Hyundai: ಹ್ಯುಂಡೈ ಕಾರುಗಳಿಗೆ ಸಖತ್ ಡಿಮ್ಯಾಂಡ್.. 1 ತಿಂಗಳಲ್ಲಿಯೇ 7.89 ಲಕ್ಷದ ಈ ಹೊಸ SUVಗೆ ಭಾರೀ ಬುಕ್ಕಿಂಗ್!
ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India), ಜನಪ್ರಿಯ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈ ನವೆಂಬರ್ ತಿಂಗಳಲ್ಲೂ ಕಂಪನಿಯ ಕಾರುಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಒಟ್ಟು 66,840 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 61,252 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯಲ್ಲಿ ವಿಶ್ಲೇಷಿಸಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 9.12% ಪ್ರಗತಿಯಾಗಿದೆ.
ಇದೇ ನವೆಂಬರ್‌ನಲ್ಲಿ ಹುಂಡೈ ಕಾರುಗಳ ಮಾರಾಟ ಸಂಖ್ಯೆಯು ಈ ಪರಿಪ್ರಮಾಣದಲ್ಲಿ ಅಧಿಕಗೊಳ್ಳಲು ನಾನಾ ಕಾರಣಗಳಿವೆ. ಬಹುಮುಖ್ಯವಾಗಿ ಸೆಪ್ಟೆಂಬರ್ 22 ರಿಂದ ಜಿಎಸ್‌ಟಿ ಪರಿಷ್ಕರಣೆಗೊಂಡಿದೆ. ಕಂಪನಿಯ ಕಾರುಗಳ ಬೆಲೆಯು ಇಳಿಕೆಯಾಗಿದೆ. ಜೊತೆಗೆ ಕ್ರೆಟಾ ಹಾಗೂ ವೆನ್ಯೂ ಎಸ್‌ಯುವಿಗಳನ್ನು ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಕೊಂಡುಕೊಂಡಿದ್ದಾರೆ. ಹೀಗಾಗಿ, ಮಾರಾಟವು ಹೆಚ್ಚಳಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ.

ನೂತನ ಹ್ಯುಂಡೈ ವೆನ್ಯೂ (Hyundai Venue) ಕಾರಿಗೆ ವ್ಯಾಪಕ ಬೇಡಿಕೆ:
ನವೆಂಬರ್ 4 ರಂದು ಹೊಸ ತಲೆಮಾರಿನ 'ಹ್ಯುಂಡೈ ವೆನ್ಯೂ' ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿತ್ತು. ಸದ್ಯ, ಈ ಕಾರಿಗಾಗಿ ಖರೀದಿದಾರರು ಮುಗಿಬಿದ್ದಿದ್ದಾರೆ. 1 ತಿಂಗಳು ಕಳೆಯುವ ಮೊದಲೇ, 32,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅತಿ ಶೀಘ್ರದಲ್ಲೇ ವಿತರಣೆ ಶುರುವಾಗಲಿದೆ.
ಹ್ಯುಂಡೈ ವೆನ್ಯೂ ವಿಶೇಷತೆಗಳೇನು: ಈ ಎಸ್‌ಯುವಿಯು ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಕನಿಷ್ಠ ರೂ.7.89 ಲಕ್ಷ ಹಾಗೂ ಗರಿಷ್ಠ ರೂ.15.48 ಲಕ್ಷ (ಎಕ್ಸ್-ಶೋರೂಂ- ಬೆಂಗಳೂರು) ದರವನ್ನು ಪಡೆದಿದೆ. ಹೆಚ್ಎಕ್ಸ್ 2, ಹೆಚ್ಎಕ್ಸ್ 4, ಹೆಚ್ಎಕ್ಸ್ 5 ಹಾಗೂ ಹೆಚ್ಎಕ್ಸ್ 6 ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ಇದು ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ 17 ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಡ್ರ್ಯಾಗನ್ ರೆಡ್, ಅಬಿಸ್ ಬ್ಲ್ಯಾಕ್, ಟೈಟಾನ್ ಗ್ರೇ, ಮಿಸ್ಟಿಕ್ ಸಫೈರ್, ಅಟ್ಲಾಸ್ ವೈಟ್ ಹಾಗೂ ಹ್ಯಾಜೆಲ್ ಬ್ಲೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 3,995 ಮಿ.ಮೀ ಉದ್ದ, 1,800 ಮಿ.ಮೀ ಅಗಲ ಮತ್ತು 1,665 ಮಿ.ಮೀ ಎತ್ತರವಿದೆ. 170 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,520 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.
ಈ ಕಾರು 5 ಆಸನಗಳನ್ನು ಒಳಗೊಂಡಿದೆ. ಪ್ರಯಾಣಿಕರು ದೂರದ ಊರುಗಳಿಗೆ ಸುಲಭವಾಗಿ ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 375 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.
ಹೊಸ 'ಹ್ಯುಂಡೈ ವೆನ್ಯೂ' ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಹೊಂದಿದೆ. 1.2-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀ. ಡಿಸೇಲ್ ಹಾಗೂ 1.0-ಲೀ. ಟರ್ಬೊ ಪೆಟೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ (ಡುಯಲ್ - ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. 17.9 ರಿಂದ 20.99 ಕಿ.ಮೀವರೆಗೆ ನೀಡುತ್ತದೆ.
ಇದರ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ - ಡ್ರೈವರ್ ಡಿಸ್‌ಪ್ಲೇಗಾಗಿ 12.3 ಇಂಚಿನ ಡುಯಲ್ ಸ್ಕ್ರೀನ್‌ಗಳು, 8-ಸ್ಪೀಕರ್ ಬೋಸ್ ಮ್ಯೂಸಿಕ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್),ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.


Click it and Unblock the Notifications








