Kia: ಸುರಕ್ಷತೆಯಲ್ಲಿ ಟಾಟಾಗೆ ಸವಾಲು.. 8.99 ಲಕ್ಷದ ಕಿಯಾ ಸೈರಸ್ ಎಸ್‌ಯುವಿಗೆ 5-ಸ್ಟಾರ್ ಸೇಫ್ಟಿ ರೇಟಿಂಗ್!
ಕಿಯಾ ಮೋಟಾರ್ಸ್ (Kia Motors), ಮಾರಾಟಗೊಳಿಸುತ್ತಿರುವ 'ಸೈರಸ್' ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ಗ್ರಾಹಕರ ನೆಚ್ಚಿನ ಕಾರಾಗಿದೆ. ಈ ಮಾರ್ಚ್‌ನಲ್ಲಿ 5,425 ಯುನಿಟ್ ಸೈರಸ್ ಎಸ್‌ಯುವಿಗಳನ್ನು ಮಾರಾಟ ಮಾಡಲಾಗಿದೆ. ಇದು ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಸದ್ಯ ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP) ನೂತನ 'ಕಿಯಾ ಸೈರಸ್'ನ್ನು ಅತ್ಯಂತ ಸುರಕ್ಷಿತ ಕಾರೆಂದು ತೀರ್ಮಾನಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ.
ಹೊಚ್ಚ ಹೊಸ ಕಿಯಾ ಸೈರಸ್ (Kia Syros) ಎಸ್‌ಯುವಿ, ಭಾರತ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 32ಕ್ಕೆ 30.21 ಅಂಕಗಳನ್ನು ಗಳಿಸಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 49ಕ್ಕೆ 44.42 ಅಂಕಗಳನ್ನು ಪಡೆದಿದೆ. ಈ ಮೂಲಕ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದರೊಂದಿಗೆ ಕಿಯಾ ಸೈರಸ್ ಕಾರನ್ನು ಮುಂಭಾಗವನ್ನು ತಡೆಗೋಡೆಯೊಂದಕ್ಕೆ ಡಿಕ್ಕಿಯೊಡೆಸಿ ಕೂಡ ಪರೀಕ್ಷಿಸಲಾಯಿತು. ಅದರಲ್ಲಿ 16ಕ್ಕೆ 14.21 ಅಂಕಗಳನ್ನು ಗಳಿಸುವುದಕ್ಕೆ ಸಫಲವಾಗಿದೆ. ಅದೇ ರೀತಿಯಲ್ಲಿ ಕಾರಿನ ಎರಡು ಬದಿಗಳನ್ನು ಸಹ ತಡೆಗೋಡೆಯೊಂದಕ್ಕೆ ಗುದ್ದಿಸಲಾಯಿತು. ಆ ಪರೀಕ್ಷೆಯಲ್ಲಿ 16ಕ್ಕೆ 16 ಅಂಕಗಳನ್ನು ಪಡೆದಿದೆ.
ಕಿಯಾ ಸೈರಸ್ ಎಸ್‌ಯುವಿ ಪ್ರಯಾಣಿಕರ ರಕ್ಷಣೆಗಾಗಿ ಹತ್ತಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹೆಚ್ಎಸ್ಎ (ಹಿಲ್ ಸ್ಟಾರ್ಟ್ ಅಸಿಸ್ಟ್) ವಿಎಸ್ಎಂ (ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್), ಆಟೋ ಹೋಲ್ಡ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಪ್ರಸ್ತುತ ದೇಶೀಯವಾಗಿ ಖರೀದಿಗೆ ದೊರೆಯುವ ಕಿಯಾ ಸೈರಸ್ ಕಾರು, ರೂ.8.99 ಲಕ್ಷದಿಂದ ರೂ.17.80 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ. ಹೆಚ್‌ಟಿಕೆ, ಹೆಚ್‌ಟಿಕೆ (ಒ), ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಪ್ಲಸ್ ಸೇರಿದಂತೆ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಪಡೆದಿದೆ. ಸ್ಪಾರ್ಕ್ಲಿಂಗ್ ಸಿಲ್ವರ್, ಗ್ರಾವಿಟಿ ಗ್ರೇ, ಇಂಪೀರಿಯಲ್ ಬ್ಲೂ, ಇಂಟೆನ್ಸ್ ರೆಡ್ & ಪ್ಯೂಟರ್ ಆಲಿವ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ.
ಈ ಕಾರು 1-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 17.65 ರಿಂದ 20.75 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ನೂತನ ಸೈರಸ್ ಎಸ್‌ಯುವಿ 3995 ಎಂಎಂ ಉದ್ದ, 1,800 ಎಂಎಂ ಅಗಲ ಹಾಗೂ 1,665 ಎಂಎಂ ಎತ್ತರವು ಇದೆ.

ಕಿಯಾ ಸೈರಸ್ ಕಾರಿನಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 465 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಡ್ರೈವರ್ಸ್ ಡಿಸ್‌ಪ್ಲೇಗಾಗಿ ಡುಯಲ್ ಸ್ಕ್ರೀನ್ ಸೆಟಪ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 8-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








