ಒಂದೇ ಸೂರಿನಡಿ 100ಕ್ಕೂ ಹೆಚ್ಚು ವಾಹನಗಳು: ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋಗೆ ದಿನಾಂಕ ನಿಗದಿ!
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ (Bharat Mobility Global Expo), ವಾಹನ ಪ್ರಿಯರ ನೆಚ್ಚಿನ ಆಟೋಮೊಬೈಲ್ ಪ್ರದರ್ಶನವಾಗಿದೆ. ಇಲ್ಲಿ ಹತ್ತಾರು ಕಂಪನಿಗಳ ನೂರಾರು ವಾಹನಗಳನ್ನು ಕಣ್ತುಂಬಿಕೊಳ್ಳಬಹುದು. ಈಗಾಗಲೇ ಜರುಗಿರುವ ಮೊದಲೆರೆಡು ಆವೃತ್ತಿಗಳಿಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ 2027ರಲ್ಲಿ ನಡೆಯುವ ಮೂರನೇ ಆವೃತ್ತಿ 'ಭಾರತ್ ಮೊಬಿಲಿಟಿ ಎಕ್ಸ್‌ಪೋ'ಗೂ ದಿನಾಂಕವನ್ನು ನಿಗದಿಪಡಿಸಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
2027ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ, ಅದೇ ವರ್ಷದ ಫೆಬ್ರವರಿ 4 ರಿಂದ 9 ರವರೆಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಈ ವಾಹನ ಪ್ರದರ್ಶನದ ಸಂಪೂರ್ಣವಾದ ಜವಾಬ್ದಾರಿಯನ್ನು ಹೊತ್ತಿದೆ ಎಂಬ ವಿವರಗಳು ಲಭ್ಯವಾಗಿವೆ.

ಮುಂಬರಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋಗಾಗಿ 3 ಸ್ಥಳವನ್ನು ಕೂಡ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ನವದೆಹಲಿಯ ಭಾರತ್ ಮಂಟಪ, ದ್ವಾರಕಾದ ಯಶೋಭೂಮಿ ಕನ್ವೆನ್ಷನ್ ಸೆಂಟರ್ ಹಾಗೂ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್‌ನಲ್ಲಿ ಈ ವಾಹನ ಪ್ರದರ್ಶನವು ನಡೆಯುವ ನಿರೀಕ್ಷೆಯಿದೆ.
ಇದೇ ವರ್ಷದ ನಡೆದ ಎರಡನೇ ಆವೃತ್ತಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಂತೆ 2027ರಲ್ಲಿ ನಡೆಯುವ ಎಕ್ಸ್‌ಪೋದಲ್ಲೂ ಹತ್ತಾರು ಕಾರು ತಯಾರಕ ಕಂಪನಿಗಳು ಭಾಗವಹಿಸಲಿವೆ. ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಮಹೀಂದ್ರಾ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್, ಹ್ಯುಂಡೈ ಮೋಟಾರ್ ಇಂಡಿಯಾ, ಕಿಯಾ ಮೋಟಾರ್ಸ್, ಬಿಎಂಡಬ್ಲ್ಯೂ, ಮರ್ಸಿಡಿಸ್, ಸ್ಕೋಡಾ ಹಾಗೂ ಪೋರ್ಷೆ ಕಂಪನಿಗಳು ಪಾಲ್ಗೊಳ್ಳುವ ಸಾಧ್ಯತೆಯಿದೆ.

ಅದೇ ರೀತಿಯಲ್ಲಿ ಟಿವಿಎಸ್ ಮೋಟಾರ್, ಹೀರೋ ಮೋಟೊಕಾರ್ಪ್, ಹೋಂಡಾ ಇಂಡಿಯಾ, ಬಜಾಜ್ ಆಟೋ, ಸುಜುಕಿ ಮೋಟಾರ್‌ಸೈಕಲ್, ಎಥರ್ ಎನರ್ಜಿ ಹಾಗೂ ಓಲಾ ಎಲೆಕ್ಟ್ರಿಕ್ ಸೇರಿದಂತೆ ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಸಹ ಭಾಗವಹಿಸುವ ನಿರೀಕ್ಷೆಯಿದೆ. ಕಾರು, ಬೈಕ್ ಹಾಗೂ ಸ್ಕೂಟರ್‌ಗಳು ಸೇರಿದಂತೆ 100ಕ್ಕೂ ಹೆಚ್ಚು ವಾಹನಗಳನ್ನು ಪ್ರದರ್ಶನ ಮಾಡಲಾಗುತ್ತದೆ ಎನ್ನಲಾಗಿದೆ.
ಇದೇ ವರ್ಷದ (2025) ಜನವರಿ 17 ರಿಂದ 22 ರವರೆಗೆ ನಡೆದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲೂ ಹೆಚ್ಚು ಅತ್ಯಾಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದ ವಿವಿಧ ವಾಹನಗಳನ್ನು ಪ್ರದರ್ಶಿಸಲಾಗಿತ್ತು. ವಿಶೇಷವಾಗಿ ಸುಜುಕಿ ಇ ಆಕ್ಸೆಸ್, ಟಿವಿಎಸ್ ಜೂಪಿಟರ್ ಸಿಎನ್‌ಜಿ, ಮಾರುತಿ ಸುಜುಕಿ ಇ ವಿಟಾರಾ ಹಾಗೂ ಟಾಟಾ ಸಿಯೆರಾ ಕಾರುಗಳು ಹೆಚ್ಚು ಗಮನ ಸೆಳೆದವು.
ಸುಜುಕಿ ಇ ಆಕ್ಸೆಸ್ (Suzuki e Access):
2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಈ ಸ್ಕೂಟರ್ ಎಲ್ಲರನ್ನು ಆಕರ್ಷಿಸಿತ್ತು. ಇದು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ರೂ.1 ಲಕ್ಷದಿಂದ ರೂ.1.20 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ. 3.07 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದ್ದು, ಭರ್ತಿ ಚಾರ್ಜ್‌ನಲ್ಲಿ 95 ಕಿಲೋಮೀಟರ್ ಓಡುತ್ತದೆ.
ಟಿವಿಎಸ್ ಜೂಪಿಟರ್ ಸಿಎನ್‌ಜಿ (TVS Jupiter CNG):
ಇದೊಂದು ವಿಶ್ವದ ಮೊದಲ ಸಿಎನ್‌ಜಿ ಸ್ಕೂಟರ್ ಆಗಿದ್ದು, ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಎಲ್ಲವು ಅಂದುಕೊಂಡಂತೆ ನಡೆದರೆ, ಈ ಸ್ಕೂಟರ್ ಅತಿ ಶೀಘ್ರದಲ್ಲೇ ಮಾರಾಟಕ್ಕೂ ಬರಲಿದೆ. ರೂ.90,000 ರಿಂದ 1 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಲಿದೆ ಎಂದು ಹೇಳಲಾಗಿದೆ. 124.8 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 226 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಎಲ್‌ಇಡಿ ಹೆಡ್‌ಲೈಟ್ ಮತ್ತು ಮೊಬೈಲ್ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಟಾಟಾ ಸಿಯೆರಾ (Tata Sierra):
ಈ ಎಸ್‌ಯುವಿಯನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿತ್ತು. ಅಲ್ಲಿ ವೀಕ್ಷಕರ ಮನ ಗೆದ್ದಿತ್ತು. ಇದು ಮೊದಲಿಗೆ ಎಲೆಕ್ಟ್ರಿಕ್ ಅವತಾರದಲ್ಲಿ ಬಿಡುಗಡೆಯಾಗಲಿದೆ. ಆ ಬಳಿಕ, ಪೆಟ್ರೋಲ್/ ಡೀಸೆಲ್ ರೂಪದಲ್ಲಿ ಬಿಡುಗಡೆಯಾಗಲಿದೆ. 5 ಆಸನಗಳನ್ನು ಹೊಂದಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿರುವ ಸಾಧ್ಯತೆಯಿದೆ.


Click it and Unblock the Notifications