ಎಸ್‌ಯುವಿ, ಸೆಡಾನ್, ಎಂಪಿವಿ ವಿಭಾಗದ ಬೆಸ್ಟ್ ಕಾರುಗಳ ಪಟ್ಟಿ: ಆಯ್ಕೆ ನಿಮ್ಮದು, ಸಲಹೆ ನಮ್ಮದು!
ಭಾರತದಲ್ಲಿ ಪ್ಯಾಸೆಂಜರ್ ವಾಹನ ವಿಭಾಗಗಳಲ್ಲಿ ವಿಭಿನ್ನ ಬೆಲೆ ಶ್ರೇಣಿಗಳಲ್ಲಿ ಖರೀದಿದಾರರಿಗೆ ಹಲವು ಆಯ್ಕೆಗಳಿದ್ದು, 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಕಾರುಗಳು ಹೆಚ್ಚಾಗಿ ಮಾರಾಟ ಕಾಣುತ್ತವೆ. ಹಾಗೆಯೇ 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳವರೆಗಿನ ಕಾರುಗಳು ಅವುಗಳ ಗಾತ್ರ, ಫೀಚರ್‌ಗಳು ಮತ್ತು ಒಟ್ಟಾರೆ ಪರ್ಫಾಮೆನ್ಸ ಆಧರಿಸಿ ಬೆಲೆಗೆ ತಕ್ಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ನಿಮ್ಮ ಬಜೆಟ್ 10 ಲಕ್ಷ ರೂ.ಗಳಿಂದ 20 ಲಕ್ಷ ರೂ. (ಎಕ್ಸ್ ಶೋರೂಂ) ಆಗಿದ್ದರೇ, ಈ ಬೆಲೆಯಲ್ಲಿ ಸಿಗುವ ಅತ್ಯುತ್ತಮ ಕಾಂಪ್ಯಾಕ್ಟ್ ಎಸ್‌ಯುವಿ, ಮಧ್ಯಮ ಗಾತ್ರದ ಎಸ್‌ಯುವಿ ಮತ್ತು ಸೆಡಾನ್, ಎಂಪಿವಿಗಳ ಪಟ್ಟಿ ಇಲ್ಲಿದೆ.
ಕಿಯಾ ಸೈರಸ್: ಇತ್ತೀಚೆಗೆ ಬಿಡುಗಡೆಯಾಗಿರುವ ಕಿಯಾ ಸೈರಸ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.9 ಲಕ್ಷದಿಂದ ರೂ.17.80 ಲಕ್ಷಗಳಾಗಿದೆ. ಎರಡು ಪವರ್‌ಟ್ರೇನ್‌ನೊಂದಿಗೆ ಲಭ್ಯವಿದ್ದು, ಇದರ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 ಪಿಎಸ್ ಪವರ್ ಹಾಗೂ 172 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್ ಆಗಿದೆ. ಈ ಎಂಜಿನ್ 116 ಪಿಎಸ್ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಎಂಟಿ ಹಾಗೂ 6-ಸ್ಪೀಡ್ ಎಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಇನ್ನು ಈ ಎಸ್‍ಯುವಿಯ ಮೈಲೇಜ್ ಕುರಿತಂತೆ ಯಾವುದೇ ವಿವರಗಳನ್ನು ಕಂಪನಿಯು ಬಹಿರಂಗಪಡಿಸಿಲ್ಲ.
ಹೊಸ ಕಿಯಾ ಸೈರಸ್ ಎಸ್‌ಯುವಿಯಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಡ್ರೈವರ್ಸ್ ಡಿಸ್‌ಪ್ಲೇಗಾಗಿ 12.3-ಇಂಚಿನ ಡುಯಲ್ ಸ್ಕ್ರೀನ್ ಸೆಟಪ್, ಡುಯಲ್-ಜೋನ್ ಎಸಿ, 4-ವೇ ಪವರ್ಡ್ ಡ್ರೈವರ್ ಸೀಟ್, ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಫ್ರಂಟ್ & ರೇರ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ಅಪ್/ ಡೌನ್ ಪವರ್ ವಿಂಡೋಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಕಿಯಾ ಸೈರಸ್ ಎಸ್‌ಯುವಿಯ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತವೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಲೆವೆಲ್ - 2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ. ಹೊಸ ಸೈರಸ್ ಎಸ್‌ಯುವಿಗೆ ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಗಳಿಗೆ ನೇರ ಪ್ರತಿಸ್ಪರ್ಧಿಯಾಗಿವೆ.
ಹ್ಯುಂಡೈ ಕ್ರೆಟಾ: ಹ್ಯುಂಡೈ ಕ್ರೆಟಾಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ ವರ್ಷದಿಂದ (2015) ಯಶಸ್ವಿಯಾಗಿ ಮಧ್ಯಮ ಗಾತ್ರದ ಎಸ್‌ಯುವಿ ಕಿಂಗ್ ಎನ್ನಿಸಿಕೊಂಡಿದೆ. ಈಗ ಎರಡನೇ ತಲೆಮಾರಿನ ಕಾರು ಮಾರಾಟದಲ್ಲಿದ್ದು, ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11.11 ಲಕ್ಷದಿಂದ ರೂ.20.50 ಲಕ್ಷಗಳಾಗಿದೆ.

ಹೊಸ ಕ್ರೆಟಾ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ 1.5 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಸಹ ಹೊಂದಿದೆ. ಇದರಲ್ಲಿ 6-speed MT, CVT ಹಾಗೂ 7-speed DCT ಮತ್ತು 6-speed MT, 6-speed AT ಆಯ್ಕೆಯನ್ನು ನೀಡಲಾಗಿದೆ.
ಸುರಕ್ಷತೆಯ ವಿಷಯದಲ್ಲಿ ಈಗ ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಸೀಟ್ ಆಂಕರೇಜ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿಯನ್ನು ಒಳಗೊಂಡಿದೆ. ಹಿಂದಿನ ಸೀಟ್ 2 - ಸ್ಟೆಪ್ ರಿಕ್ಲೈನ್ ಫಂಕ್ಷನ್ ಮತ್ತು ದುಬಾರಿ ಪ್ಯಾಕೇಜ್ ಜೊತೆಗೆ, ಹೊಸ ಹುಂಡೈ CRETA ಒಳಭಾಗವು ಸೌಕರ್ಯ ಮತ್ತು ಅನುಕೂಲಕ್ಕಾಗಿ ಕ್ಯಾಬಿನ್‌ನಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ನೀಡಲಾಗಿದೆ.
ಇಂಟೀರಿಯರ್‌ನಲ್ಲಿ ಡ್ಯುಯಲ್ ಇಂಟಿಗ್ರೇಟೆಡ್ 10.25-ಇಂಚಿನ ಡಿಸ್ಪ್ಲೇಗಳನ್ನು ಒಳಗೊಂಡಿದೆ, ಒಂದು ಇನ್ಫೋಟೈನ್ಮೆಂಟ್ ಸಿಸ್ಟಮ್‌ಗಾಗಿ ಮತ್ತು ಇನ್ನೊಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ನೀಡಲಾಗಿದೆ. ಕ್ಲೈಮೆಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ಡ್ಯುಯಲ್-ಜೋನ್ AC ಯೊಂದಿಗೆ ಒದಗಿಸಲಾಗಿದೆ. ಪನಾರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 8-ಸ್ಪೀಕರ್ ಬಾಸ್ ಸೌಂಡ್ ಸಿಸ್ಟಮ್ ಅನ್ನು ನೀಡಲಾಗಿದೆ.
ಫೋಕ್ಸ್ ವ್ಯಾಗನ್ ವರ್ಟಸ್: ಎಸ್‌ಯುವಿಗಳ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ಸೆಡಾನ್ ಗಳಿಗೆ ಹೊಡೆತ ಬಿದ್ದಿದ್ದರೂ, ಫೋಕ್ಸ್ ವ್ಯಾಗನ್ ವರ್ಟಸ್ ಮಾತ್ರ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 11.56 ಲಕ್ಷದಿಂದ ರೂ. 19.40 ಲಕ್ಷಗಳಾಗಿದೆ.
ವರ್ಟಸ್ ಎರಡು ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ 1.0-ಲೀಟರ್ ಟಿಎಸ್‌ಐ (115 ಪಿಎಸ್ ಮತ್ತು 178 ಎನ್ಎಂ) ಮತ್ತು 1.5-ಲೀಟರ್ ಟಿಎಸ್‌ಐ ಇವಿಒ (150 ಪಿಎಸ್ ಮತ್ತು 250 ಎನ್ಎಂ). 1.0-ಲೀಟರ್ ಎಂಜಿನ್ 6-ಸ್ಪೀಡ್ ಎಂಟಿ ಅಥವಾ 6-ಸ್ಪೀಡ್ ಎಟಿ ಟಾರ್ಕ್ ಕನ್ವರ್ಟರ್ ಜೊತೆಗೆ ಬಂದರೆ, 1.5-ಲೀಟರ್ ಎಂಜಿನ್ 6-ಸ್ಪೀಡ್ ಎಂಟಿ ಮತ್ತು 7-ಸ್ಪೀಡ್ ಡಿಎಸ್‌ಜಿ ಆಯ್ಕೆಗಳನ್ನು ಹೊಂದಿದೆ.
ಇದು ಎಲ್ಇಡಿ ಲೈಟ್‌ಗಳು, ಮುಂಭಾಗದ ವೆಂಟಿಲೇಟೆಡ್ ಸೀಟುಗಳು, 10 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 8 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲೆಕ್ಟ್ರಿಕ್ ಸನ್ರೂಫ್ ಮತ್ತು 40 ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಗ್ಲೋಬಲ್ ಎನ್‌ಸಿಎಪಿಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಹ ಗಳಿಸಿದೆ.
ಮಾರುತಿ ಸುಜುಕಿ ಎರ್ಟಿಗಾ: ಎಂಪಿವಿ ಸೆಗ್ಮೆಂಟಿಗೆ ಬಂದಾಗ, ಮಾರುತಿ ಸುಜುಕಿ ಎರ್ಟಿಗಾದ ಪ್ರಾಬಲ್ಯವು ಜೋರಾಗಿದೆ. ಇದು 2025ರ ಆರ್ಥಿಕ ವರ್ಷದಲ್ಲಿ 1,90,974 ಯುನಿಟ್ ಕಾರುಗಳ ಮಾರಾಟದೊಂದಿಗೆ ದೇಶದಲ್ಲಿ ಹೆಚ್ಚು ಮಾರಾಟವಾದ ಎಂಪಿವಿಯಾಗಿದೆ. ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.8.84 ಲಕ್ಷದಿಂದ ರೂ.13.13 ಲಕ್ಷಗಳಾಗಿದೆ.
ಬೆಲೆಯನ್ನು ಪರಿಗಣಿಸಿ, 7-ಸೀಟರ್ ಮಾದರಿಯು 7-ಇಂಚಿನ ಸ್ಮಾರ್ಟ್ ಪ್ಲೇ ಪ್ರೊ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಎಸಿ, ಎರಡನೇ ಸಾಲಿನ ರೂಫ್-ಮೌಂಟೆಡ್ ಎಸಿ ಮತ್ತು ಬಣ್ಣದ ಟಿಎಫ್‌ಟಿಯೊಂದಿಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ವಿಶಾಲವಾದ ಕ್ಯಾಬಿನ್‌ನೊಂದಿಗೆ ಸದ್ಯ ಬೆಸ್ಟ್ ಎಂಪಿವಿ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.
ಮಾರುತಿ ಸುಜುಕಿ ಎರ್ಟಿಗಾದಲ್ಲಿ ಕೆ15 ಸಿ ಸ್ಮಾರ್ಟ್ ಹೈಬ್ರಿಡ್ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 103 ಪಿಎಸ್ ಪವರ್ ಮತ್ತು 137 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಎಂಟಿ ಅಥವಾ 6-ಸ್ಪೀಡ್ ಎಟಿಯೊಂದಿಗೆ ಬರುತ್ತದೆ. 5-ಸ್ಪೀಡ್ ಎಂಟಿಯೊಂದಿಗೆ ಸಿಎನ್‌ಜಿ ಆಯ್ಕೆ ಸಹ ಇದೆ. ಎರ್ಟಿಗಾ ಪೆಟ್ರೋಲ್ 20 ಕಿ.ಮೀ.ಗಿಂತ ಹೆಚ್ಚು ಮೈಲೇಜ್ ನೀಡಿದರೆ, ಎರ್ಟಿಗಾ ಸಿಎನ್‌ಜಿ 26 ಕಿ.ಮೀ.ಗಿಂತ ಹೆಚ್ಚು ಮೈಲೇಜ್ ನೀಡುತ್ತದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications