ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ನಮ್ಮ ಟಾಟಾ ಕಂಪನಿಯೇ ನಂ.1.. ಚೀನಾದ ಬಿವೈಡಿಗೆ 5 ಸ್ಥಾನ, ಇಲ್ಲಿದೆ ವಿವರ
ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಹತ್ತಾರು ಕಂಪನಿಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಎಲೆಕ್ಟ್ರಿಕ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿವೆ. ಇವುಗಳನ್ನು ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿಗೆ ಮಾಡುತ್ತಿದ್ದಾರೆ. ಸದ್ಯ, ಈ ಏಪ್ರಿಲ್ ತಿಂಗಳಲ್ಲಿ ಜನಪ್ರಿಯ ವಾಹನ ತಯಾರಕ ಕಂಪನಿಗಳು ಮಾರಲ್ಪಟ್ಟ ಒಟ್ಟಾರೆ ಎಲೆಕ್ಟ್ರಿಕ್ ಕಾರುಗಳ ಅಂಕಿಅಂಶದ ವರದಿ ಪ್ರಕಟಗೊಂಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಜನಪ್ರಿಯ ಸ್ವದೇಶಿ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್ (Tata Motors), ಅತಿ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವುದರೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆದರೂ ಮಾರಾಟ ಪ್ರಮಾಣ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿರುವುದು ಬೇಸರದ ಸಂಗತಿಯಾಗಿದೆ.

ಕಳೆದ ತಿಂಗಳು (ಏಪ್ರಿಲ್-2025) ಟಾಟಾ ಕಂಪನಿಯು ಬರೋಬ್ಬರಿ 4,461 ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದೆ. 2024ರ ಇದೇ ಅವಧಿಯಲ್ಲಿ 5,172 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ (YoY) ಶೇಕಡ -14% ಇಳಿಕೆಯಾಗಿದೆ.
ಎಲೆಕ್ಟ್ರಿಕ್ ಕಾರುಗಳ ಮಾರಾಟ ಸಂಖ್ಯೆ ಇಳಿಮುಖವಾಗಿರುವ ಬಗ್ಗೆ ಟಾಟಾ ಮೋಟಾರ್ಸ್ ಯಾವುದೇ ಸ್ಪಷ್ಟವಾದ ಕಾರಣವನ್ನು ಬಹಿರಂಗಪಡಿಸಿಲ್ಲ. ಈ ಮೇ ತಿಂಗಳು ಮಾರಾಟ ಸಂಖ್ಯೆ ಸುಧಾರಣೆಗೊಳ್ಳುವ ನಿರೀಕ್ಷೆಯಿದೆ. ಪ್ರಸ್ತುತ ದೇಶಿಯವಾಗಿ ಟಾಟಾ ಕಂಪನಿಯು ಟಿಯಾಗೊ ಇವಿ, ಟಿಗೂರ್ ಇವಿ, ಪಂಚ್ ಇವಿ, ನೆಕ್ಸಾನ್ ಇವಿ ಮತ್ತು ಕರ್ವ್ ಇವಿಯನ್ನು ಮಾರಾಟಗೊಳಿಸುತ್ತಿದೆ.

ಎರಡನೇ ಸ್ಥಾನದಲ್ಲಿ ಎಂಜಿ ಮೋಟಾರ್ (MG Motor) ಇದೆ. ಹೋದ ತಿಂಗಳು (ಏಪ್ರಿಲ್-2025) ಕಂಪನಿಯು ಸರಿ ಸುಮಾರು 3,488 ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟಗೊಳಿಸಿದೆ. 2024ರ ಏಪ್ರಿಲ್‌ನಲ್ಲಿ 1,268 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿ ಸಂಖ್ಯೆಗೆ ಹೋಲಿಸಿದರೆ ಮಾರಾಟ ಪ್ರಮಾಣ 175% ಬೆಳವಣಿಯಾಗಿದೆ.
ಎಂಜಿ ಮೋಟಾರ್, ಇಷ್ಟೊಂದು ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟಗೊಳಿಸಲು ಕಾಮೆಟ್ ಹಾಗೂ ವಿಂಡ್ಸರ್ ಇವಿಗಳು ಬಹುಮುಖ್ಯ ಕಾರಣವಾಗಿವೆ. ಇವೆರೆಡು ಕಾರುಗಳು ಹೆಚ್ಚು ಅತ್ಯಾಧುನಿಕವಾಗಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತವೆ. ಈ ಕಾರಣಕ್ಕೆ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡಿದ್ದಾರೆ.

ಈಚೆಗೆ 'ಎಂಜಿ ವಿಂಡ್ಸರ್ ಇವಿ ಪ್ರೊ' ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಇದು ರೂ.17.49 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 52.9 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 449 ಕಿಲೋಮೀಟರ್ ಓಡುತ್ತದೆ. 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮೂರನೇ ಸ್ಥಾನದಲ್ಲಿ ಸ್ವದೇಶಿ ವಾಹನ ತಯಾರಕ ಕಂಪನಿ ಮಹೀಂದ್ರಾ (Mahindra) ಇದೆ. ಕಳೆದ ತಿಂಗಳು ಕಂಪನಿಯು 3,002 ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸಿದೆ. 2024ರ ಇದೇ ಅವಧಿಯಲ್ಲಿ 670 ಯುನಿಟ್‌ಗಳನ್ನು ಮಾರಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇಕಡ 348% ಪ್ರಗತಿಯಾಗಿದೆ. ಮಹೀಂದ್ರಾ ಕಂಪನಿಯು ಈ ಮಟ್ಟದಲ್ಲಿ ಪ್ರಗತಿ ಸಾಧಿಸಲು ಎಕ್ಸ್ಇವಿ 9ಇ ಮತ್ತು ಬಿಇ 6 ಎಲೆಕ್ಟ್ರಿಕ್ ಎಸ್‌ಯುವಿಗಳು ಬಹುಮುಖ್ಯವಾದ ಕಾರಣವಾಗಿವೆ.

ಮಹೀಂದ್ರಾ ಬಿಇ 6 ಎಲೆಕ್ಟ್ರಿಕ್ ಕಾರು ರೂ.19 ಲಕ್ಷದಿಂದ ರೂ.27 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ಹೊಂದಿದೆ. 59 & 79 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 535 ರಿಂದ 682 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ. ಡುಯಲ್ ಸ್ಕ್ರೀನ್ ಸೆಟಪ್ ಮತ್ತು ಟೂ-ಸ್ಪೋಕ್ ಸ್ಟೀರಿಂಗ್ ವೀಲ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ಮಹೀಂದ್ರಾ ಎಕ್ಸ್ಇವಿ 9ಇ ಎಲೆಕ್ಟ್ರಿಕ್ ಎಸ್‌ಯುವಿಯು ಕನಿಷ್ಠ ರೂ.22 ಲಕ್ಷ ಮತ್ತು ಗರಿಷ್ಠ ರೂ.30 ಲಕ್ಷ (ಎಕ್ಸ್- ಶೋರೂಂ) ದರವನ್ನು ಪಡೆದಿದೆ. 59 ಹಾಗೂ 79 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 656 ಕಿ.ಮೀ ಓಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಪ್ಯಾಸೆಂಜರ್-ಸೈಡ್ ಡಿಸ್‌ಪ್ಲೇಗಾಗಿ 12.3-ಇಂಚಿನ ಸ್ಕ್ರೀನ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ನಾಲ್ಕನೇ ಸ್ಥಾನವನ್ನು ಹ್ಯುಂಡೈ (Hyundai) ಕಂಪನಿಯು ತನ್ನದಾಗಿಸಿಕೊಂಡಿದೆ. ಹೋದ ತಿಂಗಳು (ಏಪ್ರಿಲ್-2025) ಕಂಪನಿಯು ಬರೋಬ್ಬರಿ 686 ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದೆ. 2024ರ ಏಪ್ರಿಲ್‌ನಲ್ಲಿ 91 ಯುನಿಟ್‌ಗಳನ್ನು ಮಾರಿತ್ತು. ಈ ಅಂಕಿ ಸಂಖ್ಯೆಗೆ ಹೋಲಿಸಿದರೆ, ಮಾರಾಟ ಪ್ರಮಾಣ 654% ಪ್ರಗತಿಯಾಗಿದೆ.
ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹ್ಯುಂಡೈ ಕಂಪನಿಯು ಈ ಪರಿಪ್ರಮಾಣದಲ್ಲಿ ಬೆಳವಣಿಗೆಯಾಗಲು ಕ್ರೆಟಾ ಎಲೆಕ್ಟ್ರಿಕ್ ಬಹುಮುಖ್ಯವಾದ ಕಾರಣವಾಗಿದೆ. ಇದು ರೂ.18 ಲಕ್ಷದಿಂದ ರೂ.23 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 42 & 51.4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 390 ರಿಂದ 473 ಕಿ.ಮೀ ಓಡುತ್ತದೆ.
ನೂತನ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹದು. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ & ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ ಸ್ಕ್ರೀನ್ ಮತ್ತು ಡುಯಲ್-ಜೋನ್ ಆಟೋ ಎಸಿ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳನ್ನು ಪಡೆದಿದೆ.
ಐದನೇ ಸ್ಥಾನದಲ್ಲಿ ಚೀನಾ ಒಡೆತನದ ಬಿವೈಡಿ (BYD) ಕಂಪನಿಯಿದೆ. ಕಳೆದ ತಿಂಗಳು (ಏಪ್ರಿಲ್-2025) ಸರಿ ಸುಮಾರು 350 ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟಗೊಳಿಸಿದೆ. 2024ರ ಇದೇ ಅವಧಿಯಲ್ಲಿ 157 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ (YoY) ಶೇಕಡ 123% ಬೆಳವಣಿಗೆಯಾಗಿದೆ. ಬಿವೈಡಿ ಪ್ರಗತಿಗೆ ಆಟ್ಟೊ 3, ಸೀಲ್, ಸೀಲಿಯನ್ ಮತ್ತು ಇಮ್ಯಾಕ್ಸ್ 7 ಕಾರುಗಳು ಬಹುಮುಖ್ಯ ಕಾರಣವಾಗಿವೆ.
ಇದರೊಟ್ಟಿಗೆ ಆರನೇ ಸ್ಥಾನದಲ್ಲಿ ಪ್ರೀಮಿಯಂ ಕಾರು ತಯಾರಕ ಕಂಪನಿ ಬಿಎಂಡಬ್ಲ್ಯೂ (128 ಯುನಿಟ್) ಇದೆ. ಏಳನೇ ಸ್ಥಾನದಲ್ಲಿ ಮರ್ಸಿಡಿಸ್ - ಬೆಂಜ್ (81 ಯುನಿಟ್), ಎಂಟನೇ ಸ್ಥಾನದಲ್ಲಿ ಸಿಟ್ರಸ್ (48 ಯುನಿಟ್), ಒಂಬತ್ತನೇ ಸ್ಥಾನದಲ್ಲಿ ವೋಲ್ವೋ (35 ಯುನಿಟ್) ಹಾಗೂ ಹತ್ತನೇ ಸ್ಥಾನದಲ್ಲಿ ಕಿಯಾ (31 ಯುನಿಟ್) ಕಂಪನಿಯಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications