ಶ್ರೀಮಂತರು ತೆಗೆದುಕೊಳ್ಳುವ ರೋಲ್ಸ್ ರಾಯ್ಸ್, ಲ್ಯಾಂಡ್ ರೋವರ್ ಕಾರುಗಳ ಬೆಲೆ ಭಾರೀ ಇಳಿಕೆಯಾಗಲಿದೆ.. ಹೇಗೆ?
ಭಾರತ ಹಾಗೂ ಬ್ರಿಟನ್ ದೇಶಗಳು ಸಮಗ್ರ ಆರ್ಥಿಕ & ವ್ಯಾಪಾರ ಒಡಂಬಡಿಕೆಗೆ (ಸಿಇಟಿಎ) ಸಹಿ ಹಾಕಿವೆ. ಲಂಡನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಕೀರ್ ಸ್ಟಾರ್ಮರ್ ಮುಂದಾಳತ್ವದಲ್ಲಿ ಎರಡು ದೇಶಗಳ ವಾಣಿಜ್ಯ ಸಚಿವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಸಿಇಟಿಎ ಜಾರಿಯಾಗಲು ಭಾರತದ ಸಚಿವ ಸಂಪುಟ ಹಾಗೂ ಬ್ರಿಟನ್ ಸಂಸತ್ತಿನ ಒಪ್ಪಿಗೆ ಬೇಕಾಗುತ್ತದೆ. ಈ ಒಡಂಬಡಿಕೆಯು ವಾಹನೋದ್ಯಮದ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡಲಿದೆ. ಬ್ರಿಟನ್‌ನಿಂದ ಭಾರತಕ್ಕೆ ಆಮದಾಗುವ ಕಾರುಗಳ ಮೇಲಿನ ಸುಂಕ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಲಿದ್ದು, ಅವುಗಳ ಬೆಲೆಯು ಇಳಿಕೆಯಾಗಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಬ್ರಿಟನ್ ಐಷಾರಾಮಿ ಕಾರು ತಯಾರಕ ಕಂಪನಿಗಳಿಗೆ ತವರೂರಾಗಿದೆ. ಇಲ್ಲಿಂದಲೇ ಲ್ಯಾಂಡ್ ರೋವರ್, ಜಾಗ್ವಾರ್, ರೋಲ್ಸ್ ರಾಯ್ಸ್, ಬೆಂಟ್ಲಿ, ಆಸ್ಟನ್ ಮಾರ್ಟಿನ್, ಲೋಟಸ್ ಹಾಗೂ ಮೆಕ್ಲಾರೆನ್‌ನಂತಹ ಕಂಪನಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ಭಾರತ ಸೇರಿದಂತೆ ಹತ್ತಾರು ದೇಶಗಳಲ್ಲಿ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿವೆ.

ದೇಶೀಯವಾಗಿ ದಕ್ಷಿಣ ಕೊರಿಯಾ (ಹ್ಯುಂಡೈ, ಕಿಯಾ) ಹಾಗೂ ಜಪಾನ್ (ಟೊಯೊಟಾ, ಮಾರುತಿ ಸುಜುಕಿ) ಕಂಪನಿಗಳು ಮಾರಾಟಗೊಳಿಸುವ ಕಾರುಗಳಿಗೆ ಹೋಲಿಕೆ ಮಾಡಿದರೆ, ಬ್ರಿಟನ್‌ನ ಕಾರುಗಳಿಗೆ ಹೇಳಿಕೊಳ್ಳುವಷ್ಟು ಬೇಡಿಕೆಯಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಬ್ರಿಟನ್ ಕಂಪನಿಗಳು 2025ರ ಹಣಕಾಸು ವರ್ಷದಲ್ಲಿ (1 ಏಪ್ರಿಲ್ 2024 ರಿಂದ 31 ಮಾರ್ಚ್ 2025) 6,500 ಯೂನಿಟ್‌ಗಳಿಗಿಂತಲೂ ಕಡಿಮೆ ಕಾರುಗಳನ್ನು ಮಾರಾಟ ಮಾಡಿವೆ.
ಈ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಡಂಬಡಿಕೆ (ಸಿಇಟಿಎ) ಜಾರಿಗೊಂಡ ಮೊದಲ ವರ್ಷ, ಬ್ರಿಟನ್‌ನಿಂದ ಭಾರತಕ್ಕೆ ಆಮದಾಗುವ 3000 ಸಿಸಿ (ಪೆಟ್ರೋಲ್) & 2500 ಸಿಸಿ (ಡೀಸೆಲ್) ಕಾರುಗಳ ಮೇಲಿನ ಸುಂಕ ಶೇ.110 ರಿಂದ ಶೇ.50ಕ್ಕೆ ಕಡಿಮೆಯಾಗಲಿದೆ. ಎರಡನೇ ವರ್ಷ ಶೇಕಡ ಶೇ.25%ಕ್ಕೆ ಇಳಿಕೆಯಾಗಲಿದೆ. ಐದನೇ ವರ್ಷಾಂತ್ಯದ ವೇಳೆಗೆ ಅದು ಶೇ.10ಕ್ಕೆ ಬರಲಿವೆ.
ಉಭಯ ದೇಶಗಳು ಗುರುವಾರ ಸಿಇಟಿಎ ಒಡಂಬಡಿಕೆಗೆ ಸಹಿಹಾಕುವ ಮೊದಲೇ, ಭಾರತದಲ್ಲಿ ಬ್ರಿಟನ್ ಕಂಪನಿ ಕಾರುಗಳಿಗೆ ಆಗುತ್ತಿದ್ದ ಬುಕ್ಕಿಂಗ್ ತೀವ್ರತರದಲ್ಲಿ ಕುಸಿತವಾಗಿದೆ. ಬಹುತೇಕ ಸಿರಿವಂತ ಗ್ರಾಹಕರು, ಆರ್ಡರ್‌ಗಳನ್ನು ರದ್ದು ಮಾಡುವಂತೆ ಶೋರೂಂಗಳಿಗೆ ಎಡತಾಕುತ್ತಿದ್ದಾರೆ. ಅಲ್ಲದೆ, ಹೊಸ ಕಾರುಗಳಿಗಾಗಿ ಬುಕ್ಕಿಂಗ್ ಮಾಡುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.
ಬ್ರಿಟನ್ ಕಂಪನಿಗಳಾದ ಜಾಗ್ವಾರ್, ರೋಲ್ಸ್ ರಾಯ್ಸ್ ಮಾರಾಟಗೊಳಿಸುವ ಪ್ರಮುಖ ಕಾರುಗಳಿವು:
ಲ್ಯಾಂಡ್ ರೋವರ್ (Land Rover): ಟಾಟಾ ಒಡೆತನದ ಈ ಕಂಪನಿಯು ದೇಶೀಯವಾಗಿ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಅವುಗಳಲ್ಲಿ ಡಿಫೆಂಡರ್ (Defender) ಪ್ರಮಖವಾಗಿದ್ದು, ರೂ.1.05 ಕೋಟಿಯಿಂದ ರೂ.2.79 ಕೋಟಿ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 2.0-ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್, 3.0-ಲೀಟರ್ ಟರ್ಬೊ ಚಾರ್ಜ್ಡ್ ಮೈಲ್ಡ್ ಹೈಬ್ರಿಡ್ (ಪೆಟ್ರೋಲ್+ ಎಲೆಕ್ಟ್ರಿಕ್) ಹಾಗೂ 4.4-ಲೀಟರ್ ವಿ8 ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಜೊತೆಗೆ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.
ರೋಲ್ಸ್ ರಾಯ್ಸ್ (Rolls Royce): ಇದು ಜನಪ್ರಿಯ ಕಂಪನಿಯಾಗಿದ್ದು, ಹಲವು ಕಾರುಗಳನ್ನು ಮಾರಾಟ ಮಾಡುತ್ತಿದೆ. ಅದರಲ್ಲೂ ಭಾರತದಲ್ಲಿ ಕುಲ್ಲಿನನ್ (Cullinan) ಕಾರನ್ನು ಶ್ರೀಮಂತ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ರೂ.10.50 ಕೋಟಿಯಿಂದ ರೂ.12.25 ಕೋಟಿ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 6.75-ಲೀಟರ್ ಟ್ವಿನ್ ಟರ್ಬೊ ಚಾರ್ಜ್ಡ್ ವಿ12 ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ.
ಒಟ್ಟಾರೆಯಾಗಿ ಭಾರತ ಮತ್ತು ಬ್ರಿಟನ್ ದೇಶಗಳು ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಡಂಬಡಿಕೆಗೆ ಸಹಿ ಹಾಕಿರುವುದು ಉತ್ತಮವಾದ ಬೆಳೆವಣಿಗೆಯಾಗಿದೆ. ಇದರಿಂದ ಆಮದು ಕಾರುಗಳ ಬೆಲೆ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಲಿದ್ದು, ಗ್ರಾಹಕರಿಗೂ ಕೂಡ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಬಹುದು.


Click it and Unblock the Notifications