ಪೆಟ್ರೋಲ್ ವೆಹಿಕಲ್‌ಗಳಿಗೆ ಬೈ-ಬೈ ಹೇಳುತ್ತಿದ್ದಾರೆ ಕರ್ನಾಟಕ ಜನರು: EV ಸೇಲ್ಸ್‌ನಲ್ಲಿ ನಂ.3, ಕಾರಣವೇನು?
ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಚಾಲಿತ ವಾಹನಗಳಿಗೆ (EV) ದಿನೇ ದಿನೆ ಬೇಡಿಕೆ ಹೆಚ್ಚಾಗುತ್ತಿದ್ದು, ಪೆಟ್ರೋಲ್ ಚಾಲಿತ ವಾಹನಗಳಿಗೆ ಪೈಪೋಟಿ ನೀಡುವಂತೆ ಮಾರಾಟವಾಗುತ್ತಿವೆ. ಅದಕ್ಕೆ ತಕ್ಕಂತೆ ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, 2025ರ ಹಣಕಾಸು ವರ್ಷದಲ್ಲಿ ಕರ್ನಾಟಕವು ಪರಿಸರ ಸ್ನೇಹಿ ಇವಿ ಮಾರಾಟದಲ್ಲಿ ಗಣನೀಯವಾದ ಪ್ರಗತಿ ಸಾಧಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
2025ರ ಹಣಕಾಸು ವರ್ಷದಲ್ಲಿ (FY2025) ಕರ್ನಾಟಕದಲ್ಲಿ ಒಟ್ಟು 1,73,559 ಯುನಿಟ್ ಎಲೆಕ್ಟ್ರಿಕ್ ವಾಹನಗಳು ಮಾರಾಟಗೊಂಡಿವೆ. ಅದೇ ರೀತಿಯಲ್ಲಿ 2024ರ ಹಣಕಾಸು ವರ್ಷದಲ್ಲಿ (FY2025) ಸರಿ ಸುಮಾರು 1,70,475 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಅಂಕಿ ಸಂಖ್ಯೆಯನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 2% ಪ್ರಗತಿಯಾಗಿದೆ.

ಆದರೂ 2025ರ ಹಣಕಾಸು ವರ್ಷದಲ್ಲಿ ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಮಾರಾಟವಾದ ಪ್ರಮುಖ 5 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಉತ್ತರ ಪದೇಶ (3,77,526 ಯುನಿಟ್) 1ನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ (2,46,221 ಯುನಿಟ್) 2ನೇ ಸ್ಥಾನದಲ್ಲಿದೆ. ಹಾಗೆಯೇ ತಮಿಳುನಾಡು (1,37,699 ಯುನಿಟ್) 4ನೇ ಸ್ಥಾನದಲ್ಲಿದ್ದರೆ, ಬಿಹಾರ (1,13,645 ಯುನಿಟ್) 5ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
| ಕ್ರಮ ಸಂಖ್ಯೆ | ರಾಜ್ಯಗಳು | 2025ರ ಹಣಕಾಸು ವರ್ಷದಲ್ಲಿ ಮಾರಾಟಗೊಂಡ ಇವಿಗಳ ಸಂಖ್ಯೆ |
| 01 | ಉತ್ತರ ಪದೇಶ | 3,77,526 ಯುನಿಟ್‌ಗಳು |
| 02 | ಮಹಾರಾಷ್ಟ್ರ | 2,46,221 ಯುನಿಟ್‌ಗಳು |
| 03 | ಕರ್ನಾಟಕ | 1,73,559 ಯುನಿಟ್‌ಗಳು |
| 04 | ತಮಿಳುನಾಡು | 1,37,699 ಯುನಿಟ್‌ಗಳು |
| 05 | ಬಿಹಾರ | 1,13,645 ಯುನಿಟ್‌ಗಳು |
ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಳಗೊಳ್ಳಲು ಕಾರಣಗಳೇನು:
ಬೆಂಗಳೂರು ಇವಿ ಹಬ್: ಈಗಾಗಲೇ ರಾಜ್ಯ ರಾಜಧಾನಿ ಇವಿ ಹಬ್ ಆಗಿ ಬದಲಾಗುತ್ತಿದೆ. ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಓಲಾ ಎಲೆಕ್ಟ್ರಿಕ್, ಎಥರ್ ಎನರ್ಜಿ, ಅಲ್ಟ್ರಾವೈಲೆಟ್ ಆಟೋಮೋಟಿವ್ ಹಾಗೂ ಸಿಂಪಲ್ ಎನರ್ಜಿ ನಗರದಲ್ಲೇ ಮುಖ್ಯ ಕಚೇರಿ ಹೊಂದಿವೆ. ಅಧ್ಯಯನವೊಂದರ ಪ್ರಕಾರ, ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಹೆಚ್ಚು ಸಂಶೋಧನೆಗಳು ಬೆಂಗಳೂರು ಕೇಂದ್ರೀಕೃತವಾಗಿವೆ.
ದೊಡ್ಡ ಸಂಖ್ಯೆಯಲ್ಲಿರುವ ಚಾರ್ಜಿಂಗ್ ಸ್ಟೇಷನ್‌ಗಳು: ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಬರೋಬ್ಬರಿ 5,765 ಚಾರ್ಜಿಂಗ್ ಸ್ಟೇಷನ್‌ಗಳಿವೆ. ಅದರಲ್ಲಿ 4,462 ಬೆಂಗಳೂರು ನಗರದಲ್ಲೇ ಇದ್ದು, 5,479 ಚಾರ್ಜಿಂಗ್ ಸ್ಟೇಷನ್‌ಗಳನ್ನು ಖಾಸಗಿ ಕಂಪನಿ ನಿರ್ವಹಿಸುತ್ತಿವೆ. 195 ಸ್ಟೇಷನ್‌ಗಳನ್ನು ಬೆಸ್ಕಾಂ ಹಾಗೂ ಉಳಿದ 70 ಸ್ಟೇಷನ್‌ಗಳನ್ನು ಇತರೆ ಎಸ್ಕಾಂ ನಿರ್ವಹಣೆ ಮಾಡುತ್ತಿವೆ.
ಸುಲಭ ಸರ್ವಿಸ್: ಬೆಂಗಳೂರಿನಲ್ಲಿಯೇ ಬಹುತೇಕ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಬಿಡುಬಿಟ್ಟಿವೆ. ಜೊತೆಗೆ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಶೋರೂಂ ಹಾಗೂ ಸರ್ವಿಸ್ ಸೆಂಟರ್‌ಗಳನ್ನು ಹೊಂದಿವೆ. ಈ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳನ್ನು ಆದಷ್ಟು ಬೇಗ ರಿಪೇರಿ ಮಾಡಿ, ಮಾಲೀಕರಿಗೆ ಹಿಂದಿರುಗಿಸಲಾಗುತ್ತದೆ. ಬೇರೆ ರಾಜ್ಯಗಳಲ್ಲಿ ದಿನಗಟ್ಟಲೆ ಕಾಯುವ ಪರಿಸ್ಥಿತಿ ಇದೆ.
ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಬೇಡಿಕೆ: ಬೆಂಗಳೂರು ಮಾತ್ರವಲ್ಲದೆ, ಮೈಸೂರು, ಮಂಗಳೂರು, ದಾವಣೆಗೆರೆ, ತುಮಕೂರು ಹಾಗೂ ಹುಬ್ಬಳ್ಳಿ-ಧಾರವಾಡದಂತಹ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಪೆಟ್ರೋಲ್ ಚಾಲಿತ ವಾಹನಗಳಿಗೆ ಹೋಲಿಕೆ ಮಾಡಿದರೆ, ಎಲೆಕ್ಟ್ರಿಕ್ ವಾಹನಗಳು (ಇವಿ) ಕಡಿಮೆ ನಿರ್ವಹಣಾ ವೆಚ್ಚ ಹೊಂದಿವೆ. ಹೀಗಾಗಿ, ಗ್ರಾಹಕರು ಇವಿಗಳ ಖರೀದಿಯತ್ತ ಮುಖ ಮಾಡಿದ್ದಾರೆ.

ಸಾರ್ವಜನಿಕ ಸಾರಿಗೆಯಲ್ಲೂ ಇವಿ ಬಳಕೆ: ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಗಳು ಎಲೆಕ್ಟ್ರಿಕ್ ಚಾಲಿತ ಬಸ್‌ಗಳನ್ನು ಬಳಕೆ ಮಾಡುತ್ತಿವೆ. ಈ ಮೂಲಕ ಜನರಲ್ಲಿ ಮಾಲಿನ್ಯ ರಹಿತ ಎಲೆಕ್ಟ್ರಿಕ್ ವಾಹನಗಳ ಉಪಯೋಗವನ್ನು ಉತ್ತೇಜಿಸಲಾಗುತ್ತಿದೆ. ಇದರೊಂದಿಗೆ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕವು ಎಲೆಕ್ಟ್ರಿಕ್ ವಾಹನಗಳ ಬಳಕೆ ಬಗ್ಗೆ ಅರಿವು ಮೂಡಿಸುತ್ತಿವೆ.
ಕರ್ನಾಟಕ ಸರ್ಕಾರ ಯಾವ ಕ್ರಮ ಕೈಗೊಂಡಿದೆ: ರಾಜ್ಯ ಸರ್ಕಾರವು 'ಕರ್ನಾಟಕ ಸ್ವಚ್ಛ ಚಲನಶೀಲತೆ ನೀತಿ 2025-30'ನ್ನು ಘೋಷಣೆ ಮಾಡಿದೆ. ಈ ಮೂಲಕ ಸ್ವಚ್ಛ ಚಲನಶೀಲತಾ ವಾಹನ ಸರಪಳಿಯಲ್ಲಿ ರೂ.50,000 ಕೋಟಿ ಹೊಡಿಕೆ ಆಕರ್ಷಿಸುವ ಗುರಿಯನ್ನು ಹೊಂದಿದೆ. ಎಲೆಕ್ಟ್ರಿಕ್ ವಾಹನೋದ್ಯಮ ಕ್ಷೇತ್ರದಲ್ಲಿ 1 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಗುರಿಯನ್ನು ಹಾಕಿಕೊಂಡಿದೆ.

ಇದು ಮಾತ್ರವಲ್ಲದೆ, ಎಲೆಕ್ಟ್ರಿಕ್ ವಾಹನಗಳ (ಇವಿ) ತಯಾರಿಕೆ ಮತ್ತು ಬಳಕೆಗೆ ಉತ್ತೇಜಿಸಲು ರಾಜ್ಯ ರಾಜಧಾನಿ ಬೆಂಗಳೂರು ವಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ 'ಇವಿ ಕ್ಲಸ್ಟರ್' ನಿರ್ಮಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಇದಕ್ಕಾಗಿ ರೂ.25 ಕೋಟಿ ಅನುದಾನವನ್ನು ಒದಗಿಸಲು ತೀರ್ಮಾನ ಮಾಡಿದೆ.
ಒಟ್ಟಾರೆಯಾಗಿ ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುವವರು ಹೆಚ್ಚಾಗುತ್ತಿದ್ದಾರೆ. ಈ ಹಣಕಾಸು ವರ್ಷದಲ್ಲೂ ಅಧಿಕ ಸಂಖ್ಯೆಯಲ್ಲಿ ಗ್ರಾಹಕರು ಎಲೆಕ್ಟ್ರಿಕ್ ಚಾಲಿತ ದ್ವಿಚಕ್ರ ವಾಹನ ಅಥವಾ ಕಾರುಗಳನ್ನು ಕೊಂಡುಕೊಳ್ಳುವ ನಿರೀಕ್ಷೆಯಿದೆ. ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಎಲ್ಲ ರಾಜ್ಯಗಳನ್ನು ಹಿಂದಿಕ್ಕಿ, ಕರ್ನಾಟಕ ಮೊದಲ ಸ್ಥಾನಕ್ಕೆ ಬಂದರೂ ಅಚ್ಚರಿಯಿಲ್ಲ.


Click it and Unblock the Notifications