಂಪನಿ ಮಾರಾಟ ಮಾಡಿದ ಬಳಿಕ ಕಾರಿಗೆ ಬೇಕಾಗುವ ಹೆಚ್ಚುವರಿ ಅಪ್‌ಗ್ರೇಡ್‌ಗಳನ್ನು ಕಂಪನಿಯಂತೆಯೇ ನಕಲು ಮಾಡಲಾದ ಮಾರುಕಟ್ಟೆಯನ್ನು ಆಫ್ಟರ್ ಮಾರ್ಕೆಟ್ ಎಂದು ಕರೆಯುತ್ತಾರೆ. ಈಗ ವಿಯಷಕ್ಕೆ ಬಂದರೆ ಆಫ್ಟರ್ ಮಾರ್ಕೆಟ್ ಮೂಲಕ ಸನ್‌ರೂಫ್ ಏಕೆ ಅಪ್‌ಗ್ರೇಡ್ ಮಾಡಬಾರದು? ಸುರಕ್ಷತೆ, ಬಾಳಿಕೆಯಿಲ್ಲದಂತಹ ಹಲವಾರು ಪ್ರಮುಖ ಕಾರಣಗಳಿವೆ. ಹಾಗಾಗಿ ಇದನ್ನು ಶಿಫಾರಸು ಮಾಡುವುದಿಲ್ಲ. ಇದರಿಂದ ಎದುರಾಗುವ ಸಮಸ್ಯೆಗಳನ್ನು ವಿವರವಾಗಿ ನೋಡೋಣ.
ಸುರಕ್ಷತೆ: ಆಫ್ಟರ್‌ಮಾರ್ಕೆಟ್ ಸನ್‌ರೂಫ್ ಅನ್ನು ಹೊಂದಿಸಲು ಕಾರಿನ ರೂಫ್ ಕತ್ತರಿಸುವುದರಿಂದ ವಾಹನದ ಬಿಗಿತ ಕಳೆದುಕೊಳ್ಳುತ್ತದೆ. ರೂಫ್ ಕಾರಿನ ಚಾಸಿಸ್‌ನ ಅವಿಭಾಜ್ಯ ಅಂಗವಾಗಿದ್ದು, ಒಟ್ಟಾರೆ ಸುರಕ್ಷತೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಕಂಪನಿ-ನೀಡುವ (OEM) ಸನ್‌ರೂಫ್‌ಗಳು ರಚನಾತ್ಮಕ ಬಲವನ್ನು ಕಾಪಾಡಿಕೊಳ್ಳಲು ನಿಖರವಾದ ಅಧ್ಯಯನಗಳೊಂದಿಗೆ ವಿನ್ಯಾಸಗೊಳಿಸಲಾಗಿರುತ್ತದೆ. ಆದರೆ ಆಫ್ಟರ್‌ಮಾರ್ಕೆಟ್ ಈ ಕಠಿಣ ವಿನ್ಯಾಸ ಮತ್ತು ಪರೀಕ್ಷೆಯನ್ನು ಹೊಂದಿರುವುದಿಲ್ಲ. ಇದು ವಾಹನವನ್ನು ದುರ್ಬಲಗೊಳಿಸುತ್ತದೆ.

ಯಾಂತ್ರಿಕ ಸಮಸ್ಯೆಗಳು: ಆಫ್ಟರ್‌ಮಾರ್ಕೆಟ್ ಸನ್‌ರೂಫ್‌ಗಳು ಕಾಲಾನಂತರದಲ್ಲಿ ಹೆಚ್ಚು ಯಾಂತ್ರಿಕ ಸಮಸ್ಯೆಗಳನ್ನು ತರುತ್ತವೆ. ಇದು ಬೇಗ ಹಾಳಾಗಬಹುದು ಅಥವಾ ಕೆಲಸ ಮಾಡುವುದನ್ನೇ ನಿಲ್ಲಿಸಬಹುದು. ಆಫ್ಟರ್‌ಮಾರ್ಕೆಟ್ ಘಟಕಗಳಲ್ಲಿನ ಮೋಟಾರ್‌ಗಳು ಅಥವಾ ಸೀಲ್‌ಗಳ ದುರಸ್ತಿ ದುಬಾರಿಯಿರುತ್ತವೆ. ಆದರೆ ಕಂಪನಿ ನೀಡುವ ಸನ್‌ರೂಫ್‌ಗಳನ್ನು ಉತ್ತಮ ನಿರ್ಮಾಣ ಗುಣಮಟ್ಟದೊಂದಿಗೆ ವಾಹನದ ಜೀವಿತಾವಧಿಯನ್ನು ಉಳಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿರುತ್ತದೆ.
ಸೋರಿಕೆ: ಆಫ್ಟರ್‌ಮಾರ್ಕೆಟ್ ಸನ್‌ರೂಫ್‌ಗಳು ಸರಿಯಾಗಿ ಹೊಂದಿಕೊಳ್ಳದ ಸೀಲ್‌ಗಳನ್ನು ಹೊಂದಿರುತ್ತವೆ. ಇದು ನೀರಿನ ಸೋರಿಕೆಗೆ ಕಾರಣವಾಗಬಹುದು, ಒಳಾಂಗಣ ಮತ್ತು ಯಾಂತ್ರಿಕ ಭಾಗಗಳಿಗೆ ಹಾನಿ ಮಾಡುತ್ತದೆ. ಈ ಸೋರಿಕೆಗಳು ಕಿರಿಕಿರಿಗೊಳಿಸುವ ಶಬ್ದದ ಜೊತೆಗೆ ಕ್ಯಾಬಿನ್‌ನೊಳಗೆ ಸೋರಿಕೆಯಾಗಲು ಕಾರಣವಾಗುತ್ತದೆ. ಹಾಗೆಯೇ ಪ್ರಯಾಣಿಕರ ಸೌಕರ್ಯವನ್ನು ಕಡಿಮೆ ಮಾಡುತ್ತದೆ.

ಮರುಮಾರಾಟ ಮೌಲ್ಯದ ಮೇಲೆ ಪರಿಣಾಮ: ಆಫ್ಟರ್‌ಮಾರ್ಕೆಟ್ ಸನ್‌ರೂಫ್‌ಗಳನ್ನು ಹೊಂದಿರುವ ಕಾರುಗಳು ಮರುಮಾರಾಟ ಮೌಲ್ಯದಲ್ಲಿ ಹೆಚ್ಚು ಅಪಮೌಲ್ಯಗೊಳ್ಳುತ್ತವೆ. ಅನೇಕ ಖರೀದಿದಾರರು ಮತ್ತು ವಿತರಕರು ಸಂಭವನೀಯ ಸೋರಿಕೆಗಳು, ಸುರಕ್ಷತಾ ಕಾಳಜಿಗಳು ಮತ್ತು ಒಟ್ಟಾರೆ ವಿಶ್ವಾಸಾರ್ಹತೆಯ ಸಮಸ್ಯೆಗಳಿಂದಾಗಿ ಆಫ್ಟರ್‌ಮಾರ್ಕೆಟ್ ಮಾರ್ಪಾಡುಗಳನ್ನು ಅಪಾಯವೆಂದು ಈಗಾಗಲೇ ಹೇಳಿದ್ದಾರೆ. ಹಾಗಾಗಿ ಮತ್ತೆ ವಾಹನವನ್ನು ಮಾರಾಟ ಮಾಡಲು ಕಷ್ಟವಾಗುತ್ತದೆ.
ಭಾರತೀಯ ಪರಿಸ್ಥಿತಿಗಳಲ್ಲಿ ಪ್ರಾಯೋಗಿಕತೆ: ಭಾರೀ ಮಳೆ ಮತ್ತು ಬಿಸಿಲಿನ ಬೇಸಿಗೆಯೊಂದಿಗೆ ಭಾರತೀಯ ಹವಾಮಾನದಲ್ಲಿ, ಸನ್‌ರೂಫ್‌ಗಳು (ಕಂಪನಿಗಳು ಸಹ) ಸಾಮಾನ್ಯವಾಗಿಯೇ ಸೀಮಿತ ಪ್ರಾಯೋಗಿಕ ಬಳಕೆಯನ್ನು ಹೊಂದಿರುತ್ತವೆ. ಹೆಚ್ಚುವರಿ ನಿರ್ವಹಣೆ ಅಗತ್ಯವಿರಬಹುದು. ಇಂತಹ ಸನ್‌ರೂಫ್ ಫೀಚರ್ಸ್ ಮೇಲೆ ಹೂಡಿಕೆ ಮಾಡುವ ಮೊದಲು ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಸನ್‌ರೂಫ್ ಐಷಾರಾಮಿ ವೈಶಿಷ್ಟ್ಯವಾಗಿದ್ದರೂ, ಆಫ್ಟರ್‌ಮಾರ್ಕೆಟ್ ಆಯ್ಕೆ ಮಾಡುವ ಬದಲು ಕಾರ್ಖಾನೆಯಲ್ಲಿ ಸ್ಥಾಪಿಸಲಾದ ಸನ್‌ರೂಫ್‌ನೊಂದಿಗೆ ಬರುವ ಕಾರನ್ನು ಖರೀದಿಸುವುದು ಸುರಕ್ಷಿತವೆಂದು ಹೇಳಬಹುದು. ಕಂಪನಿಯಿಂದ ಬರುವುದು ಹೆಚ್ಚು ವಿಶ್ವಾಸಾರ್ಹ ಮತ್ತು ವೆಚ್ಚ - ಪರಿಣಾಮಕಾರಿಯಾಗಿರುತ್ತದೆ. ಕಾರ್ಖಾನೆಯಲ್ಲಿ ನಿರ್ಮಿಸಲಾದ ಸನ್‌ರೂಫ್‌ಗಳು ಎಂಜಿನಿಯರಿಂಗ್ ಸಂಶೋಧನೆ, ವಾರೆಂಟಿಗಳನ್ನು ಹೊಂದಿರುತ್ತವೆ.
ರಚನಾತ್ಮಕ ಅಥವಾ ದೀರ್ಘಾಯುಷ್ಯದ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಕಡಿಮೆ. ಆಫ್ಟರ್‌ಮಾರ್ಕೆಟ್ ಸ್ಥಾಪನೆಯೊಂದಿಗೆ ನಿಮ್ಮ ವಾಹನದ ಸುರಕ್ಷತೆ ಮತ್ತು ಮೌಲ್ಯವನ್ನು ಅಪಾಯಕ್ಕೆ ಕೊಂಡೊಯ್ಯುವ ಬದಲು, ಕಂಪನಿಯಿಂದಲೇ ಕಾರಿನ ಸನ್‌ರೂಫ್ ಇರುವ ವಾಹನ ಖರೀದಿಸುವುದು ಬೆಸ್ಟ್. ನೀವು ಬಜೆಟ್‌ನಲ್ಲಿ ಸನ್‌ರೂಫ್ ವೈಶಿಷ್ಟ್ಯವನ್ನು ಬಯಸಿದರೆ ಹಲವಾರು ಕೈಗೆಟುಕುವ ಕಾರು ಮಾದರಿಗಳು ಈಗಾಗಲೇ ಸನ್‌ರೂಫ್ ಅನ್ನು ನೀಡುತ್ತವೆ. ಪ್ರಮುಖ ಟಾಟಾ, ಮಾರುತಿ, ಮಹೀಂದ್ರಾ ಎಂಟ್ರಿ ಲೆವಲ್ ಕಾರುಗಳಲ್ಲಿ ಈಗ ಸನ್‌ರೂಫ್ ಸಿಗುತ್ತಿದೆ.


Click it and Unblock the Notifications








