ಹೀಗಾ ಮಾಡೋದು... ವಾಹನ ವಲಯವನ್ನು ಅಪಾಯಕ್ಕೆ ದೂಡಿದೆ ಚೀನಾ! ಈಗ ಏನಾಗಲಿದೆ ಗೊತ್ತಾ?
ಚೀನಾ ಸರ್ಕಾರವು ಅಪರೂಪದ ಆಯಸ್ಕಾಂತ ಖನಿಜಗಳ (Rare-earth magnet) ರಫ್ತಿಗೆ ನಿಷೇಧ ಹೇರಿದ್ದು, ವಿಶ್ವ ಆಟೋಮೊಬೈಲ್ ಉದ್ಯಮಕ್ಕೆ ಆತಂಕ ಶುರುವಾಗಿದೆ. 2025 ರ ಜುಲೈ ಮಧ್ಯದ ವೇಳೆಗೆ ಈ ಅಪರೂಪದ - ಆಯಸ್ಕಾಂತ ಖನಿಜ ದಾಸ್ತಾನುಗಳು ಕಡಿಮೆಯಾಗುವ ಸಾಧ್ಯತೆಯಿದೆ. ರಫ್ತು ನಿಯಂತ್ರಣಗಳನ್ನು ಬಿಗಿಗೊಳಿಸುತ್ತಿರುವುದರಿಂದ ಮತ್ತು ಸಾಗಣೆ ಅನುಮತಿಗಳನ್ನು ವಿಳಂಬಗೊಳಿಸುತ್ತಿರುವ ಚೀನಾದ ನಿರ್ಧಾರವು ಜಾಗತಿಕ ಮಾರುಕಟ್ಟೆಯಲ್ಲಿ ಆತಂಕವನ್ನು ಹೆಚ್ಚಿಸಿದೆ. ಏಕೆಂದರೆ ಈ ಖನಿಜಗಳು ಎಲೆಕ್ಟ್ರಿಕ್ ವಾಹನಗಳು, ಶಸ್ತ್ರಾಸ್ತ್ರ ತಯಾರಿಕೆ ಮತ್ತು ಕ್ಲೀನ್‌ಟೆಕ್‌ನಂತಹ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಐಸಿಆರ್ಎ ಲಿಮಿಟೆಡ್‌ನ ಕಾರ್ಪೊರೇಟ್ ರೇಟಿಂಗ್ಸ್ ಹಿರಿಯ ಉಪಾಧ್ಯಕ್ಷ ಮತ್ತು ಗ್ರೂಪ್ ಹೆಡ್ ಜಿತಿನ್ ಮಕ್ಕರ್ ಅವರ ಪ್ರಕಾರ ಅಪರೂಪದ ಆಯಸ್ಕಾಂತ ಖನಿಜ ದಾಸ್ತಾನುಗಳು ಜುಲೈ 2025 ರ ಮಧ್ಯದವರೆಗೆ ಮಾತ್ರ ಉಳಿಯುವ ನಿರೀಕ್ಷೆಯಿದೆ. ಈ ಖನಿಜಗಳಿಲ್ಲದೆ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ, ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆ ಮತ್ತು ಇತರ ತಾಂತ್ರಿಕ ಕ್ಷೇತ್ರಗಳು ಕುಂಠಿತಗೊಳ್ಳಲಿವೆ ಎಂದಿದ್ದಾರೆ.

ವಾಹನ ವಲಯ ಮತ್ತು ವಾಹನ ವಲಯವಲ್ಲದ ಕ್ಷೇತ್ರಗಳಿಗಾಗಿ ಭಾರತವು ಸುಮಾರು 200 ಮಿಲಿಯನ್ ಡಾಲರ್ ಮೌಲ್ಯದ ಈ ಅಪರೂಪದ ಆಯಸ್ಕಾಂತ ಖನಿಜಗಳನ್ನು ಆಮದು ಮಾಡಿಕೊಂಡಿದೆ. ಇದರಲ್ಲಿ ಸುಮಾರು 85% ಚೀನಾದಿಂದ ಪಡೆಯಲಾಗಿದೆ. ಇದು ಭಾರತದ ಕಥೆಯಾದರೆ, ಮತ್ತೊಂದೆಡೆ ಈ ಖನಿಜಗಳ ಉತ್ಪಾದನೆಯಲ್ಲಿ ಚೀನಾ ಜಾಗತಿಕ ಮಾರುಕಟ್ಟೆಯಲ್ಲಿ ಶೇ.90ರಷ್ಟು ಪಾಲನ್ನು ಹೊಂದಿದೆ. ಈ ಖನಿಜಗಳನ್ನು 35ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ.
ಇದೀಗ ಚೀನಾ, ಏಪ್ರಿಲ್ 2025ರಲ್ಲಿ ಈ ರಫ್ತನ್ನು ಸ್ಥಗಿತಗೊಳಿಸಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿರುವ ವಾಹನ ಉದ್ಯಮವು ಹಲವಾರು ಪರ್ಯಾಯ ಆಯ್ಕೆಗಳನ್ನು ಅನ್ವೇಷಿಸುತ್ತಿದೆ. ಈ ವಿಶೇಷ ಸಾಮಗ್ರಿಗಳಿಗಾಗಿ ಚೀನಾದ ಮೇಲಿನ ಅವಲಂಬನೆಯು ಆಟೋಮೊಬೈಲ್ ಕ್ಷೇತ್ರವನ್ನು, ವಿಶೇಷವಾಗಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ವಿಭಾಗವನ್ನು ಬುಡಮೇಲು ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಈ ಖನಿಜಗಳ ಕೊರತೆಯು ತೀವ್ರ ಸಮಸ್ಯೆಯನ್ನುಂಟುಮಾಡಲಿದೆ. ಈ ಅಪಾಯವನ್ನು ಎದುರಿಸಲು ಭಾರತವು ಚೀನಾದಿಂದ ಸಂಪೂರ್ಣವಾಗಿ ಜೋಡಿಸಲಾದ ಮೋಟರ್‌ಗಳನ್ನು ಆಮದು ಮಾಡಿಕೊಳ್ಳುವುದು ಅಥವಾ ಆಯಸ್ಕಾಂತ ಖನಿಜಗಳನ್ನು ಅಳವಡಿಸಿದ ರೋಟರ್‌ಗಳನ್ನು ಮ್ಯಾಗ್ನೆಟ್ ಜೋಡಣೆಗಾಗಿ ಚೀನಾಗೆ ಸಾಗಿಸಿ ನಂತರ ಜೋಡಿಸಲಾದ ರೋಟರ್‌ಗಳನ್ನು ಮರು ಆಮದು ಮಾಡಿಕೊಳ್ಳುವ ವಿವಿಧ ಪರ್ಯಾಯ ಆಯ್ಕೆಗಳನ್ನು ಅನ್ವೇಷಿಸುತ್ತಿರುವುದಾಗಿ ತಿಳಿದುಬಂದಿದೆ.
ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ ಈ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಕಾರ್ಯಾಚರಣೆಯಲ್ಲಿ ಯಾವುದೇ ಅಡ್ಡಿ ಇಲ್ಲ. ಪರಿಸ್ಥಿತಿ ನಿರಂತರವಾಗಿ ವಿಕಸನಗೊಳ್ಳುತ್ತಿದೆ, ನಾವು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಮ್ಮ ಕಾರ್ಯಾಚರಣೆಗಳಲ್ಲಿ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಬಹು ಪರಿಹಾರಗಳನ್ನು ಅನುಸರಿಸುತ್ತಿದ್ದೇವೆ. ನಮ್ಮ ವ್ಯವಹಾರದ ಮೇಲೆ ಯಾವುದೇ ಭೌತಿಕ ಪರಿಣಾಮ ಉಂಟಾದರೆ, ನಿಯಂತ್ರಕ ಅವಶ್ಯಕತೆಗಳಿಗೆ ಅನುಗುಣವಾಗಿ ನಾವು ಎಲ್ಲಾ ಪಾಲುದಾರರಿಗೆ ತಿಳಿಸುತ್ತೇವೆ ಎಂದು ಮಾರುತಿ ಸುಜುಕಿ ಹೇಳಿದೆ.

ಸಾಮಾನ್ಯವಾಗಿ ಎಲೆಕ್ಟ್ರಿಕ್ ವಾಹನ ತಯಾರಕರು ಈ ಮ್ಯಾಗ್ನೆಟ್ ಅನ್ನು ಖರೀದಿಸಿ ಸ್ಟಾಕ್‌ನಲ್ಲಿ ಇಡುತ್ತಾರೆ. ಈ ಸ್ಟಾಕ್ ಖಾಲಿಯಾಗುವವರೆಗೆ ಉತ್ಪಾದನೆಯಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಇದು ಮುಂದಿನ ಜುಲೈನಿಂದ ಇವಿ ವಾಹನಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಅಷ್ಟರೊಳಗೆ ಭಾರತ ಸರ್ಕಾರ ಕೂಡ ಪರ್ಯಾಯ ಆಯ್ಕೆಗಳನ್ನು ಅನ್ವೇಶಿಸಿದಲ್ಲಿ ಅಪಾಯವನ್ನು ದೂರವಿಡಬಹುದು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಇತ್ತೀಚೆಗೆ ಜರ್ಮನಿಯಲ್ಲಿ ಈ ಖನಿಜಗಳಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಬಗ್ಗೆ ಭಾರತ ಕೆಲಸ ಮಾಡುತ್ತಿದೆ ಎಂದು ಸುಳಿವು ನೀಡಿದ್ದಾರೆ. ಹಾಗೆಯೇ ಇತರ ದೇಶಗಳೊಂದಿಗೆ ಸಹಕಾರವನ್ನು ಬಲಪಡಿಸುವ ಮೂಲಕ ಚೀನಾದ ಅವಲಂಬನೆಯನ್ನು ಕಡಿಮೆ ಮಾಡಲು ಭಾರತ ಯತ್ನಿಸುತ್ತಿರುವುದಾಗಿ ಹೇಳಿದೆ.


Click it and Unblock the Notifications