34 ಕಿ.ಮೀ ಮೈಲೇಜ್, 5 ಲಕ್ಷ.. ಈ Maruti Car ಕೊಳ್ಳಲು ಗ್ರಾಹಕರ ನಿರಾಸಕ್ತಿ, ಕಾರಣವೇನು?
ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಜನಮೆಚ್ಚಿದ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆದರೂ ಈ ಆಗಸ್ಟ್ ತಿಂಗಳು 'ಸೆಲೆರಿಯೊ' ಮಾರಾಟ ಸಂಖ್ಯೆ ತೀವ್ರತರದಲ್ಲಿ ಕುಸಿತವಾಗಿದೆ. ಒಟ್ಟು 1,505 ಯುನಿಟ್‌ಗಳನ್ನು ಮಾತ್ರ ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 3,181 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -53% ಇಳಿಕೆಯಾಗಿದೆ.
ಈ ಮಾರುತಿ ಸೆಲೆರಿಯೊ ಮಾರಾಟವು ಆಗಸ್ಟ್‌ನಲ್ಲಿ ಕುಸಿತವಾಗಲು ಹಲವು ಕಾರಣಗಳನ್ನು ಪಟ್ಟಿ ಮಾಡಬಹುದು. ಹೊಸ ಕಾರುಗಳ ಖರೀದಿ ಮೇಲೆ ಕೇಂದ್ರ ಸರ್ಕಾರವು 'ಜಿಎಸ್‌ಟಿ'ಯನ್ನು ಇಳಿಸಲಿದೆ ಎಂಬ ಸುಳಿವು ಗ್ರಾಹಕರಿಗೆ ಲಭ್ಯವಾಗಿತ್ತು. ಜೊತೆಗೆ ಬಹುತೇಕ ಖರೀದಿದಾರರು ಎಸ್‌ಯುವಿಗಳನ್ನು ಕೊಂಡುಕೊಳ್ಳಲು ಆಸಕ್ತಿ ತೋರಿಸುತ್ತಿರುವ ಹಿನ್ನೆಲೆ, ಸೆಲೆರಿಯೊ ಮಾರಾಟವು ಇಳಿಮುಖವಾಗಿದೆ ಎಂದು ಹೇಳಲಾಗಿದೆ.

ಮಾರುತಿ ಸುಜುಕಿ ಸೆಲೆರಿಯೊ ವಿಶೇಷತೆಗಳೇನು:
ಪ್ರಸ್ತುತ, ಇದೇ ಹ್ಯಾಚ್‌ಬ್ಯಾಕ್ ರೂ.5.64 ಲಕ್ಷದಿಂದ ರೂ.7.37 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 'ಜಿಎಸ್‌ಟಿ'ಯು ಪರಿಷ್ಕರಣೆಗೊಂಡಿದೆ. ಅದರ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದಕ್ಕೆ ಮಾರುತಿ ಸುಜುಕಿ ಕಂಪನಿಯು ತೀರ್ಮಾನಿಸಿದೆ. 'ಸೆಲೆರಿಯೊ' ಬೆಲೆಯು ರೂ.94,100 ಇಳಿಕೆಯಾಗಿದೆ. ಸೆ.22 ರಿಂದ ರೂ.4.70 ಲಕ್ಷ ಆರಂಭಿಕ ದರಕ್ಕೆ ಖರೀದಿದಾರರಿಗೆ ಲಭ್ಯವಾಗಲಿದೆ.
ಈ ಕಾರು ವಿಎಕ್ಸ್ಐ, ಎಲ್ಎಕ್ಸ್ಐ ಹಾಗೂ ಝಡ್ಎಕ್ಸ್ಐ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ. ಆತ್ಯಾಧುನಿಕವಾದ ವಿನ್ಯಾಸವನ್ನು ಪಡೆದಿದೆ. ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಟೈಲ್ ಲ್ಯಾಂಪ್‌ಗಳು ಮತ್ತು 15 ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಮೆಟಾಲಿಕ್ ಸ್ಪೀಡಿ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್ ಹಾಗೂ ಪರ್ಲ್ ಕೆಫೀನ್ ಬ್ರೌನ್ ಸೇರಿದಂತೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ.

ನೂತನ ಸೆಲೆರಿಯೊ ಕೊಂಚ ಮಟ್ಟಿಗೆ ದೊಡ್ಡ ಗಾತ್ರದಲ್ಲಿದೆ. 3,695 ಎಂಎಂ ಉದ್ದ, 1,655 ಅಗಲ ಹಾಗೂ 1,555 ಎಂಎಂ ಎತ್ತರವಿದೆ. ಜೊತೆಗಿದು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,435 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 1,260 ಕೆಜಿ ತೂಕವಿದೆ.
ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 1-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ. ರೂಪಾಂತರಗಳಿಗೆ ತಕ್ಕಂತೆ 5-ಸ್ಪೀಡ್ ಮ್ಯಾನುವಲ್ ಹಾಗೂ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಸಾಮಾನ್ಯ ಬೈಕ್‌ನಂತೆ 24 ರಿಂದ 34 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 32 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ. 150 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 15 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಈ ಕಾರು 5 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 313 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಅಡ್ಜಸ್ಟಬಲ್ ಹೆಡ್‌ರೆಸ್ಟ್‌ಗಳು, ಸೆಂಟ್ರಲ್ ಆರ್ಮ್‌ರೆಸ್ಟ್, ರೇರ್ ಎಸಿ ವೆಂಟ್‌ಗಳು, ಐಡಲ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್, ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಪವರ್ ವಿಂಡೋಗಳು, ಏರ್ ಕಂಡಿಷನರ್, ಸೆಂಟ್ರಲ್ ಲಾಕಿಂಗ್ ಮತ್ತು ಮ್ಯಾನುವಲ್ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹೊಸ ಸೆಲೆರಿಯೊ ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್ ಹೋಲ್ಡ್ ಅಸಿಸ್ಟ್, 3 ಪಾಯಿಂಟ್ ಸೀಟ್‌ಬೆಲ್ಟ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್‌ಗಳು ಹಾಗೂ ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿದೆ. ಇದಕ್ಕೆ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಹಾಗೂ ಟಾಟಾ ಟಿಯಾಗೊ ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








