5-ಸೀಟರ್.. ಸ್ವದೇಶಿ ನಿರ್ಮಿತ ಅಗ್ಗದ Mahindra Suv ದುಬಾರಿ ಬೆಲೆಗೆ ಆಸ್ಟ್ರೇಲಿಯಾದಲ್ಲಿ ಬಿಡುಗಡೆ, ವಿಶೇಷತೆಗಳೇನು?
ಆನಂದ್ ಮಹೀಂದ್ರಾ ಮಾಲೀಕತ್ವದ ಮಹೀಂದ್ರಾ (Mahindra) ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯವಾಗಿ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ತನ್ನದೆಯಾದ ಛಾಪನ್ನು ಮೂಡಿಸಿದೆ. ಸದ್ಯ, ಆಸ್ಟ್ರೇಲಿಯಾದಲ್ಲಿ ಸ್ವದೇಶಿ ನಿರ್ಮಿತ ಹೊಚ್ಚ ಹೊಸ ಎಕ್ಸ್‌ಯುವಿ 3ಎಕ್ಸ್ಒ (XUV 3XO) ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ. ಬನ್ನಿ, ಈ ಕಾರಿನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಎಸ್‌ಯುವಿಯನ್ನು ಎಎಕ್ಸ್5ಎಲ್ (AX5L) ಹಾಗೂ ಎಎಕ್ಸ್7ಎಲ್ (AX7L) ಎಂಬ 2 ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಪರಿಚಯಿಸಲಾಗಿದೆ. ಎಎಕ್ಸ್5ಎಲ್ ರೂಪಾಂತರ ಆಸ್ಟ್ರೇಲಿಯನ್ ಡಾಲರ್ 23,490 (ರೂ.13.18 ಲಕ್ಷ) ಹಾಗೂ ಎಎಕ್ಸ್7ಎಲ್ ರೂಪಾಂತರ ಆಸ್ಟ್ರೇಲಿಯನ್ ಡಾಲರ್ 26,490 (ರೂ.14.87 ಲಕ್ಷ) ಬೆಲೆಯನ್ನು ಹೊಂದಿದೆ.

ಈ ಹೊಸ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (Mahindra XUV 3XO) ಎಸ್‌ಯುವಿಯು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ಇದು ದೇಶೀಯವಾಗಿ ಮಾರಾಟವಾಗುವ ಎಕ್ಸ್‌ಯುವಿ 3ಎಕ್ಸ್ಒ ಕಾರಿನಂತೆಯೇ ಇದೆ. ಅತ್ಯುತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಸಿ-ಆಕಾರಕ್ಕೆ ಹೋಲಿಕೆಯಾಗಬಲ್ಲ ಡಿಆರ್‌ಎಲ್‌ಗಳು, ಕನೆಕ್ಟ್ಡ್ ಟೈಲ್ ಲ್ಯಾಂಪ್ ಬಾರ್ ಮತ್ತು ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಪಡೆದಿದೆ.
ನೂತನ ಎಕ್ಸ್‌ಯುವಿ 3ಎಕ್ಸ್ಒ ಕಾರಿನಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ಈ ಕಾರು ಎವರೆಸ್ಟ್ ವೈಟ್, ಟ್ಯಾಂಗೋ ರೆಡ್, ಗ್ಯಾಲಕ್ಸಿ ಗ್ರೇ, ಸ್ಟೆಲ್ತ್ ಬ್ಲ್ಯಾಕ್ ಮತ್ತು ಸಿಟ್ರಿನ್ ಯೆಲ್ಲೋ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. ಇದು 3990 ಎಂಎಂ ಉದ್ದ, 1821 ಎಂಎಂ ಅಗಲ ಹಾಗೂ 1647 ಎಂಎಂ ಎತ್ತರವು ಇದೆ. 2600 ಎಂಎಂ ಉದ್ದದ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಆಸ್ಟ್ರೇಲಿಯಾದಲ್ಲಿ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಎಸ್‌ಯುವಿಯನ್ನು ಕೇವಲ ಒಂದೇ ಒಂದು ಪವರ್‌ಟ್ರೇನ್ ಆಯ್ಕೆಯಲ್ಲಿ ಮಾರಾಟಕ್ಕೆ ತರಲಾಗಿದೆ. ಇದು 1.2-ಲೀಟರ್ 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 110 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 200 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ.
ಈ ಕಾರು ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ವಿಶೇಷವಾಗಿ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಡುಯಲ್ ಡಿಸ್ಪ್ಲೇಗಳು, ಡುಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ಯುಎಸ್‌ಬಿ-ಸಿ ಫಾಸ್ಟ್ ಚಾರ್ಜಿಂಗ್ ಪೋರ್ಟ್‌ಗಳು, ಪನೋರಮಿಕ್ ಸನ್‌ರೂಫ್, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಹಾಗೂ ಬ್ಲೈಂಡ್ ಸ್ಪಾಟ್ ಮಾನಿಟರ್‌ನ್ನು ಹೊಂದಿದೆ.

ಆಸ್ಟ್ರೇಲಿಯಾದಲ್ಲಿ ಪರಿಚಯಿಸಲಾಗಿರುವ ಎಕ್ಸ್‌ಯುವಿ 3ಎಕ್ಸ್ಒ ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ - ಸ್ಟೆಬಿಲಿಟಿ ಕಂಟ್ರೋಲ್), ಲೆವೆಲ್-2 (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳು ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಭಾರತದಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ವಿಶೇಷತೆಗಳೇನು:
ದೇಶೀಯ ಮಾರುಕಟ್ಟೆಯಲ್ಲಿ ಈ ಎಸ್‌ಯುವಿ ರೂ.7.99 ಲಕ್ಷದಿಂದ ರೂ.15.79 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿ ದೊರೆಯುತ್ತದೆ. 1.2-ಲೀಟರ್ ಪೆಟ್ರೋಲ್, 1.2-ಲೀಟರ್ ಟಿಜಿಡಿಐ ಟರ್ಬೊ ಪೆಟ್ರೋಲ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 17 ರಿಂದ 21 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡತ್ತದೆ. ಎಂಎಕ್ಸ್1, ಎಂಎಕ್ಸ್2, ಎಂಎಕ್ಸ್3 & ಎಎಕ್ಸ್5 ಸೇರಿದಂತೆ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಿದೆ.


Click it and Unblock the Notifications








