ಟಾಟಾ ಭದ್ರಕೋಟೆ ಛಿದ್ರಗೊಳಿಸಲಿದೆಯೇ ಎಂಜಿ ಮೋಟಾರ್: ಮಾರಾಟದಲ್ಲಿ ತೀರಾ ಸನಿಹ... ಏನಾಗಿದೆ?
ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರಾಟವು ಭಾರೀ ಏರಿಕೆ ಕಾಣುತ್ತಿದೆ. ಸದ್ಯ ಟಾಟಾ, ಮಹೀಂದ್ರಾ ಮತ್ತು ಎಂಜಿ ಮೋಟಾರ್ ಜನವರಿ 2025 ರಲ್ಲಿ ಇವಿ ಮಾರಾಟ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಮೊದಲಿನಿಂದಲೂ ಎಲೆಕ್ಟ್ರಿಕ್ ಕಾರು ವಿಭಾಗಕ್ಕೆ ನಾಯಕನಾಗಿ ಟಾಟಾ ಮುಂದುವರಿಯುತ್ತಿದೆ. ಆದರೆ ಈಗ ತೀರಾ ಸನಿಹವಾಗಿ ಎಂಜಿ ಮೋಟಾರ್ ಮಾರಾಟ ಅಂಕಿಅಂಶಗಳು ಬಂದಿವೆ. ಮುಂಬರುವ ದಿನಗಳಲ್ಲಿ ಟಾಟಾವನ್ನು ಮೀರಿಸಿದರೂ ಅಚ್ಚರಿಯಿಲ್ಲ. ಹಾಗಾದ್ರೆ ಜನವರಿಯಲ್ಲಿ ಯಾವ ಬ್ರಾಂಡ್ ಎಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿವೆ ನೋಡೋಣ.
ಟಾಟಾ ಮೋಟಾರ್ಸ್: ಟಾಟಾ ಮೋಟಾರ್ಸ್ (Tata Motors) ಜನವರಿಯಲ್ಲಿ 5,037 ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಜನವರಿಯಲ್ಲಿ ಮಾರಾಟವಾದ 5,790 ಇವಿಗಳಿಗೆ ಹೋಲಿಸಿದರೆ ಈ ಬಾರಿಯ ಮಾರಾಟದಲ್ಲಿ ಟಾಟಾ ಮೊಟಾರ್ಸ್ ಶೇ13 ರಷ್ಟು ಇಳಿಕೆ ಕಂಡಿದೆ. 2024ರ ಸಂಪೂರ್ಣ ವರ್ಷದಲ್ಲಿ 61,435 ಕಾರುಗಳ ಮಾರಾಟವನ್ನು ದಾಖಲಿಸಿ ಶೇಕಡಾ 2 ರಷ್ಟು ಹೆಚ್ಚಳದೊಂದಿಗೆ ಶೇ62 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್: ಎಂಜಿ ಮೋಟಾರ್ (MG Motor) ಜನವರಿಯಲ್ಲಿ 4,225 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿದೆ, ಇದು ಹಿಂದಿನ ವರ್ಷ ಜನವರಿಯಲ್ಲಿ ಮಾರಾಟವಾದ 1,203 ಯುನಿಟ್ ಕಾರುಗಳಿಗೆ ಹೋಲಿಸಿದರೆ ಶೇ251 ರಷ್ಟು ಹೆಚ್ಚಳ ಕಂಡಿದೆ. 2024 ರಲ್ಲಿ ಒಟ್ಟು 21,464 ಎಲೆಕ್ಟ್ರಿಕ್ ವಾಹನಗಳ ಮಾರಾಟದೊಂದಿಗೆ ಶೇ21 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಬಲವಾದ ಮಾರಾಟವನ್ನು ದಾಖಲಿಸಿದೆ.
ಮಹೀಂದ್ರಾ: ಮಹೀಂದ್ರಾ (Mahindra) 2025ರ ಜನವರಿಯಲ್ಲಿ ಕೇವಲ 686 XUV400 ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಮಾರಾಟ ಮಾಡಿದೆ. 2024ರ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ 5,698 ಯುನಿಟ್ ಕಾರುಗಳು ಮಾರಾಟವಾಗುವ ಮೂಲಕ ಶೇ19 ರಷ್ಟು ಏರಿಕೆಯಾಗಿ ಕಂಪನಿಯು ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಶೇಕಡಾ 7 ರಷ್ಟು ಪಾಲನ್ನು ಪಡೆದುಕೊಂಡಿದೆ.

ಹ್ಯುಂಡೈ ಮೋಟಾರ್: ಜನವರಿ 2025 ರಲ್ಲಿ 321 ಯುನಿಟ್ ಕಾರುಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ಹ್ಯುಂಡೈನ (Hyundai) ಅತ್ಯುತ್ತಮ ಮಾಸಿಕ ಮಾರಾಟವಾಗಿದೆ. ಕಂಪನಿಯು ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ ತನ್ನ ಏಕೈಕ ಇವಿ ಕಾರಾಗಿರುವ ಐಯಾನಿಕ್ 5 ನೊಂದಿಗೆ ಮಾರಾಟದಲ್ಲಿ ಹೆಣಗಾಡಿತ್ತು. ಆದ್ರೆ ಈಗ ಜನವರಿ 17 ರಂದು ಆಟೋ ಎಕ್ಸ್ ಪೋದಲ್ಲಿ ಕ್ರೆಟಾ ಎಲೆಕ್ಟ್ರಿಕ್ ಬಿಡುಗಡೆಯಾಗಿದ್ದು, ಮಾರಾಟದ ಸಂಖ್ಯೆ ಹೆಚ್ಚಾಗಲು ಪ್ರಾರಂಭಿಸಿದೆ.
ಬಿವೈಡಿ: ಎಲೆಕ್ಟ್ರಿಕ್ ಅಟೊ 3 ಎಸ್‌ಯುವಿ, ಸೀಲ್ ಸೆಡಾನ್ ಮತ್ತು ಹೊಸ ಇಮ್ಯಾಕ್ಸ್ 7 ಎಂಪಿವಿಯನ್ನು ಮಾರಾಟ ಮಾಡುವ ಬಿವೈಡಿ (BYD) ಇಂಡಿಯಾ, ಜನವರಿಯಲ್ಲಿ ಒಟ್ಟು 312 ಯುನಿಟ್ ಕಾರುಗಳ ಮಾರಾಟವನ್ನು ದಾಖಲಿಸಿದೆ. ಕಳೆದ ವರ್ಷ ಜನವರಿಯಲ್ಲಿ 163 ಕಾರುಗಳು ಮಾರಾಟವಾಗಿದ್ದವು. ಬಿವೈಡಿ ತನ್ನ ಸೀಲಿಯನ್ 7 ಗಾಗಿ ಫೆಬ್ರವರಿ 17 ರಂದು ಬುಕಿಂಗ್ ಘೋಷಿಸಲಿದ್ದು, ವಿತರಣೆಗಳು ಮಾರ್ಚ್‌ನಲ್ಲಿ ಪ್ರಾರಂಭವಾಗುತ್ತವೆ.

ಸಿಟ್ರನ್: ಸಿಟ್ರನ್ (Citroen) ಕಂಪನಿಯು 2025 ರ ಜನವರಿಯಲ್ಲಿ 269 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿದೆ. ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ 1,851 ಯುನಿಟ್ ಕಾರುಗಳ ಮಾರಾಟದೊಂದಿಗೆ ಶೇಕಡಾ 5 ರಷ್ಟು ಹೆಚ್ಚಾಗಿದೆ. ಇದು ಕಂಪನಿಗೆ ಮಾಸಿಕ ಮತ್ತು 10 ತಿಂಗಳ ಮಾರುಕಟ್ಟೆ ಪಾಲನ್ನು ಶೇಕಡಾ 2ಕ್ಕೆ ಹೆಚ್ಚಿಸಿದೆ.
ಕಿಯಾ: ಕಿಯಾ (kia) ಈ ಜನವರಿಯಲ್ಲಿ 47 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿದೆ, ಇದು 2024 ರ ಜನವರಿಯಲ್ಲಿ 38 ಕಾರುಗಳನ್ನು ಮಾತ್ರ ಮಾರಾಟ ಮಾಡಿತ್ತು. ಕಳದೆ ವರ್ಷ ಜನವರಿಗೆ ಹೋಲಿಸಿದರೆ ಶೇ24 ರಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ 2024 ರವರೆಗೆ, ಕಂಪನಿಯು ಕೇವಲ ಇವಿ6 ಎಂಬ ಎಲೆಕ್ಟ್ರಿಕ್ ಕಾರನ್ನು ಮಾತ್ರ ಮಾಡಿತ್ತು. ನಂತರ ಅಕ್ಟೋಬರ್‌ನಲ್ಲಿ ಆರು ಆಸನಗಳ ಇವಿ9 ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ.


Click it and Unblock the Notifications