ಗಣೇಶ ಹಬ್ಬಕ್ಕೆ ಹೊಸ ಕಾರು ಖರೀದಿ ಮಾಡಬೇಕೇ.. ಭಾರೀ ರಿಯಾಯಿತಿ ಘೋಷಣೆ, ಈಗ ಬಿಟ್ರೆ ಮತ್ತೆ ಸಿಗಲ್ಲ!
ನಾಳೆ ಗಣೇಶ ಹಬ್ಬವನ್ನು ಸಂಭ್ರಮ - ಸಡಗರದಿಂದ ಆಚರಿಸಲಾಗುತ್ತದೆ. ಶ್ರದ್ಧಾ ಭಕ್ತಿಯಿಂದ ವಿಘ್ನ ನಿವಾರಕನನ್ನು ಪೂಜಿಸಲಾಗುತ್ತದೆ. ನೀವು ಹಬ್ಬಕ್ಕೆ ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಬೇಕೆಂದು ಆಲೋಚಿಸಿದ್ದೀರಾ.. ಈ ಆಗಸ್ಟ್ ತಿಂಗಳು ಬೆಂಗಳೂರಿನ ವಿವಿಧ 'ಮಹೀಂದ್ರಾ' ಡೀಲರ್‌ಶಿಪ್‌ಗಳು ಎಕ್ಸ್‌ಯುವಿ400 ಇವಿ, ಎಕ್ಸ್‌ಯುವಿ 3ಎಕ್ಸ್ಒ ಹಾಗೂ ಬೊಲೆರೊ ಕಾರುಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಣೆ ಮಾಡಿವೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಮಹೀಂದ್ರಾ ಎಕ್ಸ್‌ಯುವಿ400 ಇವಿ (Mahindra XUV400 EV):
ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಗರಿಷ್ಠ ಹಣಕಾಸಿನ ಪ್ರಯೋಜನವನ್ನು ಪಡೆದಿದ್ದು, ರೂ.2.5 ಲಕ್ಷವರೆಗೆ ರಿಯಾಯಿತಿ ಹೊಂದಿದೆ. ಗ್ರಾಹಕರಿಗೂ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಈ ಕಾರು ರೂ.15.49 ಲಕ್ಷದಿಂದ ರೂ.17.69 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಎವರೆಸ್ಟ್ ವೈಟ್, ನೆಬ್ಯುಲಾ ಬ್ಲೂ, ನಪೋಲಿ ಬ್ಲ್ಯಾಕ್ ಹಾಗೂ ಗ್ಯಾಲಕ್ಸಿ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ನೂತನ 'ಎಕ್ಸ್‌ಯುವಿ400' ಎಸ್‌ಯುವಿಯು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 34.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 39.4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 375 ರಿಂದ 456 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.
ಈ ಕಾರು ಎಸ್‌ಯುವಿಯು 5 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. 7-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಸಿಂಗಲ್-ಪೇನ್ ಸನ್‌ರೂಫ್, ಕ್ರೂಸ್ ಕಂಟ್ರೋಲ್ ಹಾಗೂ ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (Mahindra XUV 3XO):
ಇದು ಜನಪ್ರಿಯ ಎಸ್‌ಯುವಿಯಾಗಿದ್ದು, ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ ರೂ.35,000 ರಿಂದ ರೂ.50,000 ವರೆಗೆ ರಿಯಾಯಿತಿ ಪಡೆದಿದೆ. ಈ ಕಾರು ರೂ.7.99 ಲಕ್ಷದಿಂದ ರೂ.15.80 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಅತುತ್ತಮವಾದ ವಿನ್ಯಾಸವನ್ನು ಪಡೆದಿದೆ. ಡೀಪ್ ಫಾರೆಸ್ಟ್, ಡ್ಯೂನ್ ಬೀಜ್ ಹಾಗೂ ಎವರೆಸ್ಟ್ ವೈಟ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.
ಹೊಸ ಎಕ್ಸ್‌ಯುವಿ 3ಎಕ್ಸ್ಒ ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಹೊಂದಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್, 1.2-ಲೀಟರ್ ಟಿಜಿಡಿಐ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದಿದ್ದು, 17 ರಿಂದ 21 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಒಳಗೊಂಡಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿರುವ ಡುಯಲ್ ಡಿಸ್‌ಪ್ಲೇ, 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಮಹೀಂದ್ರಾ ಬೊಲೆರೊ (Mahindra Bolero):
ಈ ಎಸ್‌ಯುವಿಯನ್ನು ಗ್ರಾಮೀಣ ಜನರು ಮೆಚ್ಚಿಕೊಂಡಿದ್ದು, ತುಂಬಾನೇ ಇಷ್ಟಪಡುತ್ತಾರೆ. ಅದಕ್ಕೆ ಅನುಗುಣವಾಗಿ ರೂ.1 ಲಕ್ಷವರೆಗೆ ಹಣಕಾಸಿನ ಪ್ರಯೋಜನವನ್ನು ಹೊಂದಿದೆ. ಹಾಗೆಯೇ ರೂ.9.81 ಲಕ್ಷದಿಂದ ರೂ.10.93 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಉತ್ತಮವಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ಡಿಸಾಟ್ ಸಿಲ್ವರ್, ಲೇಕ್‌ಸೈಡ್ ಬ್ರೌನ್ ಮತ್ತು ಡೈಮಂಡ್ ವೈಟ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ಇದು 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಪಡೆದಿದೆ. 16 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 7 ಆಸನಗಳನ್ನು ಒಳಗೊಂಡಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಸಂಚಾರ ಮಾಡಬಹುದು. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮ್ಯಾನುವಲ್ ಎಸಿ, ಪವರ್ ಸ್ಟೀರಿಂಗ್, ಪವರ್ ವಿಂಡೋ, ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ನಿಮ್ಮ ಗಮನಕ್ಕೆ.. ಈ ರಿಯಾಯಿತಿ ಪ್ರಯೋಜನಗಳು ನಗರದಿಂದ ನಗರಕ್ಕೆ ಡೀಲರ್‌ಶಿಪ್‌ಗಳನ್ನು ಅವಲಂಭಿಸಿ ಬೇರೆ-ಬೇರೆಯಿರಲಿದೆ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications








