ಭಾರತದಲ್ಲಿ ಯಾರಿಗೂ ಬೇಡ.. ಆದ್ರೆ ನಮ್ಮಲ್ಲೇ ತಯಾರಾಗುವ ಇದೇ ಎಸ್‌ಯುವಿಗೆ ಜಪಾನ್‌ನಲ್ಲಿ 50,000 ಬುಕ್ಕಿಂಗ್!
ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಅತ್ಯುತ್ತಮ ಆಫ್-ರೊಡ್ ಎಸ್‌ಯುವಿಯಾಗಿದೆ. ಆದರೂ ದೇಶೀಯ ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಈ ಕಾರು ಮಾರಾಟವಾಗುತ್ತಿಲ್ಲ.. ವಿದೇಶದಲ್ಲಿ ಮಾತ್ರ ಈ ಮೇಡ್ ಇನ್ ಇಂಡಿಯಾ 'ಜಿಮ್ನಿ'ಗೆ ಭಾರೀ ಬೇಡಿಕೆಯಿದ್ದು, ಅಲ್ಲಿನ ಗ್ರಾಹಕರು ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಜನವರಿ 30ರಂದು ಮಾರುತಿ ಸುಜುಕಿ ಮಾತೃ ಸಂಸ್ಥೆ 'ಸುಜುಕಿ' ಇದೇ 5-ಡೋರ್ ಜಿಮ್ನಿಯನ್ನು ಜಪಾನ್ ಮಾರುಕಟ್ಟೆಯಲ್ಲಿ ಜಿಮ್ನಿ ನೊಮೇಡ್ (Jimny Nomade) ಹೆಸರಿನಲ್ಲಿ ಪರಿಚಯಿಸಿದೆ.
ಈ ನೂತನ 'ಸುಜುಕಿ ಜಿಮ್ನಿ ನೊಮೇಡ್' ಎಸ್‌ಯುವಿಗಳನ್ನು ಭಾರತದ ಹರಿಯಾಣದಲ್ಲಿರುವ ಮಾರುತಿ ಸುಜುಕಿಯ ಉತ್ಪಾದನಾ ಘಟಕದಲ್ಲಿ ತಯಾರಿಸಿ, ಜಪಾನ್‌ಗೆ ರಫ್ತು ಮಾಡಲಾಗುತ್ತದೆ. ಸುಜುಕಿ ಕಂಪನಿಯು ಹೊಸ ಜಿಮ್ನಿ ನೊಮೇಡ್ ಕಾರಿಗಾಗಿ ಬುಕ್ಕಿಂಗ್ ಶುರು ಮಾಡಿದ್ದು, ಕೇವಲ 4 ದಿನಗಳಲ್ಲಿ 50,000 ಆರ್ಡರ್‌ಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಖರೀದಿದಾರರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ, ಈ ಎಸ್‌ಯುವಿಗಾಗಿ ಬುಕ್ಕಿಂಗ್ ತೆಗೆದುಕೊಳ್ಳುವ ಪ್ರಕ್ರಿಯೆಯನ್ನೇ ಕಂಪನಿಯು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಎಲ್ಲವು ಅಂದುಕೊಂಡಂತೆ ನಡೆದರೆ, ಜಪಾನ್‌ನಲ್ಲಿ ಏಪ್ರಿಲ್ 3ರಿಂದ ಹೊಸ 'ಸುಜುಕಿ ಜಿಮ್ನಿ ನೊಮೇಡ್ (Suzuki Jimny Nomade) ಎಸ್‌ಯುವಿಗಳ ವಿತರಣೆಗಳು ಕೂಡ ಆರಂಭವಾಲಿದೆ. ಅಲ್ಲಿ ಈ ಕಾರು, 26,51,000 ಯೆನ್‌ನಿಂದ 27,50,000 ಯೆನ್ (ಭಾರತದ ರೂಪಾಯಿ 14.86 ಲಕ್ಷದಿಂದ 15.41 ಲಕ್ಷ) ಬೆಲೆಯನ್ನು ಹೊಂದಿದೆ.
ಈಗಾಗಲೇ, 5-ಡೋರ್ ಜಿಮ್ನಿಗೆ ಆಸ್ಟ್ರೇಲಿಯಾ, ಮೆಕ್ಸಿಕೊ ಹಾಗೂ ದಕ್ಷಿಣ ಆಫ್ರಿಕಾದಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಯಾರು ಊಹಿಸದಷ್ಟು ಬೇಡಿಕೆ ಸೃಷ್ಟಿಯಾಗುತ್ತಿದೆ. ವಿದೇಶದಲ್ಲಿ ಮಾರಾಟವಾಗುತ್ತಿರುವ ಜಿಮ್ನಿ ಮಾಡೆಲ್‌ಗಳು ಹೆಚ್ಚು-ಕಮ್ಮಿ ಭಾರತದಲ್ಲಿ ಖರೀದಿಗೆ ದೊರೆಯುವ ಜಿಮ್ನಿಯ ವಿನ್ಯಾಸ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಕೆಲವೊಂದು ಸಣ್ಣ-ಪುಟ್ಟ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾತ್ರ ಪಡೆದುಕೊಂಡಿವೆ.

ಭಾರತದಲ್ಲಿ ಮಾರಾಟವಾಗುವ ಮಾರುತಿ ಜಿಮ್ನಿ ವಿಶೇಷತೆಗಳೇನು: ಈ ಎಸ್‌ಯುವಿ ಕನಿಷ್ಠ ರೂ.12.76 ಲಕ್ಷ ಮತ್ತು ಗರಿಷ್ಠ ರೂ.14.95 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ. ಜಿಟಾ ಮತ್ತು ಆಲ್ಪಾ ಎಂಬ ಎರಡು ರೂಪಾಂತರಗಳೊಂದಿಗೂ (ವೇರಿಯೆಂಟ್) ಲಭ್ಯವಿದೆ. ಇದರೊಟ್ಟಿಗೆ 4 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಓಡಾಟ ನಡೆಸಬಹುದು.
ಈ ಎಸ್‌ಯುವಿ, 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 105 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 134 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್/ 4-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದ್ದು, 16 ರಿಂದ 17 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡುತ್ತದೆ.

ಹೊಚ್ಚ ಹೊಸ ಜಿಮ್ನಿ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (9-ಇಂಚು), ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 4-ಸ್ಪೀಕರ್‌ಗಳು, ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ರೇರ್ ವ್ಯೂ ಕ್ಯಾಮೆರಾವನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications