Hyundai: 7.89 ಲಕ್ಷ.. ಹೊಸ ಹ್ಯುಂಡೈ ಎಸ್‌ಯುವಿಗೆ ಹೆಚ್ಚಾಯ್ತು ಕ್ರೇಜ್.. ಕೇವಲ 1 ತಿಂಗಳಲ್ಲಿ 11 ಸಾವಿರ ಕಾರುಗಳ ವಿತರಣೆ!
ನವೆಂಬರ್ 4 ರಂದು ಎರಡನೇ ತಲೆಮಾರಿನ ಹ್ಯುಂಡೈ ವೆನ್ಯೂ (Hyundai Venue) ಕಾರನ್ನು ಬಿಡುಗಡೆಗೊಳಿಸಲಾಗಿತ್ತು. ಇದೊಂದು ಎಸ್‌ಯುವಿಯಾಗಿದೆ. ಗ್ರಾಹಕರು ನಾ ಮುಂದು - ತಾ ಮುಂದು ಎಂಬಂತೆ ಕೊಂಡುಕೊಳ್ಳುತ್ತಿದ್ದಾರೆ. ಈ ಕಾರು ಮಾರಾಟಕ್ಕೆ ಬಂದ 1 ತಿಂಗಳಲ್ಲಿ 11,645 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 9,754 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 19% ಪ್ರಗತಿಯಾಗಿದೆ.
ನೂತನ 'ಹ್ಯುಂಡೈ ವೆನ್ಯೂ' ಎಸ್‌ಯುವಿಯು 32,000ಕ್ಕೂ ಅಧಿಕ ಸಂಖ್ಯೆಯಲ್ಲಿ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ. ರೂ.7.89 ಲಕ್ಷದಿಂದ ರೂ.15.48 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ಖರೀದಿ ದೊರೆಯುತ್ತದೆ. ಹೆಚ್ಎಕ್ಸ್ 2, ಹೆಚ್ಎಕ್ಸ್ 4, ಹೆಚ್ಎಕ್ಸ್ 5 ಮತ್ತು ಹೆಚ್ಎಕ್ಸ್ 6 ಎಂಬ ರೂಪಾಂತರಗಳನ್ನು ಹೊಂದಿದೆ.

ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು 17-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ, ಡ್ರ್ಯಾಗನ್ ರೆಡ್, ಹ್ಯಾಝೆಲ್ ಬ್ಲೂ ಹಾಗೂ ಮಿಸ್ಟಿಕ್ ಸಫಿರ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಇದು ಹೆಚ್ಚು ವಿಶಾಲವಾಗಿದೆ. 3,995 ಮಿ.ಮೀ ಉದ್ದ, 1,800 ಮಿ.ಮೀ ಅಗಲ ಹಾಗೂ 1,665 ಮಿ.ಮೀ ಎತ್ತರವಿದೆ. ಜೊತೆಗೆ 170 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,520 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 1,251 ಕೆಜಿ ತೂಕವಿದೆ.
ಹೊಸ 'ಹ್ಯುಂಡೈ ವೆನ್ಯೂ' ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. ಇದರ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 83 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 114.7 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದೆ.
ಇನ್ನೊಂದು 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 120 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 172 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ಹೊಂದಿದೆ.
ಮತ್ತೊಂದು 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್, 116 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 250 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಈ ಕಾರು 17.9 ರಿಂದ 20.99 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ.
ನೂತನ 'ಹ್ಯುಂಡೈ ವೆನ್ಯೂ' 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ. ಪ್ರಯಾಣಿಕರು ಸುಲಭವಾಗಿ ಸಂಚರಿಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 375 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ - ಡ್ರೈವರ್ ಡಿಸ್‌ಪ್ಲೇಗಾಗಿ 12.3 ಇಂಚಿನ ಡುಯಲ್ ಸ್ಕ್ರೀನ್‌ಗಳು, 8 ಸ್ಪೀಕರ್ ಬೋಸ್ ಮ್ಯೂಸಿಕ್ ಸಿಸ್ಟಮ್ ಹಾಗೂ ಸನ್‌ರೂಫ್ ಸೇರಿದಂತೆ ನಾನಾ ಬಗೆಯ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್),ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ. ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಟಾಟಾ ನೆಕ್ಸಾನ್, ಕಿಯಾ ಸೋನೆಟ್ ಹಾಗೂ ಮಾರುತಿ ಸುಜುಕಿ ಬ್ರೆಜಾಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








