Hyundai: ಜನಪ್ರಿಯ ಹ್ಯುಂಡೈ ಐ20 ಕಾರಿನ ಹೊಸ ವೇರಿಯೆಂಟ್ ಬಿಡುಗಡೆ.. ಬೆಲೆ ಇಷ್ಟೇನಾ.. ವಿಶೇಷತೆಗಳೇನು?
ಹ್ಯುಂಡೈ ಐ20 (Hyundai i20) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಇದು ಸಾಕಷ್ಟು ಅತ್ಯಾಧುನಿಕವಾಗಿದ್ದು, ಬಜೆಟ್ ಬೆಲೆಯಲ್ಲಿಯೂ ಖರೀದಿಗೆ ಸಿಗುತ್ತದೆ. ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಆಸ್ತಾ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಒಳಗೊಂಡಿದೆ. ಸದ್ಯ, ಈ ಕಾರಿನ ಹೊಚ್ಚ ಹೊಸ ರೂಪಾಂತರವನ್ನು ಕೂಡ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಐ20 ಹ್ಯಾಚ್‌ಬ್ಯಾಕ್‌ನ ಹೊಚ್ಚ ಹೊಸ ರೂಪಾಂತರ ಮ್ಯಾಗ್ನಾ ಎಕ್ಸಿಕ್ಯುಟಿವ್ (Magna Executive) ಮಾರಾಟಕ್ಕೆ ಬಂದಿದೆ. ಇದು ಗರಿಷ್ಠ ಶ್ರೇಣಿ ರೂಪಾಂತರ (ಟಾಪ್ ಎಂಡ್ ವೇರಿಯೆಂಟ್) 'ಸ್ಪೋರ್ಟ್ಜ್'ಗೆ ಹೋಲಿಕೆ ಮಾಡಿದರೆ ಹಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದಿದೆ. ಈ ಕಾರು ರೂ.7.51 ಲಕ್ಷ (ಎಕ್ಸ್-ಶೋರೂಂ - ನವದೆಹಲಿ) ಬೆಲೆಯನ್ನು ಹೊಂದಿದೆ.

ನೂತನ ಹ್ಯುಂಡೈ ಐ20 ಮ್ಯಾಗ್ನಾ ಎಕ್ಸಿಕ್ಯುಟಿವ್ ರೂಪಾಂತರ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಬಹುಮುಖ್ಯವಾಗಿ ಪುಶ್ ಬಟನ್ ಸ್ಟಾರ್ಟ್, ಸ್ಮಾರ್ಟ್ ಕೀ, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು 7-ಸ್ಪೀಕರ್ ಬೋಸ್ ಸ್ಟೀರಿಯೋ ಸಿಸ್ಟಮ್‌ನ್ನು ಹೊಂದಿದೆ. ಎಕ್ಸ್-ಶೋರೂಂ ದರದೊಂದಿಗೆ ರೂ.15 ಸಾವಿರವನ್ನು ಪಾವತಿಸಿದರೆ, 10 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಮತ್ತು ರೇರ್ ಕ್ಯಾಮೆರಾದಂತಹ ವೈಶಿಷ್ಟ್ಯಗಳು ಸಹ ಲಭ್ಯವಾಗಲಿವೆ.
ಈ ಹ್ಯುಂಡೈ ಐ20 ಮ್ಯಾಗ್ನಾ ಎಕ್ಸಿಕ್ಯುಟಿವ್ ರೂಪಾಂತರ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಿಕ್ - ಸ್ಟೆಬಿಲಿಟಿ ಕಂಟ್ರೋಲ್), ವಿಎಸ್ಎಂ (ವೆಹಿಕಲ್ - ಸ್ಟೆಬಿಲಿಟಿ ಮ್ಯಾನೇಜ್ಮೆಂಟ್) ಸೇರಿದಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಐ20 ಮ್ಯಾಗ್ನಾ ಎಕ್ಸಿಕ್ಯುಟಿವ್ ರೂಪಾಂತರ ಬೆಲೆಗೆ ತಕ್ಕಂತೆ ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 82 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 114.7 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್/ ಸಿವಿಟಿ ಗೇರ್‌ಬಾಕ್ಸ್‌ನ್ನು ಪಡೆದಿದೆ.
ನೂತನ ಹ್ಯುಂಡೈ ಐ20 ಮ್ಯಾಗ್ನಾ ಎಕ್ಸಿಕ್ಯುಟಿವ್ ರೂಪಾಂತರವು 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ನಡೆಬಹುದು. ವಾರಾಂತ್ಯ ಹಾಗೂ ರಜಾದಿಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು 311 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಒಟ್ಟಾರೆಯಾಗಿ, ಹೊಸ ಹ್ಯುಂಡೈ ಐ20 ಮ್ಯಾಗ್ನಾ ಎಕ್ಸಿಕ್ಯುಟಿವ್ ರೂಪಾಂತರ ಬಿಡುಗಡೆಯಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ತುಂಬಾ ಚೆನ್ನಾಗಿದ್ದು, ಕೈಗೆಟುಕುವ ಬೆಲೆಯಲ್ಲಿ ಕೂಡ ಖರೀದಿಗೆ ದೊರೆಯುತ್ತದೆ. ಮುಂಬರುವ ದಿನಗಳಲ್ಲಿ ಈ ನೂತನ ಕಾರಿಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








