ಭಾರೀ ವೇಗದಲ್ಲಿ ಮುನ್ನುಗ್ಗುತ್ತಿದೆ ಹ್ಯುಂಡೈ: ಆದರೆ, ಈ ಪ್ರಖ್ಯಾತ ಕಾರನ್ನು ಖರೀದಿಸಲು ಗ್ರಾಹಕರ ಹಿಂದೇಟು!
ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಳಿಕ ಎರಡನೇ ಸ್ಥಾನದಲ್ಲಿದೆ. ಸ್ವದೇಶಿ ವಾಹನ ತಯಾರಕರ ಕಂಪನಿಗಳಾದ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರಾಗಳನ್ನು ಕೂಡ ಹಿಂದಿಕ್ಕಿದೆ. ಕಳೆದ ತಿಂಗಳು (ಜನವರಿ - 2025) ಹ್ಯುಂಡೈ ಕಂಪನಿಯು ಒಟ್ಟು 59,858 ಕಾರುಗಳನ್ನು ಮಾರಾಟಗೊಳಿಸಿದೆ. 2024ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 52,906 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಶೇಕಡ 12.85% ಪ್ರಗತಿಯಾಗಿದೆ.
ಹ್ಯುಂಡೈ ಕಂಪನಿಯು ನಿರಂತರವಾದ ಬೆಳವಣಿಗೆ ಸಾಧಿಸುತ್ತಿದ್ದರೂ ಈ ಕಾರಿನ ಮಾರಾಟವು ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಹೋದ ತಿಂಗಳು 16 ಯುನಿಟ್ ಐಯೋನಿಕ್ 5 (Ioniq 5) ಕಾರುಗಳನ್ನು ಮಾರಾಟಗೊಳಿಸಲು ಮಾತ್ರ ಕಂಪನಿಯು ಯಶಸ್ವಿಯಾಗಿದೆ. 2024ರ ಜನವರಿ ತಿಂಗಳಲ್ಲಿ ಮಾರಾಟ ಮಾಡಲಾದ 95 ಯುನಿಟ್‌ಗಳಿಗೆ ಹೋಲಿಸಿದರೆ ಮಾರಾಟ ಪ್ರಮಾಣ ಶೇಕಡ 83% ಕುಸಿತವಾಗಿದೆ.

ಇದು ಮಾತ್ರವಲ್ಲದೆ, ತಿಂಗಳ ಮಾರಾಟ ಅಂಕಿ ಸಂಖ್ಯೆಯು ಇಳಿಮುಖವಾಗಿದೆ. 2024ರ ಡಿಸೆಂಬರ್‌ನಲ್ಲಿ ಮಾರಾಟಗೊಳಿಸಿದ 24 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ಶೇಕಡ 33.33% ಕಡಿಮೆಯಾಗಿದೆ. ಜೊತೆಗೆ ನವೆಂಬರ್‌ನಲ್ಲಿ 22 ಯುನಿಟ್, ಅಕ್ಟೋಬರ್‌ನಲ್ಲಿ 32 ಯುನಿಟ್, ಸೆಪ್ಟೆಂಬರ್‌ನಲ್ಲಿ 31 ಯುನಿಟ್ ಹಾಗೂ ಆಗಸ್ಟ್ ತಿಂಗಳಲ್ಲಿ 40 ಯುನಿಟ್ ಐಯೋನಿಕ್ ಕಾರುಗಳನ್ನು ಮಾತ್ರ ಮಾರಾಟ ಮಾಡಲಾಗಿದೆ.
ಹ್ಯುಂಡೈ ಐಯೋನಿಕ್ 5 (Hyundai IONIQ 5) ವಿಶೇಷತೆಗಳೇನು: ಇದು ಪ್ರೀಮಿಯಂ ಎಲೆಕ್ಟ್ರಿಕ್ ಕಾರು ಎಂದು ಹೆಸರುವಾಸಿಯಾಗಿದೆ. ರೂ.46.05 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಗ್ರಾವಿಟಿ ಗೋಲ್ಡ್ ಮ್ಯಾಟ್, ಆಪ್ಟಿಕ್ ವೈಟ್, ಮಿಡ್‌ನೈಟ್ ಬ್ಲ್ಯಾಕ್ ಪರ್ಲ್ ಹಾಗೂ ಟೈಟಾನ್ ಗ್ರೇ ಎಂಬ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಖರೀದಿಗೆ ದೊರೆಯುತ್ತದೆ.

ಈ ಎಲೆಕ್ಟ್ರಿಕ್ ಕಾರು 72.6 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. 217 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 350 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ಟೆಕ್ನಾಲಜಿಯನ್ನು ಒಳಗೊಂಡಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 631 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.
ನೂತನ ಹ್ಯುಂಡೈ ಐಯೋನಿಕ್ 5 ಕಾರಿನಲ್ಲಿ ಐದು ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 527 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. 12.3-ಇಂಚಿನ ಇನ್ಫೋಟೈನ್‌ಮೆಂಟ್ & ಡ್ರೈವರ್ ಡಿಸ್‌ಪ್ಲೇಗಳು, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್ ಹಾಗೂ ಡುಯಲ್-ಜೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ ಐಯೋನಿಕ್ 5 ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಈ ಕಾರಿಗೆ ಕಿಯಾ ಇವಿ6, ಬಿವೈಡಿ ಸೀಲ್, ವೋಲ್ವೋ ಎಕ್ಸ್‌ಸಿ40 ರೀಚಾರ್ಜ್ ಮತ್ತು ಬಿಎಂಡಬ್ಲ್ಯೂ ಐ4 ಮಾಡೆಲ್‌ಗಳು ಪ್ರಬಲವಾದ ಎದುರಾಳಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








