Hyundai: ಮತ್ತೆ ನಂ.1 ಸ್ಥಾನಕ್ಕೇರಿದ ಹ್ಯುಂಡೈ ಕಾರು: ಏನ್ ಗುರು ಡಿಮ್ಯಾಂಡ್... ಜನ ಮುಗಿಬಿದ್ದು ಖರೀದಿ!
ಪ್ರಮುಖ ಕಾರು ತಯಾರಕ ಕಂಪನಿ ಹ್ಯುಂಡೈ (Hyundai), ತನ್ನ ಕ್ರೆಟಾವನ್ನು ಜನವರಿಯಿಂದ ಜುಲೈ 2025 ರವರೆಗೆ (ಎಲ್ಲಾ ವಿಭಾಗಗಳಲ್ಲಿ) ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿಯಾಗಿದೆ ಎಂದು ಘೋಷಿಸಿದೆ. ಈ ಅವಧಿಯಲ್ಲಿ ಗಮನಾರ್ಹವಾದ 1,17,458 ಯುನಿಟ್ ಕಾರುಗಳು ಮಾರಾಟವಾಗಿದ್ದು, ವರ್ಷದಿಂದ ವರ್ಷಕ್ಕೆ 8% ರಷ್ಟು ಬೆಳವಣಿಗೆಯೊಂದಿಗೆ (ಜನವರಿ-ಜುಲೈ 2024 ಕ್ಕೆ ಹೋಲಿಸಿದರೆ) ಹ್ಯುಂಡೈ ಕ್ರೆಟಾ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವುದನ್ನು ಮುಂದುವರೆಸಿದೆ. ಗ್ರಾಹಕರಲ್ಲಿ ಉನ್ನತ ಆಯ್ಕೆಯಾಗಿ ತನ್ನ ಖ್ಯಾತಿಯನ್ನು ಗಟ್ಟಿಗೊಳಿಸಿದೆ ಎಂದು ಕಂಪನಿ ಹೇಳಿದೆ.
ಹುಂಡೈ ನಿರ್ದೇಶಕ ತರುಣ್ ಗರ್ಗ್ ಮಾತನಾಡಿ, "ಹುಂಡೈ ಕ್ರೆಟಾ ಬಿಡುಗಡೆಯಾಗಿ ಹತ್ತು ವರ್ಷ ಕಳೆದಿದೆ, ನಮ್ಮ ಗ್ರಾಹಕರ ಅಚಲ ಪ್ರೀತಿ ಮತ್ತು ನಂಬಿಕೆಯಿಂದ ನಾವು ನಿಜವಾಗಿಯೂ ವಿನೀತರಾಗಿದ್ದೇವೆ. ಜನವರಿ - ಜುಲೈ 2025 ರ ಅವಧಿಯಲ್ಲಿ ಎಲ್ಲಾ ವಿಭಾಗಗಳಲ್ಲಿ ಭಾರತದ ಅತ್ಯುತ್ತಮ ಮಾರಾಟವಾದ ಕಾರಾಗುವುದು ಕೇವಲ ಮಾರಾಟದ ಮೈಲಿಗಲ್ಲು ಮಾತ್ರವಲ್ಲ, ಇದು ಹತ್ತು ವರ್ಷಗಳಲ್ಲಿ ಕ್ರೆಟಾ ನಿರ್ಮಿಸಿರುವ ಭಾವನಾತ್ಮಕ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ ಎಂದರು.

ತನ್ನ 10 ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತಾ, ಹುಂಡೈ ಕ್ರೆಟಾ ಪವರ್, ಡಿಸೈನ್ ಮತ್ತು ಆಕಾಂಕ್ಷೆಗೆ ಸಮಾನಾರ್ಥಕವಾಗಿ ಬೆಳೆದಿದೆ. ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ತೀವ್ರಗೊಳ್ಳುತ್ತಿರುವ ಸ್ಪರ್ಧೆಯ ಹೊರತಾಗಿಯೂ, ಕ್ರೆಟಾ ತನ್ನ ಬಲವಾದ ಬೇಡಿಕೆಯನ್ನು ಮುಂದುವರೆಸಿದೆ, ಭಾರತದಲ್ಲಿ ಅತ್ಯಂತ ಆದ್ಯತೆಯ ಎಸ್‌ಯುವಿಯಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಹ್ಯುಂಡೈ ಕ್ರೆಟಾ ವಿಶೇಷತೆಗಳು: ಹ್ಯುಂಡೈ ಕ್ರೆಟಾ ಪೆಟ್ರೋಲ್, ಟರ್ಬೊ-ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಆಯ್ಕೆಗಳಲ್ಲಿ ಸಿಗುತ್ತದೆ. ಇದು ರೂ. 11.11 ಲಕ್ಷ ಆರಂಭಿಕ ಬೆಲೆ ಹಾಗೂ ರೂ. 20.50 ಲಕ್ಷ ಟಾಪ್ ವೇರಿಯೆಂಟ್ ಬೆಲೆಯನ್ನು ಹೊಂದಿದೆ. ಹಾಗೆಯೇ ಕ್ರೆಟಾ ಎಲೆಕ್ಟ್ರಿಕ್ ಕಾರಿನ ಬೆಲೆಯು ಬೇಸ್ ವೇರಿಯೆಂಟ್‌ಗೆ 17.99 ಲಕ್ಷವಿದ್ದು, ಟಾಪ್ ವೇರಿಯೆಂಟ್ 24.38 ಲಕ್ಷ ಬೆಲೆಯಿದೆ. ಎಲ್ಲವೂ ಎಕ್ಸ್ ಶೋರೂಂ ಬೆಲೆಗಳಾಗಿವೆ.

ಈ ಕಾರು 1.5-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀ. ಟರ್ಬೊ ಪೆಟ್ರೋಲ್ ಹಾಗೂ 1.5-ಲೀ. ಡೀಸೆಲ್ ಎಂಜಿನ್‌ನ್ನು ಪಡೆದಿದೆ. 17.4 ರಿಂದ 21.8 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಆಸನ ಆಯ್ಕೆ ವ್ಯವಸ್ಥೆ ಇದ್ದು, ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 433 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ.
ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಅನ್ನು 42KWh ಮತ್ತು 51.4kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಚಿಕ್ಕ ಬ್ಯಾಟರಿ ಪ್ಯಾಕ್ 390 ಕಿ.ಮೀ ರೇಂಜ್ ಹಾಗೂ ದೊಡ್ಡದು MIDC ಪರೀಕ್ಷೆಯಲ್ಲಿ 473 ಕಿ.ಮೀ ರೇಂಜ್ ಹೊಂದಿದೆ. ಎರಡೂ ಬ್ಯಾಟರಿ ಪ್ಯಾಕ್‌ಗಳನ್ನು ಮುಂಭಾಗದ ಆಕ್ಸಲ್‌ಗೆ ಲಿಂಕ್ ಮಾಡಲಾದ ಒಂದೇ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾಗಿದೆ.

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪರಿಷ್ಕೃತ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್, 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಂಗಳೊಂದಿಗೆ (ADAS) ಡ್ಯುಯಲ್-ಜೋನ್ AC ಒದಗಿಸಲಾಗಿದೆ. ಇದರೊಂದಿಗೆ ಪನಾರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 8-ಸ್ಪೀಕರ್ ಬಾಸ್ ಸೌಂಡ್ ಸಿಸ್ಟಮ್ ಹೊಂದಿದೆ.
ಹೊಸ ಹುಂಡೈ ಕ್ರೆಟಾ ಎಸ್‍ಯುವಿ ಒಳಭಾಗದ ಹಿಂದಿನ ಸೀಟ್ 2 - ಸ್ಟೆಪ್ ರಿಕ್ಲೈನ್ ಫಂಕ್ಷನ್ ಸೇರಿದಂತೆ ಸೌಕರ್ಯ ಮತ್ತು ಅನುಕೂಲಕ್ಕಾಗಿ ಕ್ಯಾಬಿನ್‌ನಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ನೀಡಲಾಗಿದೆ. ಇನ್ನು ಸುರಕ್ಷತೆಯ ವಿಷಯದಲ್ಲಿ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಸೀಟ್ ಆಂಕರೇಜ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿಯಂತಹ ಆಧುನಿಕ ಫೀಚರ್ಸ್ ಒಳಗೊಂಡಿದೆ.


Click it and Unblock the Notifications