6.70 ಲಕ್ಷ.. 5-ಸೀಟರ್, 30 ಕಿ.ಮೀ ಮೈಲೇಜ್.. ಈ ಪ್ರಖ್ಯಾತ ಕಾರನ್ನು ಗ್ರಾಹಕರು ಖರೀದಿಸುತ್ತಿಲ್ಲ.. ಯಾಕೆ?
ಮಾರುತಿ ಸುಜುಕಿ ಬಲೆನೊ (Maruti Suzuki Baleno) ಪ್ರಖ್ಯಾತ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಅದರ ಹೊರತಾಗಿಯೂ ಮಾರಾಟ ಸಂಖ್ಯೆ ಇಳಿಮುಖವಾಗುತ್ತಿದೆ. ಈ 'ಮೇ' ತಿಂಗಳಲ್ಲೂ ಅದು ಮುಂದುವರಿದಿದ್ದು, ಒಟ್ಟು 11,618 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2024 ಇದೇ ಅವಧಿಯಲ್ಲಿ 12842 ಯುನಿಟ್‌ಗಳನ್ನು ಮಾರಲಾಗಿತ್ತು. ಅದಕ್ಕೆ ಹೋಲಿಸಿದರೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 9.53% ಕುಸಿತವಾಗಿದೆ.
ಈ ವರ್ಷದ ಮೊದಲ 4 ತಿಂಗಳಲ್ಲೂ 'ಮಾರುತಿ ಸುಜುಕಿ ಬಲೆನೊ' ಹ್ಯಾಚ್‌ಬ್ಯಾಕ್ ಮಾರಾಟ ಸಂಖ್ಯೆ ಅಷ್ಟೊಂದು ಚೆನ್ನಾಗಿರಲಿಲ್ಲ. ಇಲ್ಲಿಯೂ ಸಾಕಷ್ಟು ಏರಿಳಿತಗಳನ್ನು ಕಾಣಲಾಗಿದೆ. ಏಪ್ರಿಲ್‌ನಲ್ಲಿ 13,180 ಯುನಿಟ್, ಮಾರ್ಚ್‌ನಲ್ಲಿ 12,357 ಯುನಿಟ್, ಫೆಬ್ರವರಿಯಲ್ಲಿ 15,480 ಯುನಿಟ್ ಮತ್ತು ಜನವರಿಯಲ್ಲಿ 19,965 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

ಬಲೆನೊ ಹ್ಯಾಚ್‌ಬ್ಯಾಕ್ ಮಾರಾಟ ಸಂಖ್ಯೆ ಇಳಿಮುಖವಾಗಲು ಹಲವು ಕಾರಣಗಳಿವೆ. ಬಹುಮುಖ್ಯವಾಗಿ ಇದೇ ಕಾರಿನ ದರಕ್ಕೆ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ವಿವಿಧ ಕಂಪನಿಗಳ ಎಸ್‌ಯುವಿಗಳು ಗ್ರಾಹಕರ ಖರೀದಿಗೆ ಲಭ್ಯವಿವೆ. ಜೊತೆಗೆ ಮಾರುತಿ ಸುಜುಕಿಗೆ ಸೇರಿದ ಮತ್ತೊಂದು ಕಾರು ಫ್ರಾಂಕ್ಸ್, ನಿಧಾನವಾಗಿ ಬಲೆನೊ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದೆ. ಹೀಗಾಗಿ ಮಾರಾಟ ಪ್ರಮಾಣ ಕುಸಿತವಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಮಾರುತಿ ಸುಜುಕಿ ಬಲೆನೊ ವಿಶೇಷತೆಗಳೇನು:
ಈ ಹ್ಯಾಚ್‌ಬ್ಯಾಕ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದ್ದು, ರೂ.6.70 ಲಕ್ಷದಿಂದ ರೂ.9.92 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಸಿಗ್ಮಾ, ಡೆಲ್ಟಾ, ಜಿಟಾ ಮತ್ತು ಆಲ್ಪಾ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಹೊರಭಾಗದಲ್ಲಿ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ನೆಕ್ಸಾ ಬ್ಲೂ, ಆರ್ಕ್ಟಿಕ್ ವೈಟ್, ಗ್ರ್ಯಾಂಡ್ಯೂರ್ ಗ್ರೇ ಮತ್ತು ಸ್ಪ್ಲೆಂಡಿಡ್ ಸಿಲ್ವರ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ದೊರೆಯುತ್ತದೆ.

ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 1.2-ಲೀ. ಸಾಮರ್ಥ್ಯದ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನುಒಳಗೊಂಡಿದ್ದು, 5-ಸ್ವೀಡ್ ಮ್ಯಾನುವಲ್/ 5-ಸ್ವೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಹಾಗೆಯೇ ಗರಿಷ್ಠ ಇಂಧನ ದಕ್ಷತೆ (Fuel Efficiency) ಒದಗಿಸಲಿದ್ದು, ಯಾವ ಬೈಕ್‌ಗೂ ಕಮ್ಮಿಯಿಲ್ಲದ ರೀತಿಯಲ್ಲಿ 22 ರಿಂದ 30 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಈ ಬಲೆನೊ ಕಾರಿನಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಿದೆ. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 318 ಲೀ.ನ ಬೂಟ್ ಸ್ಪೇಸ್‌ನ್ನು ಹೊಂದಿದೆ. 37 ಲೀ. ಸಾಮರ್ಥ್ಯವಿರುವ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. ಇದರೊಂದಿಗೆ 3990 ಎಂಎಂ ಉದ್ದ, 1745 ಎಂಎಂ ಅಗಲ ಹಾಗೂ 1500 ಎಂಎಂ ಎತ್ತರವು ಇದೆ.

ಇದರ ಕ್ಯಾಬಿನ್ ವಿನ್ಯಾಸವು ತುಂಬಾ ಅಚ್ಚುಕಟ್ಟಾಗಿದೆ. ಅದಕ್ಕೆ ತಕ್ಕಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 9-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್ ಮತ್ತು ಕೀಲೆಸ್ ಎಂಟ್ರಿಯನ್ನು ಒಳಗೊಂಡಿದೆ.
ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಹಿಲ್ ಹೋಲ್ಡ್ ಅಸಿಸ್ಟ್, 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ರೇರ್ ಪಾರ್ಕಿಂಗ್ ಸೇನಾರ್ಸ್ ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ. ಇದೇ ಬಲೆನೊಗೆ ಹ್ಯುಂಡೈ ಐ20, ಟಾಟಾ ಆಲ್ಟ್ರೋಜ್, ಸಿಟ್ರಸ್ ಸಿ3 ಹಾಗೂ ಟೊಯೊಟಾ ಗ್ಲಾನ್ಜಾಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications