ಹೊಸ ಮಹೀಂದ್ರಾ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆ: ಪ್ರತಿಸ್ಪರ್ಧಿಗಳಿಗೆ ನಡುಕ ಶುರು!
ಭಾರತದ ಪ್ರಮುಖ SUV ತಯಾರಕರಾದ ಮಹೀಂದ್ರಾ, ಇಂದು ಹೊಸ 2025 ಬೊಲೆರೊ ನಿಯೋ ಫೇಸ್‌ಲಿಫ್ಟ್ ಮಾಡಲ್ ಬಿಡುಗಡೆ ಮಾಡಿದೆ. ಇದರ ಬೆಲೆ ರೂ. 8.49 ಲಕ್ಷ (ಎಕ್ಸ್ ಶೋ ರೂಂ) ದಿಂದ ಪ್ರಾರಂಭವಾಗುತ್ತದೆ. ಈ ಬಿಡುಗಡೆಯೊಂದಿಗೆ, ಬೊಲೆರೊ ಸಂಸ್ಕರಿಸಿದ ಡಿಸೈನ್, ವರ್ಧಿತ ಸೌಕರ್ಯ ಮತ್ತು ಆಧುನಿಕ ವೈಶಿಷ್ಟ್ಯಗಳೊಂದಿಗೆ ತನ್ನ ಸಾಂಪ್ರದಾಯಿಕ ಆಕರ್ಷಣೆಯನ್ನು ಮುಂದುವರೆಸಿದೆ. ಗದ್ದಲದ ಬೀದಿಗಳಿಂದ ಹಿಡಿದು ಒರಟಾದ ಗ್ರಾಮೀಣ ಭೂಪ್ರದೇಶಗಳವರೆಗೆ ವೈವಿಧ್ಯಮಯ ರಸ್ತೆಗಳಲ್ಲಿ ಮುನ್ನುಗ್ಗುವ ಈ ಎಸ್‌ಯುವಿ, ಅಸಾಧಾರಣ ಹೊಂದಾಣಿಕೆ ಮತ್ತು ಮೌಲ್ಯವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.
ಬೊಲೆರೊ ನಿಯೋ ವಿಶೇಷತೆಗಳು: ಹೊಸ ಬೊಲೆರೊ ನಿಯೋ ಲೂನಾರ್ ಗ್ರೇ ಮತ್ತು ಮೋಚಾ ಬ್ರೌನ್ ಎಂಬ ಎರಡು ಹೊಸ ಇಂಟೀರಿಯರ್ ಥೀಮ್ ಆಯ್ಕೆಗಳನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನ, ಸಮಕಾಲೀನ ಡಿಸೈನ್ ಮತ್ತು ವರ್ಧಿತ ಸೌಕರ್ಯವನ್ನು ಬಯಸುವ ಯುವ ನಗರ ಮತ್ತು ಅರೆ-ನಗರ ಖರೀದಿದಾರರ ಬೇಡಿಕೆಗಳನ್ನು ಈ ಎಸ್‌ಯುವಿ ಪೂರೈಸುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

ಹೊಸ ಬೊಲೆರೊ ನಿಯೋ ಫ್ರಂಟ್ ಫ್ಯಾಸಿಯಾವನ್ನು ಹೊಂದಿದ್ದು, ಸಿಲ್ವರ್ ಫ್ಲಾಟ್ ಅಕ್ಸೆಂಟ್‌ಗಳೊಂದಿಗೆ ಹೊಸ ಗ್ರಿಲ್ ವಿನ್ಯಾಸದಿಂದ ಹೈಲೈಟ್ ಮಾಡಲಾಗಿದೆ. ಇದು 16 ಇಂಚಿನ ಅಲಾಯ್ ವ್ಹೀಲ್ ಗಳ ಹೊಸ ಸೆಟ್ ಅನ್ನು ಸಹ ಪಡೆದಿದೆ. ಈ ಸಬ್ -4-ಮೀಟರ್ ಎಸ್‌ಯುವಿಯ ಬಾಕ್ಸಿ, ಕಠಿಣ ಸಿಲೂಯೆಟ್, ಟೈಲ್ ಗೇಟ್-ಮೌಂಟೆಡ್ ಸ್ಪೇರ್ ವೀಲ್ ಜೊತೆಗೆ ಅದರ ಒರಟಾದ ಬೊಲೆರೊ ಲುಕ್ ಹಾಗೆಯೇ ಉಳಿಸಿಕೊಂಡಿದೆ.
ಒಳಗೆ ಲೆಥೆರೆಟ್ ಮತ್ತು ವರ್ಧಿತ ಸೀಟ್ ಸೌಕರ್ಯ ನೀಡಲಾಗಿದೆ, 22.8 ಸೆಂ.ಮೀ ಇನ್ಫೋಟೈನ್ಮೆಂಟ್ ಸಿಸ್ಟಮ್, ರಿಯರ್-ವ್ಯೂ ಕ್ಯಾಮೆರಾ ಮತ್ತು ಯುಎಸ್‌ಬಿ ಸಿ-ಟೈಪ್ ಚಾರ್ಜಿಂಗ್ ಪೋರ್ಟ್ ನೀಡಲಾಗಿದೆ. ಸುಧಾರಿತ ರೈಡ್ ಮತ್ತು ಹ್ಯಾಂಡ್ಲಿಂಗ್ ತಂತ್ರಜ್ಞಾನ - ರೈಡ್‌ಫ್ಲೋ - MTV-CL ಮತ್ತು ಫ್ರೀಕ್ವೆನ್ಸಿ ಡಿಪೆಂಡೆಂಟ್ ಡ್ಯಾಂಪಿಂಗ್ (FDD) ಜೊತೆಗೆ ವರ್ಧಿತ ಸ್ಟೀರಿಂಗ್ ಪ್ರತಿಕ್ರಿಯೆ, ನಿಖರ ನಿರ್ವಹಣೆ ಮತ್ತು ಸುಧಾರಿತ ಬ್ರೇಕ್ ಡೈನಾಮಿಕ್ಸ್ ಜೊತೆಗೆ ಸುಗಮ ಸವಾರಿಗಳನ್ನು ಖಚಿತಪಡಿಸುತ್ತದೆ.
2025ರ ಬೊಲೆರೊ ನಿಯೋ 1.5 ಲೀಟರ್, 3 - ಸಿಲಿಂಡರ್ ಎಂಹಾಕ್ 100 ಡೀಸೆಲ್ ಎಂಜಿನ್ ಹೊಂದಿದ್ದು, ಇದು 100 ಬಿಹೆಚ್ ಪವರ್ ಮತ್ತು 260 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ರಿಯರ್ - ವೀಲ್ ಡ್ರೈವ್, ಲ್ಯಾಡರ್ - ಫ್ರೇಮ್ ಎಸ್‌ಯುವಿಯನ್ನು 5 - ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಮಾತ್ರ ನೀಡಲಾಗುತ್ತದೆ.
ಬೊಲೆರೊ ನಿಯೋ ಲಾಕಿಂಗ್ ಡಿಫರೆನ್ಷಿಯಲ್ ಮೂಲಕ ಕಠಿಣ ರಸ್ತೆಗಳ ಮೇಲೆ ವರ್ಧಿತ ಟ್ರಾಕ್ಷನ್‌ಗಾಗಿ ಕ್ರೂಸ್ ಕಂಟ್ರೋಲ್ ಮತ್ತು ಮಲ್ಟಿ-ಟೆರೈನ್ ತಂತ್ರಜ್ಞಾನ (MTT) ವನ್ನು ಒಳಗೊಂಡಿದೆ. ಜೀನ್ಸ್ ಬ್ಲೂ, ಕಾಂಕ್ರೀಟ್ ಗ್ರೇ ಮತ್ತು ಮೂರು ಡ್ಯುಯಲ್-ಟೋನ್ ಆಯ್ಕೆಗಳ ಜೊತೆಗೆ ಅಸ್ತಿತ್ವದಲ್ಲಿರುವ ಡೈಮಂಡ್ ವೈಟ್, ಸ್ಟೆಲ್ತ್ ಬ್ಲ್ಯಾಕ್, ಪರ್ಲ್ ವೈಟ್ ಮತ್ತು ರಾಕಿ ಬೀಜ್ ಬಣ್ಣಗಳು ಖರೀದಿಗೆ ಸಿಗುತ್ತವೆ.
ಮಹೀಂದ್ರ ಕಂಪನಿಯು ಬೊಲೆರೊ ನಿಯೋ ಫೇಸ್‌ಲಿಫ್ಟ್ ಅನ್ನು N4, N8, N10 ಮತ್ತು ಹೊಸ N11 ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ. ರೂ. 8.49 ಲಕ್ಷದಿಂದ ಬೆಲೆಗಳು ಪ್ರಾರಂಭವಾಗುತ್ತವೆ. ಹೆಚ್ಚುವರಿ ವೈಶಿಷ್ಟ್ಯಗಳ ಆಧಾರದ ಮೇಲೆ ಟಾಪ್ ವೇರಿಯೆಂಟ್‌ಗಳ ಬೆಲೆ ಬದಲಾಗುತ್ತದೆ. ಮಹೀಂದ್ರ ಬೊಲೆರೊ ನಿಯೋ ಫೇಸ್‌ಲಿಫ್ಟ್ ಈಗ ಭಾರತದಾದ್ಯಂತ ಮಹೀಂದ್ರ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ವಿತರಣೆಗಳು ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.
ಕಠಿಣತೆ, ಹೊಸ ಡಿಸೈನ್, ವರ್ಧಿತ ಸೌಕರ್ಯ ಮತ್ತು ಆಧುನಿಕ ವೈಶಿಷ್ಟ್ಯಗಳ ಪರಿಪೂರ್ಣ ಮಿಶ್ರಣದೊಂದಿಗೆ ಹೊಸ ಬೊಲೆರೊ ನಿಯೋ ನಗರ ಪರಿಸರಗಳು ಮತ್ತು ಸವಾಲಿನ ಭೂಪ್ರದೇಶಗಳಲ್ಲಿ ಸಮಾನವಾಗಿ ಮುನ್ನುಗ್ಗುವ ಪ್ರಬಲ SUV ಅನುಭವವನ್ನು ನೀಡುತ್ತದೆ ಎಂದು ಮಹೀಂದ್ರಾ ಆಟೋಮೋಟಿವ್ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಳಿನಿಕಾಂತ್ ಗೊಲ್ಲಗುಂಟ ಹೇಳಿದರು.


Click it and Unblock the Notifications








